
ಇಂದೋರ್: ಮನೆ ಮಾರಾಟದಿಂದ ಬಂದ 50 ಲಕ್ಷ ರೂಪಾಯಿ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ, ಸ್ವಂತ ತಂದೆ ಮತ್ತು ತಂಗಿಯನ್ನು ಕೊಲೆಗೈದ ದಾರುಣ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಮುಖ್ಯ ಆರೋಪಿ ಹರ್ಷ್ ಯಾದವ್ ಎಂಬಾತ ಅಪ್ರಾಪ್ತ ಬಾಲಕನೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದು, ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ನವೆಂಬರ್ 19 ರಂದು ಹರ್ಷ್ ಯಾದವ್ನ ತಂಗಿ ಹರ್ಷಿತಾ ಯಾದವ್ ಅವರ ಶವ ಮನೆಯಲ್ಲೇ ಪತ್ತೆಯಾಗಿದ್ದು, ಬಾಯಿಗೆ ಸ್ಕಾರ್ಫ್ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹರ್ಷ್ ಹಾಗೂ ಬಾಲಕನ ಮೇಲೆ ಸಂಶಯ ಮೂಡಿದೆ. ಇದರ ಬೆನ್ನಲ್ಲೇ ಆಟೋರಿಕ್ಷಾ ಚಾಲಕರಾಗಿದ್ದ ತಂದೆ ರಾಜು ಯಾದವ್ ಅವರ ಶವವು ಸಮೀಪದ ಪಟ್ಟಣವೊಂದರಲ್ಲಿ ಪತ್ತೆಯಾಗಿದೆ.
50 ಲಕ್ಷ ರೂ. ಆಸ್ತಿ ವಿವಾದವೇ ಕಾರಣ: ಇಂದೋರ್ನಲ್ಲಿದ್ದ ಮನೆಯೊಂದನ್ನು ಮಾರಾಟ ಮಾಡಿದ್ದ ತಂದೆ ರಾಜು ಯಾದವ್, ಬಂದಿದ್ದ 50 ಲಕ್ಷ ರೂಪಾಯಿಯಲ್ಲಿ 25 ಲಕ್ಷವನ್ನು ಮಗಳು ಹರ್ಷಿತಾಗೆ ನೀಡಿದ್ದರು. ಉಳಿದ ಹಣಕ್ಕಾಗಿ ಹರ್ಷ್ ಹಾಗೂ ತಂದೆಯ ನಡುವೆ ತೀವ್ರ ಕಲಹವಿತ್ತು.
ಒಂದರ ನಂತರ ಮತ್ತೊಂದುಕೊಲೆ: ಹಣದಾಸೆಗಾಗಿ ಹರ್ಷ್ ತನ್ನ ಅಪ್ರಾಪ್ತ ಸಹಚರನೊಂದಿಗೆ ಸೇರಿ ಮೊದಲು ತಂದೆ ರಾಜು ಯಾದವ್ ಅವರನ್ನು ಹತ್ಯೆ ಮಾಡಿ ಶವವನ್ನು ಬಿಸಾಡಿದ್ದರು. ಬಳಿಕ ಮರುದಿನ ಮನೆಯಲ್ಲಿದ್ದ ತಂಗಿ ಹರ್ಷಿತಾಳನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ತಂಗಿಯ ಶವ ಪತ್ತೆಯಾದ ಬಳಿಕ ಪೊಲೀಸರು ನಡೆಸಿದ ತಾಂತ್ರಿಕ ತನಿಖೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಕೊಲೆಗಾರರ ಕರಾಳ ಮುಖ ಬಯಲಾಗಿದೆ.
ಆರೋಪಿಗಾಗಿ ಶೋಧ: ಪ್ರಕರಣದ ಪ್ರಮುಖ ಆರೋಪಿ ಹರ್ಷ್ ಯಾದವ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಂಧನದ ಬಳಿಕ ಮತ್ತಷ್ಟು ಸ್ಪಷ್ಟ ಮಾಹಿತಿ ಹೊರಬರಲಿದೆ.




