Home ಕ್ರೈಂ ನ್ಯೂಸ್ ದೇಹ ಬಂದರೂ ಮೆದುಳು, ಹೃದಯ, ಪಿತ್ತಕೋಶ, ಶ್ವಾಸಕೋಶ ಸೇರಿ ಪ್ರಮುಖ ಅಂಗಾಂಗಗಳೇ ಇಲ್ಲ: ಬೆಚ್ಚಿಬೀಳುವಂತಿದೆ ಈ ನಾವಿಕನ ರಹಸ್ಯ ಸಾವಿನ ಕಥೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದೇಹ ಬಂದರೂ ಮೆದುಳು, ಹೃದಯ, ಪಿತ್ತಕೋಶ, ಶ್ವಾಸಕೋಶ ಸೇರಿ ಪ್ರಮುಖ ಅಂಗಾಂಗಗಳೇ ಇಲ್ಲ: ಬೆಚ್ಚಿಬೀಳುವಂತಿದೆ ಈ ನಾವಿಕನ ರಹಸ್ಯ ಸಾವಿನ ಕಥೆ!

Share
ನಾವಿಕ
Share

ನವದೆಹಲಿ: ವೆನೆಜುವೆಲಾದ ಮರ್ಚೆಂಟ್ ನಾವಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಭಾರತೀಯ ನಾವಿಕ ರಾಕೇಶ್ ಚೌಹಾಣ್ (33) ಎಂಬುವವರು ವೆನೆಜುವೆಲಾದಲ್ಲಿ ಕರ್ತವ್ಯದ ಮೇಲಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ ಸುಮಾರು ಒಂದು ತಿಂಗಳ ನಂತರ ಅವರ ಮೃತದೇಹ ಭಾರತಕ್ಕೆ ತಲುಪಿದ್ದು, ದೇಶೀಯ ವೈದ್ಯರು ನಡೆಸಿದ ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಹೊರಬಂದಿದೆ.

ಮೃತದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ, ಯಕೃತ್ತು (ಲಿವರ್) ಸೇರಿದಂತೆ ಯಾವುದೇ ಪ್ರಮುಖ ಅಂಗಾಂಗಗಳೂ ಇರಲಿಲ್ಲ! ಇಡೀ ದೇಹಕ್ಕೆ ಬರೋಬ್ಬರಿ 22 ಹೊಲಿಗೆಗಳನ್ನು ಹಾಕಲಾಗಿದ್ದು, ಇದು ಭಾರಿ ಸಂಶಯಕ್ಕೆ ಕಾರಣವಾಗಿದೆ.

ಮೂಲತಃ ಉತ್ತರ ಪ್ರದೇಶದ ದೇವಕಾಲುಮ್ ಜಿಲ್ಲೆಯವರಾದ ರಾಕೇಶ್ ಚೌಹಾಣ್, ಕಳೆದ 2025ರ ನವೆಂಬರ್‌ನಲ್ಲಿ ಮರ್ಚೆಂಟ್ ನಾವಿ ಸೇರಿದ್ದರು. ಕಳೆದ ಮೇ ತಿಂಗಳಲ್ಲಿ ಅವರು ಹಡಗಿನಲ್ಲಿ ತಲೆಸುತ್ತು ಬಂದು ಬಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕಂಪನಿ ಕುಟುಂಬಕ್ಕೆ ತಿಳಿಸಿತ್ತು.

ಆದರೆ, ಇತ್ತೀಚೆಗೆ ಶವ ಭಾರತಕ್ಕೆ ಬಂದಾಗ ಕುಟುಂಬಸ್ಥರಿಗೆ ಅನುಮಾನ ಬಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಮರು ಪೋಸ್ಟ್‌ಮಾರ್ಟಂ ನಡೆಸಲಾಯಿತು.

ವರದಿಯ ಪ್ರಕಾರ, ರಾಕೇಶ್ ಅವರ ದೇಹದಲ್ಲಿ ಮೆದುಳು, ಹೃದಯ, ಗುಲ್ಮ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ, ಎರಡೂ ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಕರುಳು ಸೇರಿದಂತೆ ಪ್ರಮುಖ ಆಂತರಿಕ ಅಂಗಗಳು ಸಂಪೂರ್ಣವಾಗಿ ಕಾಣೆಯಾಗಿವೆ. ದೇಹದಲ್ಲಿ ಯಾವುದೇ ಅಂಗಾಂಶಗಳು (viscera) ಉಳಿಯದ ಕಾರಣ, ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವಿಧಿವಿಜ್ಞಾನ ತಜ್ಞರಿಗೆ ಸಾಧ್ಯವಾಗುತ್ತಿಲ್ಲ.

ಸಂಸ್ಥೆಗಳ ವಿರುದ್ಧ ಗಂಭೀರ ಆರೋಪ:

ಫೆಡರೇಶನ್ ಆಫ್ ಸೀಫೇರರ್ಸ್ ಯೂನಿಯನ್ಸ್ ಆಫ್ ಇಂಡಿಯಾ (FSUI) ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಕುಟುಂಬದ ಅನುಮತಿಯಿಲ್ಲದೆ ಅಂಗಾಂಗಗಳನ್ನು ಏಕೆ ತೆಗೆಯಲಾಯಿತು? ಮೃತದೇಹದ ರಶೀದಿಯಲ್ಲಿ ಸಹಿಯನ್ನು ಏಕೆ ನಕಲು ಮಾಡಲಾಗಿದೆ? ಉದ್ಯೋಗ ಒಪ್ಪಂದದಲ್ಲಿದ್ದ ಹಡಗಿನ ಹೆಸರೇ ಬೇರೆ, ರಾಕೇಶ್ ಕೆಲಸ ಮಾಡುತ್ತಿದ್ದ ಹಡಗಿನ ಹೆಸರೇ ಬೇರೆ ಏಕೆ ಇತ್ತು? ಎಂದು ಯೂನಿಯನ್ ಪ್ರಶ್ನಿಸಿದೆ. ಇದು ದೊಡ್ಡ ಮಟ್ಟದ ಕೊಲೆ ಮತ್ತು ಸಾಕ್ಷ್ಯ ನಾಶದ ಸಂಚು ಎಂದು ಶಂಕಿಸಲಾಗಿದೆ.

ರಾಕೇಶ್ ಅವರ ಕುಟುಂಬವು ಲಕ್ಷಾಂತರ ರೂಪಾಯಿ ಸಾಲ ಮಾಡಿ ಅವರನ್ನು ವಿದೇಶಕ್ಕೆ ಕಳುಹಿಸಿತ್ತು. ಪ್ರಸ್ತುತ ಅವರ ಪತ್ನಿ ಮತ್ತು ಆರು ತಿಂಗಳ ಮಗು ಅನಾಥವಾಗಿದ್ದು, ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಮತ್ತು ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles