ಗುವಾಹಾಟಿ: ಅಸ್ಸಾಂನ ಕಮ್ರೂಪ್ ಗ್ರಾಮಾಂತರ ಜಿಲ್ಲೆಯ ರಂಗಿಯಾ ರೈಲ್ವೇ ನಿಲ್ದಾಣದ ಬಳಿಯಿರುವ ಹೋಟೆಲ್ ಒಂದರಲ್ಲಿ ದಾರುಣ ಘಟನೆಯೊಂದು ನಡೆದಿದೆ. ತಾನು ಪ್ರೀತಿಸುತ್ತಿದ್ದ ಯುವತಿಯನ್ನೇ ಕತ್ತರಿ ಮತ್ತು ಟೆಸ್ಟರ್‌ನಿಂದ ಇರಿದು ಕೊಲೆ ಮಾಡಿದ ಆರೋಪದ ಮೇಲೆ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಬಳಿಕ ಆರೋಪಿಯು ಆತ್ಮಹತ್ಯೆಗೂ ಯತ್ನಿಸಿದ್ದಾನೆ.
ಘಟನೆಯ ವಿವರ:
ಉದಲ್ಗುರಿ ಜಿಲ್ಲೆಯ ನಿವಾಸಿ ಅಭಿಜಿತ್ ಕಿಂಡೋ (22) ಬಂಧಿತ ಆರೋಪಿ. ಸೋನಿತ್‌ಪುರ ಜಿಲ್ಲೆಯ ಹುಗ್ರಜುಲಿ ಮೂಲದ ಮಾಲಿನಿ ಗುರಿಯಾ (23) ಕೊಲೆಯಾದ ಯುವತಿ.
ಚೆನ್ನೈನಿಂದ ಇಬ್ಬರು ಗೆಳತಿಯರೊಂದಿಗೆ ರಂಗಿಯಾ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಮಾಲಿನಿ ಗುರಿಯಾ ಅವರನ್ನು ಕರೆದುಕೊಂಡು ಹೋಗಲು ಅಭಿಜಿತ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ. ನಂತರ ಯುವತಿಯರು ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಅಭಿಜಿತ್ ತನಗಾಗಿ ಪ್ರತ್ಯೇಕ ಕೊಠಡಿ ಬುಕ್ ಮಾಡಿದ್ದರೂ, ತಡರಾತ್ರಿ ಮಾಲಿನಿ ಇದ್ದ ಕೊಠಡಿಗೆ ತೆರಳಿ ಅಲ್ಲೇ ತಂಗಿದ್ದ.
ಕೊಲೆಗೆ ಮುಂಚೆಯೇ ಸ್ಕೆಚ್ ಹಾಕಿದ್ದ ಆರೋಪಿ:
ಬೆಳಿಗ್ಗೆ ಮಾಲಿನಿಯ ಗೆಳತಿಯರಿಗೆ ಕರೆ ಮಾಡಿದ ಅಭಿಜಿತ್, “ನಾನು ಮಾಲಿನಿಯನ್ನು ಕೊಂದಿದ್ದೇನೆ, ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದ. ಗಾಬರಿಗೊಂಡ ಗೆಳತಿಯರು ಹಾಗೂ ರೈಲ್ವೇ ಇನ್‌ಸ್ಪೆಕ್ಟರ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ರಕ್ತದ ಮಡುವಿನಲ್ಲಿ ಯುವತಿಯ ಶವ ಪತ್ತೆಯಾಗಿದೆ.
ಪೊಲೀಸ್ ವಶದಲ್ಲಿರುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ಅಭಿಜಿತ್, “ಆಕೆ ಬೇರೆ ಪುರುಷರೊಂದಿಗೆ ಮಾತನಾಡುತ್ತಿದ್ದಳು ಮತ್ತು ನನಗೆ ಮೋಸ ಮಾಡುತ್ತಿದ್ದಳು. ಅದಕ್ಕಾಗಿಯೇ ಆಕೆ ಊರಿಗೆ ಬರುವ ಮುಂಚೆಯೇ ಕೊಲೆ ಮಾಡಲು ಯೋಜನೆ ರೂಪಿಸಿದ್ದೆ” ಎಂದು ಒಪ್ಪಿಕೊಂಡಿದ್ದಾನೆ.
ಪೊಲೀಸ್ ತನಿಖೆ:
ಕೊಲೆಗೆ ಬಳಸಿದ ಕತ್ತರಿ ಹಾಗೂ ಟೆಸ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಗುವಾಹಾಟಿಯ ವಿಧಿವಿಜ್ಞಾನ (Forensic) ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುವಾಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (GMCH) ರವಾನಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ ಆರೋಪಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.





Leave a comment