Home ದಾವಣಗೆರೆ 9ನೇ ವಯಸ್ಸಿಗೆ ಕುಟುಂಬಕ್ಕಾಗಿ ದುಡಿಮೆಗಿಳಿದ ಹುಡುಗನೀಗ ಯಶಸ್ವಿ ಅಕ್ಕಿ ಉದ್ಯಮಿ: ಧರ್ಮಸ್ಥಳದ ಶ್ರೀ ಮಂಜುನಾಥನಿಗೆ ಅಕ್ಕಿ ಸಮರ್ಪಣೆ ಹಿಂದಿದೆ ಸ್ಫೂರ್ತಿದಾಯಕ ಕಥೆ!
ದಾವಣಗೆರೆನವದೆಹಲಿಬೆಂಗಳೂರು

9ನೇ ವಯಸ್ಸಿಗೆ ಕುಟುಂಬಕ್ಕಾಗಿ ದುಡಿಮೆಗಿಳಿದ ಹುಡುಗನೀಗ ಯಶಸ್ವಿ ಅಕ್ಕಿ ಉದ್ಯಮಿ: ಧರ್ಮಸ್ಥಳದ ಶ್ರೀ ಮಂಜುನಾಥನಿಗೆ ಅಕ್ಕಿ ಸಮರ್ಪಣೆ ಹಿಂದಿದೆ ಸ್ಫೂರ್ತಿದಾಯಕ ಕಥೆ!

Share
ಧರ್ಮಸ್ಥಳ
Share

ದಾವಣಗೆರೆ: ದೇವರಿಗೆ ನೈಜ ಭಕ್ತಿಯೇ ಅತಿದೊಡ್ಡ ಕಾಣಿಕೆ. ಆ ಭಕ್ತಿಯ ಜೊತೆಗೆ ಸಮಾಜಮುಖಿ ಕಾರ್ಯವೂ ಸೇರಿದರೆ ಅದು ದೇವರ ಕೃಪೆಗೆ ಇನ್ನಷ್ಟು ಪಾತ್ರವಾಗುತ್ತದೆ. ಇಂತಹ ಅಪರೂಪದ ದೈವ ಭಕ್ತರ ಸಾಲಿನಲ್ಲಿ ನಿಲ್ಲುವವರು ಜಯಪ್ರಕಾಶ್ ಮಾಗಿ.ಇದೀಗ ಅವರು  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಶ್ರೀಕ್ಷೇತ್ರ ಶ್ರೀ ಮಂಜುನಾಥ ಸ್ವಾಮಿಗೆ ಸತತ ಆರನೇ ವರ್ಷದ ಅಕ್ಕಿ ಸಮರ್ಪಣಾ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಈ ಅಪರೂಪದ ವ್ಯಕ್ತಿತ್ವದ ಕುರಿತ ವಿಶೇಷ ಸ್ಟೋರಿ ಇದು.

ಬಾಲ್ಯ ಜೀವನ:

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮಾಗಿ ಗ್ರಾಮದ ವೀರಬಸಪ್ಪ ಮಾಗಿ ಅವರು ದಾವಣಗೆರೆಗೆ ವಲಸೆ ಬಂದವರು. ವೀರಬಸಪ್ಪ ಮಾಗಿ ಮತ್ತು ಬಸಮ್ಮ ಮಾಗಿ ದಂಪತಿ ನಾಲ್ವರು ಮಕ್ಕಳ ಪೈಕಿ ಜಯಪ್ರಕಾಶ್ ಮಾಗಿ ಮೂರನೇಯವರು. 1982ನೇ ಇಸವಿಯ ನವೆಂಬರ್ 27ರಂದು ದಾವಣಗೆರೆಯಲ್ಲಿ ಜನಿಸಿದ ಜಯಪ್ರಕಾಶ್ ಮಾಗಿ ಅವರದ್ದು ಬಾಲ್ಯ ಜೀವನ ಕಬ್ಬಿಣದ ಕಡಲೆ ಜೊತೆಗೆ ಬಡತನದ ಸಂಕಷ್ಟವಿತ್ತು. ಅಕ್ಕ ಲತಾ, ಅಣ್ಣ ಕೈಲಾಶ್ ಬಾಬು ಮಾಗಿ, ತಂಗಿ ಶಿವಲೀಲಾ. ದಾವಣಗೆರೆಯಲ್ಲಿ ಓದಿದ ಜಯಪ್ರಕಾಶ್ ಮಾಗಿ ಅವರು ಹತ್ತನೇ ತರಗತಿ ಉತ್ತೀರ್ಣರಾದರೂ ಮುಂದೆ ಓದಲು ಆಗಲಿಲ್ಲ. ಇದಕ್ಕೆ ಕಾರಣ ಮನೆಯಲ್ಲಿದ್ದ ಆರ್ಥಿಕ ಸಮಸ್ಯೆ.

ಬಡತನದ ಬೆಂಕಿಯಲ್ಲೇ…!

ವೀರಬಸಪ್ಪರು ಬಟ್ಟೆ ಅಂಗಡಿ ತೆರೆದರೂ ನಷ್ಟವಾಯ್ತು. ಲಾಟರಿ, ಹೊಟೇಲ್ ಶುರು ಮಾಡಿದರೂ ಕೈಹಿಡಿಯಲಿಲ್ಲ. ಕಿತ್ತು ತಿನ್ನುವ ಬಡತನದ ಜೊತೆಗೆ ಮಕ್ಕಳನ್ನು ಸಾಕುವ ಜವಾಬ್ದಾರಿಯಿತ್ತು. ತಂದೆ ಮತ್ತು ತಾಯಿ ಕಷ್ಟ ನೋಡಲಾಗದೇ ಓದಿನ ಜೊತೆಗೆ ಕೇವಲ 9ನೇ ವಯಸ್ಸಿಗೆ ಜಯಪ್ರಕಾಶ್ ಮಾಗಿ ಅವರು ಓದುವ ಜೊತೆಗೆ ಕೆಲಸಕ್ಕೆ ಹೋಗಲು ಶುರು ಮಾಡಿದರು. ಲಾಟರಿ ಮಾರಾಟ, ಹೊಟೇಲ್ ನಲ್ಲಿ ಕೆಲಸ ಮತ್ತು ಪತ್ರಿಕೆ ಹಂಚುವ ಕೆಲಸ ಮಾಡುತ್ತಾ ಕುಟುಂಬದ ನೆರವಿಗೆ ನಿಂತರು. ತಾಯಿ ಬಸಮ್ಮ ಮಾಗಿ ಅವರು ಬಡತನದ ನಡುವೆಯೂ ನಾಲ್ವರು ಮಕ್ಕಳ ಸಲುಹಿದರಲ್ಲದೇ, ಕಷ್ಟಪಟ್ಟು ಓದಿಸಿದರು. ಮನೆ ಮನೆಗಳಲ್ಲಿ ಮನೆಕೆಲಸ ಮಾಡುತ್ತಾ ಮಕ್ಕಳನ್ನು ಶಕ್ತಿಮೀರಿ ಬೆಳೆಸಿದ ಶ್ರೇಯ ಈ ಮಹಾತಾಯಿಗೆ ಸಲ್ಲುತ್ತದೆ.

ಈ ಕುಟುಂಬವು ದಾವಣಗೆರೆಯ ಕಾಯಿಪೇಟೆಯಲ್ಲಿ 2000 ಇಸವಿಯವರೆಗೆ ತಿಂಗಳಿಗೆ 80 ರೂಪಾಯಿಯಂತೆ ಬಾಡಿಗೆ ಮನೆಯಲ್ಲಿ ವಾಸವಿತ್ತು. ಆ ನಂತರ ದೇವರಾಜ ಅರಸ್ ಬಡಾವಣೆಗೆ ಬಂತು. ಕಷ್ಟಪಟ್ಟರೆ ಫಲ ಖಚಿತ ಎಂಬಂತೆ ತಂದೆ
ಜೊತೆಗೆ ಜಯಪ್ರಕಾಶ್ ಮಾಗಿ ಅವರು ಕಷ್ಟಪಟ್ಟು ಬೆಳೆಯುತ್ತಿದ್ದ ಸನ್ನಿವೇಶದಲ್ಲೇ ಅಕ್ಕಿ ವ್ಯಾಪಾರ ಆರಂಭಿಸಿದರು.

ನೋಡ ನೋಡುತ್ತಿದ್ದಂತೆ ಫಿನಿಕ್ಸ್ ನಂತೆ ಜಯಪ್ರಕಾಶ್ ಮಾಗಿ ಅವರು ಹಂತ ಹಂತವಾಗಿ ಮೇಲೆ ಬಂದರು. ಕುಟುಂಬದ ನಿರ್ವಹಣೆ ಜೊತೆಗೆ ಅಕ್ಕಿ ವ್ಯಾಪಾರದಲ್ಲೂ ಯಶ ಕಂಡರು.

ಮಾಗಿ ಒಡೆತನದ ಅಕ್ಕಿ ಟ್ರೇಡರ್ಸ್ ಗಳು

ಚೌಕಿಪೇಟೆ ಹಿಂಭಾಗದ ಹಳೆಯ ಗುಜರಿ ಲೈನ್, ಒಎಂಎಸ್ ರಸ್ತೆಯಲ್ಲಿರುವ ಹರ್ಷ ಕಮರ್ಷಿಯೇಟ್ಸ್ ಜೊತೆಗೆ ಜೆ. ಪಿ. ಎಂಟರ್ ಪ್ರೈಸಸ್, ರೈಸ್ ಕಾರ್ನರ್, ಮಾಗಿ ಎಂಟರ್ ಪ್ರೈಸಸ್ ಆರಂಭಿಸಿರುವ ಜಯಪ್ರಕಾಶ್ ಮಾಗಿ ಅವರು ಈಗ ಅಕ್ಕಿ ಉದ್ಯಮದಲ್ಲಿ ಯಶ ಕಂಡು ಎಲ್ಲರಿಗೂ ಮಾದರಿ ಆಗಿದ್ದಾರೆ. ಮಾತ್ರವಲ್ಲ, ಸುಮಾರು ಮೂರು ದಶಕಗಳ ಈ ಜೀವನಗಾಥೆಯಲ್ಲಿ ಕಂಡಿರುವ ಬೀಳುಗಳೇ ಹೆಚ್ಚು. ಆದರೆ ಈಗ ಅದಕ್ಕೆಲ್ಲಾ ತಿಲಾಂಜಲಿ ಹೇಳಿ ಯಶಸ್ವಿ ಅಕ್ಕಿ ಉದ್ಯಮಿ ಎನಿಸಿಕೊಂಡಿದ್ದಾರೆ.

ಜಯಪ್ರಕಾಶ್ ಮಾಗಿ ವೈವಾಹಿಕ ಜೀವನ:

2006ರಲ್ಲಿ ದೊಡ್ಡಪೇಟೆಯ ಬೇತೂರು ತಿಪ್ಪೇಸ್ವಾಮಿ ಮತ್ತು ಗೌರಮ್ಮ ದಂಪತಿ ಪುತ್ರಿ ಎಂ. ಜೆ. ದಾನೇಶ್ವರಿ ಜೊತೆ ಸಪ್ತಪದಿ ತುಳಿದರು. ಹಿರಿಯ ಪುತ್ರ ಹರ್ಷ ಬಿಐಇಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ಇನ್ನೊಬ್ಬ ಪುತ್ರ ಕಿಶೋರ್ ಮಾಗಿ ಎಂಟನೇ ತರಗತಿ ಓದುತ್ತಿದ್ದಾರೆ. ತನ್ನೆಲ್ಲಾ ಕಷ್ಟಗಳ ನಡುವೆಯೂ ಸಾಥ್ ನೀಡಿದ ಪತ್ನಿ ಯಶಸ್ಸಿಗೆ ಬೆನ್ನೆಲುಬಾಗಿ ನಿಂತರಲ್ಲದೇ, ಸೋಲು ಕಂಡರೂ ಧೈರ್ಯ ತುಂಬಿ ಗೆಲುವಿನತ್ತ ಸಾಗಲು ಕಾರಣೀಕರ್ತರಲ್ಲಿ ಪ್ರಮುಖರು ಎನ್ನುತ್ತಾರೆ ಜಯಪ್ರಕಾಶ್ ಮಾಗಿ ಅವರು.

ಧರ್ಮಸ್ಥಳದಲ್ಲಿ ದೇವರೇ ನುಡಿಸಿದ ನುಡಿ:

2021ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತರೊಂದಿಗೆ ಜಯಪ್ರಕಾಶ್ ಮಾಗಿ ಅವರು ತೆರಳಿದ್ದರು. ಈ ವೇಳೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವಾಗ ತನಗೆ ಅರಿವೇ ಆಗದಂತೆ ಶಕ್ತಿ ಕೊಡು, ಉದ್ಯಮದಲ್ಲಿ ಯಶಸ್ಸು, ಆರೋಗ್ಯ ಭಾಗ್ಯ ನೀಡು ಭಗವಂತ, ಕೈಯಲ್ಲಾದಷ್ಟು ಅಕ್ಕಿ ಸೇವೆ ಪ್ರತಿವರ್ಷ ಸಮರ್ಪಿಸುತ್ತೇನೆಂದು ಪ್ರಾರ್ಥಿಸಿದರು. ಆಗ ಆ ಶ್ರೀ ಮಂಜುನಾಥನೇ ನನ್ನ ನಾಲಿಗೆಯಲ್ಲಿ ಹೇಳಿಸಿದಂಥ ಅನುಭವವಾಯ್ತು ಅವರಿಗೆ.

ಬಳಿಕ ದಾವಣಗೆರೆಗೆ ವಾಪಸ್ ಆದ ಜಯಪ್ರಕಾಶ್ ಮಾಗಿ ಅವರಿಗೆ ಅದೃಷ್ಟವೂ ಖುಲಾಯಿಸಿತು. ವ್ಯಾಪಾರವೂ ಚೆನ್ನಾಗಿ ಆಯಿತು. ಮಂಜುನಾಥನ ಸನ್ನಿಧಿಯಲ್ಲಿ ಹೇಳಿದಂತೆ ಮೊದಲ ವರ್ಷವೇ 416 ಅಕ್ಕಿ ಪ್ಯಾಕೇಟ್ ಗಳು ಅಂದರೆ ಬರೋಬ್ಬರಿ 10 ಟನ್ ಅಕ್ಕಿ ಸಮರ್ಪಿಸಲು ಆರಂಭಿಸಿದರು. ಆ ನಂತರ ಪ್ರತಿವರ್ಷವೂ 9 ಪ್ಯಾಕೆಟ್ ಅಕ್ಕಿ ಹೆಚ್ಚು ಸೇರಿಸುತ್ತಾ ಇದೀಗ 461 ಅಕ್ಕಿ ಪ್ಯಾಕೆಟ್ ಗೆ ಸೇರುತ್ತದೆ.

ಜುಲೈ 30ಕ್ಕೆ ಧರ್ಮಸ್ಥಳಕ್ಕೆ ಹೋಗಲಿದೆ 1040 ಅಕ್ಕಿ ಪ್ಯಾಕೆಟ್:

ಇದೇ ಜುಲೈ 30ರ ಗುರುವಾರದಂದು ಜಯಪ್ರಕಾಶ್ ಮಾಗಿ ಅವರಿಂದ 461 ಅಕ್ಕಿ ಪ್ಯಾಕೆಟ್ ಗಳು, ಸ್ನೇಹಿತರು ನೀಡುವ 579 ಅಕ್ಕಿ ಪ್ಯಾಕೇಟ್ ಗಳೂ ಸೇರಿದಂತೆ ಒಟ್ಟು 1040 ಅಕ್ಕಿ ಪ್ಯಾಕೇಟ್ ಗಳನ್ನು ಲಾರಿ ಮೂಲಕ ಧರ್ಮಸ್ಥಳಕ್ಕೆ ತೆಗೆದುಕೊಂಡು ಹೋಗಿ ಸಮರ್ಪಿಸಲಾಗುತ್ತಿದೆ. 150 ಜನರನ್ನು ದಾವಣಗೆರೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದ ಜಯಪ್ರಕಾಶ್ ಮಾಗಿ ಅವರು ದೇವರ ದರ್ಶನ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುತ್ತಾರೆ. ಈ ವರ್ಷ ಅದು 200 ಮಂದಿಗೂ ಜಾಸ್ತಿಯಾಗಿದೆ.

ಸ್ನೇಹಿತರ ಬಲ:

ಜಗದೀಶ್ ಬ್ಯಾಡಗಿ, ಜಯರಾಜ್ ಮೇಟಿ, ಸತೀಶ್ ಹುಬ್ಬಳ್ಳಿ, ಬಾದಾಮಿ ವಿಶ್ವನಾಥ್, ಪಿ. ಎಸ್. ಪರಶುರಾಮ್, ಕೆ. ವಿ. ಗುರು ಸೇರಿದಂತೆ ಅನೇಕ ಸ್ನೇಹಿತರ ಬಲವೇ ಜಯಪ್ರಕಾಶ್ ಮಾಗಿ ಅವರ ಯಶಸ್ಸಿಗೆ ಕಾರಣ. ಸ್ನೇಹಿತರು ತುಂಬಿದ ಆತ್ಮಸ್ಥೈರ್ಯ, ಕೊಟ್ಟ ಭರವಸೆ, ಬೆನ್ನೆಲುಬಾಗಿ ನಿಂತಿದ್ದರಿಂದ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ. ದಾವಣಗೆರೆ ಜನತೆಯೂ ಕೈಹಿಡಿದಿದ್ದಾರೆ. ಅವರು ತೋರಿರುವ ಪ್ರೀತಿ, ಕೊಟ್ಟ ಪ್ರೋತ್ಸಾಹವೇ ನನ್ನ ಯಶಸ್ಸಿಗೆ ಕಾರಣ ಎನ್ನುತ್ತಾರೆ ಜಯಪ್ರಕಾಶ್ ಮಾಗಿ ಅವರು.

ದೇವರಮನಿ ಶಿವಕುಮಾರ್ ಮಾರ್ಗದರ್ಶಕರು:

ದೂಡಾ ಮಾಜಿ ಅಧ್ಯಕ್ಷರೂ ಆದ ವೀರಶೈವ ಲಿಂಗಾಯತ ಸಮುದಾಯದ ಮುಖಂಡ ದೇವರಮನಿ ಶಿವಕುಮಾರ್ ಅವರು ಜಯಪ್ರಕಾಶ್ ಮಾಗಿ ಅವರಿಗೆ ಮಾರ್ಗದರ್ಶಕರು. ಹಿತೈಷಿಗಳು. ಜಯಪ್ರಕಾಶ್ ಅವರ ಕಾರ್ಯಗಳಿಗೆ ಪ್ರೋತ್ಸಾಹ, ಬೆಂಬಲ, ಸಹಕಾರ ನೀಡುತ್ತಾರೆ. ನಮ್ಮ ಕುಟುಂಬದಲ್ಲಿ ಒಬ್ಬರು. ಏನೇ ಸಮಸ್ಯೆಗಳಿದ್ದರೂ, ಸಲಹೆಗಳಿದ್ದರೂ ನೀಡುತ್ತಾರೆ. ಅವರ ಮಾರ್ಗದರ್ಶನವೂ ನನ್ನ ಏಳಿಗೆಗೆ ಕಾರಣವಾಗಿದೆ ಎನ್ನುತ್ತಾರೆ ಜಯಪ್ರಕಾಶ್ ಮಾಗಿ ಅವರು.

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಮಂಡಳಿಯ ಟ್ರಸ್ಟಿ, ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾಗಿ, ದೇವರಾಜ್ ಅರಸ್ ಬಡಾವಣೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ
ಉಪಾಧ್ಯಕ್ಷರಾಗಿರುವ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾಗಿರುವ ಜಯಪ್ರಕಾಶ್ ಮಾಗಿ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಸಾಮಾಜಿಕ ಸೇವೆಗಳು:

ಪ್ರತಿವರ್ಷವೂ ಕೊಟ್ಟೂರು ಪಾದಯಾತ್ರೆಗೆ ತೆರಳುವ ಭಕ್ತಾದಿಗಳು ಮತ್ತು ಕುರುವತ್ತಿ ಬಸವೇಶ್ವರ ಸ್ವಾಮಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಹಣ್ಣು, ಹಂಪಲು, ನೀರು ವಿತರಿಸುವ ಮೂಲಕ ಸೇವೆ ನೆರವೇರಿಸುವ ಜಯಪ್ರಕಾಶ್ ಮಾಗಿ ಅವರ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತದೆ.

ಮಂಜುನಾಥ ಸ್ವಾಮಿ ಅನುಗ್ರಹ, ಕೊನೆ ಉಸಿರುವವರೆಗೂ ನಿಲ್ಲಿಸಲ್ಲ:

ಬಡತನದ ಬೆಂಕಿಯಲ್ಲಿ ಬೆಂದು ಅಕ್ಕಿ ಉದ್ಯಮದಲ್ಲಿ ಸಕ್ಸಸ್ ಆಗಿರುವ ಜಯಪ್ರಕಾಶ್ ಮಾಗಿ ಅವರು, ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಎಲ್ಲಿಯವರೆಗೆ ಶಕ್ತಿ, ಆರೋಗ್ಯ ಭಾಗ್ಯ ನೀಡುತ್ತಾನೋ ಅಲ್ಲಿಯವರೆಗೆ ಅಕ್ಕಿ ಸಮರ್ಪಣೆ ಸೇವೆ ನಿಲ್ಲದು. ಕೊನೆ ಉಸಿರು, ನನ್ನ ಶಕ್ತಿ ಇರುವವರೆಗೂ ಮುಂದುವರಿಸಿಕೊಂಡು ಹೋಗುತ್ತೇನೆ ಎನ್ನುತ್ತಾರೆ.

ಕೊರೊನಾ ಸಂಕಷ್ಟದ ವೇಳೆಯಲ್ಲಿ ಬಡವರು ಸೇರಿದಂತೆ ಎಲ್ಲಾ ವರ್ಗದವರಿಗೆ ಉಚಿತವಾಗಿ ಅಕ್ಕಿ ನೀಡಿದ್ದಾರೆ. ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ರೋಗಿಗಳು, ಕಷ್ಟದಲ್ಲಿದ್ದೇವೆಂದು ಬರುವವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಿಲ್ಲ. ತಾನು ಚಿಕ್ಕವಯಸ್ಸಿನಲ್ಲಿ ಅನುಭವಿಸಿದ ನೋವು, ಯಾತನೆ, ಶಾಲೆಗೆ ಹೋಗಲು ಆಗದ ಪರಿಸ್ಥಿತಿ ಬಡ ಮಕ್ಕಳಿಗೆ ಬರಬಾರದು ಎಂಬ ಸದುದ್ದೇಶದಿಂದ ಶಾಲೆಗಳಿಗೆ ಪಠ್ಯ ಪುಸ್ತಕ ಸೇರಿದಂತೆ ಹಲವು ರೀತಿಯಲ್ಲಿ ಸಹಾಯ ಮಾಡಿಕೊಂಡು ಬಂದಿದ್ದಾರೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ಪ್ರಚಾರದಿಂದ ಹಿಂದೆಯೇ ಉಳಿದಿದ್ದಾರೆ. ದಾನ, ಧರ್ಮ, ಕಷ್ಟದಲ್ಲಿದ್ದವರಿಗೆ ನೆರವು ನೀಡುವ ಮೂಲಕ ತನ್ನ ಕೈಯಲ್ಲಾದಷ್ಟು ಸೇವೆ ಮಾಡಿದ್ದಾರೆ. ಇದೆಲ್ಲವೂ ಭಗವಂತನು ನೀಡಿರುವ ಅನುಗ್ರಹವೇ ಹೊರತು ತನ್ನದೇನೂ ಇಲ್ಲ ಎನ್ನುತ್ತಾರೆ ಜಯಪ್ರಕಾಶ್ ಮಾಗಿ ಅವರು.

ಶ್ರೀ ಮಂಜುನಾಥನೊಲಿದ ಕೃಪೆ ಹಾಗೂ ಭಕ್ತಿಯ ಸಂಕಲ್ಪ

ಜಯಪ್ರಕಾಶ್ ಮಾಗಿ ಅವರ ಬದುಕಿನಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಅತಿದೊಡ್ಡದು. ತಮ್ಮ ಜೀವನದಲ್ಲಿ ಆಗಿರುವ ಪ್ರತಿಯೊಂದು ಒಳಿತಿಗೂ ಮಂಜುನಾಥನ ಕೃಪೆಯೇ ಕಾರಣ ಎಂದು ನಂಬಿರುವ ಅವರು, ಆ ಭಗವಂತನಿಗೆ ಕಾಣಿಕೆಯಾಗಿ ಅನ್ನದಾಸೋಹಕ್ಕಾಗಿ ಅಕ್ಕಿಯನ್ನು ನೀಡುವ ಸಂಕಲ್ಪ ತೊಟ್ಟರು. ಇದು ಕೇವಲ ಒಂದು ದಿನದ ಅಥವಾ ಒಂದು ವರ್ಷದ ಭಕ್ತಿಯಲ್ಲ, ಸತತ 6 ವರ್ಷಗಳಿಂದ ಯಾವುದೇ ಚ್ಯುತಿ ಬಾರದಂತೆ, ಶ್ರದ್ಧೆ ಹಾಗೂ ಭಕ್ತಿಯಿಂದ ಈ ಕಾಯಕವನ್ನು ಮುಂದುವರಿಸಿಕೊಂಡು ಬಂದಿರುವುದು ಅವರ ನಿಷ್ಕಲ್ಮಶ ಭಕ್ತಿಗೆ ಸಾಕ್ಷಿಯಾಗಿದೆ.

“ಮಾನವ ಸೇವೆಯೇ ಮಾಧವನ ಸೇವೆ” ಎಂಬ ನಾಣ್ಣುಡಿಯಂತೆ, ಜಯಪ್ರಕಾಶ್ ಮಾಗಿ ಅವರು ದೇವರ ಮೇಲಿನ ಪ್ರೀತಿಯನ್ನು ಬಡವರ ಹಸಿವು ನೀಗಿಸುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.ಬಡವರ ಬಗ್ಗೆ, ಹಸಿದವರ ಬಗ್ಗೆ ಅವರಿಗಿರುವ ಕಾಳಜಿ ಈ ಅಕ್ಕಿ ಸಮರ್ಪಣೆಯ ಮೂಲಕ ವ್ಯಕ್ತವಾಗುತ್ತದೆ. ಕೇವಲ ಪೂಜೆ-ಪುನಸ್ಕಾರಗಳಿಗಷ್ಟೇ ಸೀಮಿತವಾಗದೆ, ಧರ್ಮದ ನೈಜ ಅರ್ಥವಾದ ‘ದಾನ’ವನ್ನು ಅಳವಡಿಸಿಕೊಂಡು ಧರ್ಮಕ್ಕಾಗಿ ಶ್ರಮಿಸುತ್ತಿದ್ದಾರೆ. ಭಗವಂತ ತನಗೆ ನೀಡಿದ್ದರಲ್ಲಿ ಒಂದಿಷ್ಟನ್ನು ಸಮಾಜಕ್ಕೆ, ದೇವರ ಸೇವೆಗೆ ಹಿಂದಿರುಗಿಸುವ ಅವರ ಗುಣ ನಿಜಕ್ಕೂ ಅನುಕರಣೀಯ.

ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ 6ನೇ ವರ್ಷದ ಅಕ್ಕಿ ಸಮರ್ಪಣೆ ಮಾಡುತ್ತಿರುವ ಜಯಪ್ರಕಾಶ್ ಮಾಗಿ ಅವರ ಈ ಧಾರ್ಮಿಕ ಹಾಗೂ ಸಾಮಾಜಿಕ ಕೈಂಕರ್ಯ ಹೀಗೆಯೇ ನಿರಂತರವಾಗಿ ಸಾಗಲಿ, ಶ್ರೀ ಸ್ವಾಮಿಯ ಆಶೀರ್ವಾದ ಅವರ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಮುಂಬರುವ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂಬುದು ಧರ್ಮಸ್ಥಳದ ಭಕ್ತರು, ಸ್ನೇಹಿತರು, ಕುಟುಂಬ ವರ್ಗದವರು, ಸ್ನೇಹಿತರ ಆಶಯ ಆಗಿದೆ.

Share

Leave a comment

Leave a Reply

Your email address will not be published. Required fields are marked *