
ಲಾಹೋರ್ / ಕರಾಚಿ: ದೇಹದ ತೂಕ ಮತ್ತು ನೋಟದ ಬಗ್ಗೆ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್‌ಗೆ ಒಳಗಾಗುತ್ತಿದ್ದ ಪಾಕಿಸ್ತಾನಿ ನಟಿ ಹಾಗೂ ನಿರೂಪಕಿ ವೀಣಾ ಮಲಿಕ್, ಲೈವ್ ಟೆಲಿವಿಷನ್ ಪ್ರಸಾರದ ವೇಳೆ ಕಣ್ಣೀರಿಟ್ಟಿದ್ದಾರೆ.
ತಮ್ಮ ಸ್ವಂತ ಮಾರ್ನಿಂಗ್ ಶೋ ‘ವೀಣಾ ಹೈ ನಾ’ (Veena Hai Na) ನೇರ ಪ್ರಸಾರದ ವೇಳೆ ಆಕ್ರೋಶ ವ್ಯಕ್ತಪಡಿಸಿದ 42 ವರ್ಷದ ನಟಿ, ಕ್ಯಾಮೆರಾ ಮುಂದೆಯೇ ತಮ್ಮ ಹೈ ಹೀಲ್ಸ್ ಹಾಗೂ ಮೇಕ್ಅಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.
ತಿಂಗಳುಗಟ್ಟಲೆ ತನ್ನ ಬದಲಾಗುತ್ತಿರುವ ರೂಪ ಹಾಗೂ ತೂಕದ ಬಗ್ಗೆ ಅಪಹಾಸ್ಯ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ವೀಣಾ ಮಲಿಕ್, “ನೀವು ನನ್ನ ತೂಕವನ್ನು ಮಾತ್ರ ನೋಡಿದ್ದೀರಿ, ಈಗ ನನ್ನ ಎತ್ತರ ಎಷ್ಟಿದೆ ಎಂದು ತೋರಿಸಲು ನನ್ನ ಹೀಲ್ಸ್ ತೆಗೆಯುತ್ತೇನೆ” ಎಂದು ಮೇಲಕ್ಕೆದ್ದು ಹೈ ಹೀಲ್ಸ್ ಪ್ರದರ್ಶಿಸಿದರು. ಬಳಿಕ ಆಸನಕ್ಕೆ ಮರಳಿ ಮೇಕಪ್ ತೆಗೆದರು.
ಟ್ರೋಲಿಗರಿಗೆ ನೇರ ಸವಾಲು: “ನನ್ನನ್ನು ದಪ್ಪಗಿದ್ದೇನೆ ಎಂದು ಕರೆಯಿರಿ, ಕಪ್ಪಗಿದ್ದೇನೆ ಎನ್ನಿ, ಕುರೂಪಿ ಎನ್ನಿ. ಏನೇ ಬೇಕಾದರೂ ಹೇಳಿಕೊಳ್ಳಿ. ಆದರೆ ಈ ಕಾಮೆಂಟ್‌ಗಳಿಂದ ನನ್ನ ಜೀವನಕ್ಕೇನು ನಷ್ಟವಿಲ್ಲ, ಏಕೆಂದರೆ ಈ ಜನರ ಕೊಡುಗೆ ನನ್ನ ಜೀವನದಲ್ಲಿ ಏನೂ ಇಲ್ಲ” ಎಂದು ವೀಣಾ ಮಲಿಕ್ ದಿಟ್ಟತನದಿಂದ ತಿರುಗೇಟು ನೀಡಿದ್ದಾರೆ.
ಸ್ವಾಭಾವಿಕ ಪ್ರಕ್ರಿಯೆ: ತೂಕ ಹೆಚ್ಚಾಗುವುದು ಮತ್ತು ಇಳಿಯುವುದು ಜೀವನದ ಸ್ವಾಭಾವಿಕ ಭಾಗವಾಗಿದ್ದು, ಮಹಿಳೆಯರ ದೇಹದ ಬಗ್ಗೆ ಕಾಮೆಂಟ್ ಮಾಡಲು ಜನರಿಗೆ ಯಾಕೆ ಇಷ್ಟು ಹಕ್ಕು ಅನಿಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತದೊಂದಿಗೆ ನಂಟು: ವೀಣಾ ಮಲಿಕ್ ಭಾರತೀಯ ಟೆಲಿವಿಷನ್ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದು, 2010 ರಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 4 ರ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಅಲ್ಲದೆ ಕೆಲವು ಹಿಂದಿ ಹಾಗೂ ಕನ್ನಡದ ‘ಡರ್ಟಿ ಪಿಕ್ಚರ್, ಸಿಲ್ಕ್ ಸಕ್ಕತ್ ಮಗ’ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
ವೈರಲ್ ಆದ ವೀಡಿಯೊ: ಲೈವ್ ಶೋನಲ್ಲಿ ನಟಿ ವೀಣಾ ಮಲಿಕ್ ಭಾವುಕರಾಗಿ ಮೇಕ್ಅಪ್ ತೆಗೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಆನ್‌ಲೈನ್ ಕಿರುಕುಳ ಮತ್ತು ಬಾಡಿ ಶೇಮಿಂಗ್ ವಿರುದ್ಧ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.




