SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ: ರಾಜಕೀಯ ಪ್ರಜ್ಞೆ ಮೂಡಿಸುವ, ಶೈಕ್ಷಣಿಕ ಅಸಮಾನತೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸ್ಥಾಪಿತವಾದ ಸ್ವಾಭಿಮಾನ ಬಳಗದ ಉದ್ಘಾಟನೆ ಹಾಗೂ ಬಳಗದ ಧ್ಯೇಯೋದ್ದೇಶಗಳ ಕುರಿತಂತೆ ಮಾಹಿತಿ ನೀಡುವ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮವು ನವೆಂಬರ್ 17ರಂದು ನಗರದ ಎಸ್. ಎಸ್. ಲೇಔಟ್ ಎ ಬ್ಲಾಕ್ ಕಚೇರಿಯಲ್ಲಿ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಭೆಯನ್ನು ಆಯೋಜಿಸಲಾಗಿದೆ. ಹಿತೈಷಿಗಳು, ಸಮಾನ ಮನಸ್ಕರು, ಅಭಿವೃದ್ಧಿ ಪರ ಇರುವವರು, ಸ್ನೇಹಿತರು, ಹಿತೈಷಿಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ
ಎಂದು ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರುನಾಡಿನ ಕನ್ನಡಿಗರು ಸ್ವಾಭಿಮಾನ, ಸಮಾನತೆ, ಸಹಬಾಳ್ವೆಯಲ್ಲಿ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಹಾಗಾಗಿ ಈ ನೆಲದ ಸ್ವಾಭಿಮಾನಿಗೆಳೆಲ್ಲರೂ ಸಾಮಾಜಿಕ ಕಳಕಳಿಯೊಂದಿಗೆ ಸೇರಿ ನಾಡು, ನುಡಿ, ಭಾಷೆ ಮತ್ತು “ಶೈಕ್ಷಣಿಕ-ರಾಜಕೀಯ ಸಮಾನತೆಗೆ” ಸಾಮಾಜಿಕ ಬದ್ಧತೆಯೊಂದಿಗೆ ಒಗ್ಗೂಡಿ ಸಂಘಟನಾತ್ಮಕ ಹೋರಾಟದೊಂದಿಗೆ ಬಳಗ ಮುನ್ನಡೆಯಲಿದೆ. ಯಾವ ವೈಯಕ್ತಿಕ ಸ್ವಾರ್ಥ ಇರದೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ಸರ್ವ ಸ್ವಾಭಿಮಾನಿಗಳೂ ಈ “ಸ್ವಾಭಿಮಾನಿ ಬಳಗ ಮುನ್ನಡಿಸೋಣ. ಯಾವ ಮಹಾನ್ ಪುರುಷರ ಹೆಸರು ಬಳಸಿಕೊಳ್ಳದೇ, ಜಾತ್ಯಾತೀತವಾಗಿ ಬಳಗ ಕಟ್ಟಲಾಗಿದೆ ಎಂದು ಹೇಳಿದ್ದಾರೆ.
ಸಮೃದ್ಧ ಸಮಾಜ ನಿರ್ಮಾಣ-ಸ್ವಾಭಿಮಾನದ ಜೀವನದೊಂದಿಗೆ ಸರ್ವಸಮಾಜದ ಸಮಾನ-ಮನಸ್ಕರ ಸ್ವಾಭಿಮಾನಿಗಳನ್ನೊಳಗೊಂಡು “ಒಂದಾಗಿ ನಡೆಯೋಣ ಒಗ್ಗಟ್ಟಾಗಿ ಬಾಳೋಣ” ಎಂಬ ಧ್ಯೇಯವಾಕ್ಯದಡಿ ಮುನ್ನಡೆಯಲಿದ್ದು, ಸ್ವಾಭಿಮಾನಿ ಬಳಗ ರಾಜ್ಯದಲ್ಲಿ ದೊಡ್ಡದಾಗಿ ಬೆಳೆದೇ ಬೆಳೆಯುತ್ತದೆ. ಕರ್ನಾಟಕದ ಜನರು ಸ್ವಾಭಿಮಾನಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಹಾಗಾಗಿ ಬಳಗ ಜನರನ್ನು ತಲುಪಲಿದೆ ಎಂಬ ದೃಢವಾದ ನಂಬಿಕೆ ನನ್ನದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಗ ಸೇರುತ್ತಾರೆ ಎಂಬ ವಿಶ್ವಾಸ ಇದೆ. ರಾಜ್ಯದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿ ರಾಜಕೀಯ ಪ್ರಜ್ಞೆ ಮೂಡಿಸುವ ಜೊತೆಗೆ ಅಭಿವೃದ್ಧಿ ಪರ್ವ ಶುರುವಾಗುತ್ತದೆ ಎಂದಿದ್ದಾರೆ.
ನಾವೆಲ್ಲರೂ ಸೇರಿ ಸ್ವಾಭಿಮಾನಿ ಬಳಗ ಸ್ಥಾಪಿಸಿದ್ದೇವೆ. ನನ್ನ ಹೋರಾಟ ಸ್ವಾಭಿಮಾನದ್ದು. ಎಲ್ಲರಿಗೂ ಪಾಲು ಸಿಗಬೇಕು, ರಾಜಕೀಯ ಹಿನ್ನೆಲೆ ಇಲ್ಲದವರಿಗೆ ರಾಜಕೀಯ ಸ್ಥಾನಮಾನ ಸಿಗುವಂತಾಗಬೇಕು. ರಾಜಕಾರಣದಲ್ಲಿ ಸಾಮಾಜಿಕ ಕಳಕಳಿ, ಬದ್ಧತೆ, ಸ್ವಾಭಿಮಾನ ಇರುವವರು ರಾಜಕಾರಣಕ್ಕೆ ಬರಬೇಕು ಎಂಬ ಸದುದ್ದೇಶ ಇದೆ. ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದು ಕಠಿಣ ನಿರ್ಧಾರ. ಆದರೂ ಜನರು ತೋರಿದ ಪ್ರೀತಿಗೆ ನಾನು ಚಿರಋಣಿ. ಕರ್ನಾಟಕದ ಬೇರೆ ಬೇರೆ ಜಿಲ್ಲೆ, ತಾಲೂಕಿನಲ್ಲಿರುವವರು ಸೇರಬಹುದು. ಎಲ್ಲರನ್ನೂ ಜೊತೆಗೂಡಿ ಮುನ್ನಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಉದ್ದೇಶಪೂರ್ವಕ, ರಾಜಕೀಯವಾಗಿ ಬಳಗ ಹುಟ್ಟುಹಾಕಿದ್ದಲ್ಲ. ನನ್ನ ಪ್ರಯತ್ನ ಮೆಚ್ಚಿದವರು, ಸ್ನೇಹಿತರು, ಹಿತೈಷಿಗಳು ಹುಟ್ಟು ಹಾಕಿದ್ದು. ನವೆಂಬರ್ 17ರಂದು ವೆಬ್ ಸೈಟ್ ಲೋಕಾರ್ಪಣೆ ಮಾಡುತ್ತಿದ್ದೇವೆ, ಸಭೆ ಕರೆದಿದ್ದೇವೆ ಎಂದು
ಮಾಹಿತಿ ನೀಡಿದ್ದಾರೆ.
ಬೀದರ್, ಮೈಸೂರು, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಕೊಪ್ಪಳ, ಯಾದಗಿರಿಗೆ ಹೋಗಿ ಬಂದಿದ್ದೇನೆ. ಎಲ್ಲೆಡೆ ಜನರು ಆಹ್ವಾನಿಸುತ್ತಿದ್ದಾರೆ. ರಾಜಕೀಯ ಪ್ರಜ್ಞೆ ಮೂಡಿಸುವುದು, ಶೈಕ್ಷಣಿಕ ಅಸಮಾನತೆ ನಿರ್ಮೂಲನೆ ಆದರೆ ಎಲ್ಲವೂ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇರುವ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಹೋಗುತ್ತಿದ್ದೇನೆ. ರಾಜಕಾರಣ ಮಾತನಾಡುವ ಬದಲು ವಿದ್ಯಾರ್ಥಿಗಳಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರಗಳ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿ ಹೊಸ ಅಭಿವೃದ್ಧಿ ಪರ್ವ, ರಾಜಕೀಯ ಪ್ರಜ್ಞೆ ಹುಟ್ಟು ಹಾಕುವ ನಿಟ್ಟಿನಲ್ಲಿ ಬಳಗ ಕಾರ್ಯೋನ್ಮುಖವಾಗಲಿದೆ ಎಂದು ಜಿ. ಬಿ. ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.