ಜಗಳೂರು (ದಾವಣಗೆರೆ): ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಹಾಗೂ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಸಿ, ಮಹಿಳೆಯಿಂದ ಚಿನ್ನದ ಆಭರಣ ಹಾಗೂ ಮೊಬೈಲ್ ದೋಚಿದ್ದ ಮೂವರು ಆರೋಪಿಗಳನ್ನು ಜಗಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಆಗಸ್ಟ್ 11 ರಂದು ಜಗಳೂರು ಟೌನ್ ನಿವಾಸಿ ನೀಲಮ್ಮ (41) ಎಂಬುವರು ನೀಡಿದ ಲಿಖಿತ ದೂರಿನನ್ವಯ ಜಗಳೂರು ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂ: 160/2026, BNS ಕಲಂ 329(4), 308(2) R/W 3(5)) ಪ್ರಕರಣ ದಾಖಲಾಗಿತ್ತು.
ಆರೋಪಿಗಳು ದೂರುದಾರರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, “ನೀವು ಮಹಿಳೆಯರನ್ನು ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದೀರಿ. ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ. ನಿಮ್ಮ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿ, ಮಾಧ್ಯಮಗಳಿಗೆ ಹಾಕಿ ಮಾನ ಹರಾಜು ಹಾಕುತ್ತೇವೆ” ಎಂದು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಬೆದರಿಸಿದ್ದರು. ನಂತರ ಪ್ರಕರಣ ಮುಚ್ಚಿಹಾಕಲು ₹3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ನಿರಾಕರಿಸಿದಾಗ ದೂರುದಾರರ ಕೊರಳಲ್ಲಿದ್ದ ಬಂಗಾರದ ಸರ ಮತ್ತು ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿದ್ದರು.
ಪೊಲೀಸ್ ಕಾರ್ಯಾಚರಣೆ ಹಾಗೂ ಬಂಧನ:
ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಶ್ರೀ ಬಸವರಾಜ್ ಬಿ.ಎಸ್. ಹಾಗೂ ಜಗಳೂರು ಪಿಐ ಶ್ರೀ ಸಿದ್ರಾಮಯ್ಯ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಶ್ರೀ ಧರೇಪ್ಪಾ ಬಿ. ದೊಡ್ಡಮನಿ ನೇತೃತ್ವದ ಪೊಲೀಸ್ ತಂಡ ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳು:
ಜಗಳೂರು ತಾಲೂಕಿನ ತಿಮ್ಮೇಶ (34), ಗುರುರಾಜ್ ಅಲಿಯಾಸ್ ಗುರು (41), ಹೂವಿನಹಡಗಲಿಯ ಸಂತೋಷ (30) ಬಂಧಿತ ಆರೋಪಿಗಳು.
ಬಂಧಿತರಿಂದ 35 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ಒಂದು ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪ್ರಶಂಸೆ:
ಪ್ರಕರಣ ದಾಖಲಾದ ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಪರಮೇಶ್ವರ ಹೆಗಡೆ ಅವರು ಶ್ಲಾಘಿಸಿದ್ದಾರೆ.





Leave a comment