SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ಜಿಲ್ಲೆಯಲ್ಲಿ ನೆಲ-ಜಲ ಹಾಗೂ ಪರಿಸರವನ್ನು ವೃದ್ಧಿಸಲು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿ ಕಾರ್ಯೋನ್ಮುಖರಾಗುವ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಬೇಕಿದ್ದು, ಸಂಘ ಸಂಸ್ಥೆಗಳು, ಸಾರ್ವಜನಿಕರು ಪರಿಸರದ ರಥ ಎಳೆಯಲು ಕೈ ಜೋಡಿಸಬೇಕೆಂದು ದಾವಣಗೆರೆ ಜಿಲ್ಲಾ ನೆಲ-ಜಲ ಹಾಗೂ ಪರಿಸರ ಅಂದೋಲನ ಒಕ್ಕೂಟ ಮನವಿ ಮಾಡಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಬಲ್ಲೂರು ರವಿಕುಮಾರ್ ಹಾಗೂ ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ ಜಿಲ್ಲೆಯಲ್ಲಿ 538 ಕೆರೆಗಳಿದ್ದು, ದಾವಣಗೆರೆ ತಾಲ್ಲೂಕಿನಲ್ಲಿ 53 ಕೆರೆ, ಹರಿಹರ 18 ಕೆರೆ, ಚನ್ನಗಿರಿ 279 ಕೆರೆ, ಹೊನ್ನಾಳಿ 48 ಕೆರೆ, ನ್ಯಾಮತಿ 92 ಕೆರೆ, ಜಗಳೂರು 48 ಕೆರೆ ಒಟ್ಟು ಕೆರೆಗಳಿದ್ದು ಅದರಲ್ಲಿ 243 ಕೆರೆಗಳು ಮಾತ್ರ ತುಂಬಿವೆ. ಉಳಿದ ಕೆರೆಗಳಿಗೆ ಮಳೆನೀರು ನೀರು ಬಾರದೆ ಬರುವ ರಾಜಕಾಲುವೆಗಳು ಇತರೆ ಮೂಲಗಳು ಸ್ಥಗಿತಗೊಂಡ ಪ್ರಯುಕ್ತ ಉಳಿದ ಕೆರೆಗಳು ತುಂಬಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಕೆಲವು ಕೆರೆಗಳು ನೀರನ್ನೇ ಕಾಣದೆ ಒಣಗಿವೆ.40 ಟಿಎಂಸಿ ನೀರು ಶೇಖರಣೆಯಾಗಬೇಕಿತ್ತು. ಆದರೆ 17 ಟಿಎಂಸಿ ನೀರು ತುಂಬಿದೆ. ಪ್ರತಿ ತಾಲ್ಲೂಕಿಗೆ 2ರಿಂದ 3ರಂತೆ ಹೊಸ ಕೆರೆಗಳನ್ನು ನಿರ್ಮಾಣ ಮಾಡಲು ಹೆಚ್ಚು ಒತ್ತು ಕೊಡಬೇಕಾಗಿದೆ. ದಾವಣಗೆರೆ ಸೇರಿದಂತೆ ಇತರೆ ನಗರಗಳಲ್ಲಿ ಹಾಗೂ ಗ್ರಾಮೀಣಪ್ರದೇಶಗಳಲ್ಲಿ ಹಾಕಿರುವ ಗಿಡಗಳನ್ನು ಸಂರಕ್ಷಿಸಲು, ಬೇಸಿಗೆಯಲ್ಲಿ ಹಾಕಿದ ಗಿಡಗಳಿಗೆ ನೀರು ಉಣಿಸುವ ಕೆಲಸ ತುರ್ತು ಆಗಬೇಕಾಗಿದೆ. ನೀರು ಣಿಸಿದರೆ ಮಾತ್ರ ಹಾಕಿದ ಗಿಡಗಳು ಸಂಪೂರ್ಣವಾಗಿ ಬೆಳೆದು ಮರಗಳಾಗುತ್ತವೆ ಎಂದು ತಿಳಿಸಿದರು.
ಪರಿಸರ ಮಾಲಿನ್ಯ ವಿಷಯದಲ್ಲಿ ಸ್ವಯಂ ಪ್ರೇರಿತರಾಗಿ ಜನರು ಮಾಲಿನ್ಯವನ್ನು ಕಡಿಮೆಮಾಡುವ ಉದ್ದೇಶದಿಂದ ಸೈಕಲ್ ಸವಾರರನ್ನು ಎಲೆಕ್ಟ್ರಾನಿಕ್ ಬೈಕ್ ಹಾಗೂ ಕಾಲುನಡಿಗೆಯಲ್ಲಿ ಓಡಾಡುವವರನ್ನು ಕ್ರೂಢೀಕರಿಸಿ ಪರಿಸರ ಮಾಲಿನ್ಯದ ಬಗ್ಗೆ ಹೆಚ್ಚು ಒತ್ತನ್ನು ಕೊಡಬೇಕಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಈಗಾಗಲೇ ಕಾಂಪೌಂಡ್ ಮತ್ತು ಬೋರ್ ವೆಲ್ ಇರುವಂತಹ 148 ಶಾಲೆಗಳನ್ನು ಸರ್ಕಾರದಿಂದಲೇ ಗುರುತಿಸಲಾಗಿದೆ. ಆಯಾ ಶಾಲೆಗಳಿಗೆ ತೆಂಗು, ನುಗ್ಗೆ, ಕರಿಬೇವು, ನಿಂಬೆಗಿಡಗಳನ್ನು ವಿತರಿಸಿ ಆಸಕ್ತ ಶಾಲಾ ಮಕ್ಕಳನ್ನು ಸಹ ಸಹಭಾಗಿತ್ವದಲ್ಲಿ ಹಾಗೂ ಮಹಿಳಾ ಸ್ವಸಾಯಸಂಘಗಳ ಸಂಯುಕ್ತಾಶ್ರಯದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ವಸಂತ, ಕೊಟ್ರೇಶ್, ಚಂದ್ರಶೇಖರ, ರಾಜಯೋಗಿ ಹೆಬ್ಬಾಳು ಇತರರು ಇದ್ದರು.