SUDDIKSHANA KANNADA NEWS/ DAVANAGERE/ DATE:28-11-2024
ದಾವಣಗೆರೆ: ದಾವಣಗೆರೆ ಹೊರ ವಲಯದ ಯರಗುಂಟೆಯಲ್ಲಿನ ಶ್ರೀ ಗುರು ಕರಿಬಸವೇಶ್ವರಸ್ವಾಮಿ ಗದ್ದಿಗೆಮಠದಲ್ಲಿ ನ. 29 ಮತ್ತು 30 ರಂದು ಮಹಿಳಾ ರಥೋತ್ಸವ ನಡೆಯಲಿದೆ ಎಂದು ಶ್ರೀಮಠದ ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 14 ವರ್ಷಗಳಿಂದ ಮಹಿಳೆಯರ ಮೂಲಕ ರಥೋತ್ಸವ ನಡೆಸಿ ಕೊಂಡು ಬರಲಾಗುತ್ತಿದೆ. 15 ನೇ ವರ್ಷದ ರಥೋತ್ಸವ ನ. 30ರ ಮಧ್ಯಾಹ್ನ 1 ಕ್ಕೆ ನಡೆಯಲಿದೆ. ಮಹಿಳೆಯರೇ ರಥ ಎಳೆಯುವುದು ವಿಶೇಷ. ಮಹಿಳೆಯರೇ ರಥೋತ್ಸವ ಮುಂದಾಳತ್ವ ವಹಿಸಿದ್ದಾರೆ ಎಂದು ತಿಳಿಸಿದರು.
ರಥೋತ್ಸವ ಅಂಗವಾಗಿ ನವೆಂಬರ್ 29ರ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಿಗ್ಗೆ 5ಕ್ಕೆ ಶ್ರೀ ವಿನಾಯಕಸ್ವಾಮಿ ಪೂಜೆ, ಧ್ವಜಾರೋಹಣ, 6ಕ್ಕೆ ಮಹಾಗಣಪತಿ ಪೂಜೆ, ನವಗ್ರಹ ಪೂಜೆ, ರುದ್ರಹೋಮ, ಗೋಪೂಜೆ, ಮಹಾಮಂಗಳಾರತಿ ನಂತರ
ಮಹಾಪ್ರಸಾದ ನಡೆಯಲಿದೆ ಎಂದು ತಿಳಿಸಿದರು.
ನವೆಂಬರ್ 30ರ ಬೆಳಿಗ್ಗೆ 6ಕ್ಕೆ ಶ್ರೀ ವೀರಭದ್ರಸ್ವಾಮಿ ಗುಗ್ಗಳ ಕಾರ್ಯಕ್ರಮ ನಡೆಯಲಿದೆ. 10 ಕ್ಕೆ ಧರ್ಮ ಜಾಗೃತಿ ಸಮಾರಂಭದಲ್ಲಿ ಶ್ರೀಮದ್ ಉಜ್ಜಯಿನಿಯ ಶ್ರೀ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು
ಸಾನಿಧ್ಯ ವಹಿಸುವರು. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಬಸವಜಯಚಂದ್ರ ಸ್ವಾಮೀಜಿ ಇತರರು ಭಾಗವಹಿಸುವರು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಗಾಯಿತ್ರಿ ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಜಿ.ಬಿ. ವಿನಯ್ ಕುಮಾರ್, ಎಚ್.ಸಿ. ಜಯಮ್ಮ, ಚೇತನಾ ಶಿವಕುಮಾರ್ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸೇವಾ ಸಮಿತಿಯ ಟಿ.ಆರ್. ವಿಜಯ್ ಕುಮಾರ್, ರಾಕೇಶ್ ಪಾಟೀಲ್, ಎ.ಸಿ. ಕರಿಬಸಪ್ಪ, ಎಸ್. ಸುರೇಖಾ, ಎಚ್.ಎಂ. ಸವಿತಾ, ರೇಖಾ, ಎನ್.ಎಸ್. ರಾಜು, ಸರೋಜಮ್ಮ ಇತರರು ಇದ್ದರು.