SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ: ಜಾತಿ ಗಣತಿ ವರದಿ ಬಿಡುಗಡೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ, ಮಾಜಿ ಸಚಿವ ಹೆಚ್. ಆಂಜನೇಯ ಅವರು ಜಾತಿಗಣತಿ ವರದಿ ಜಾರಿ ವಿರೋಧಕ್ಕೆ ಯಾವುದೇ ಮನ್ನಣೆ ನೀಡಬಾರದು ಎಂದು ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವಿರೋಧ ಮಾಡುವವರು ಕಾರಣ ಕೊಡಬೇಕು. ಅನಗತ್ಯವಾಗಿ ಟೀಕೆ, ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ವರದಿ ಬಹಿರಂಗಗೊಂಡ ಬಳಿಕ ವಿರೋಧ ಮಾಡುವವರು ತಪ್ಪುಗಳನ್ನು ಗುರುತಿಸಿ ಹೇಳಲಿ. ಇಂತಹ ಪ್ರದೇಶದಲ್ಲಿ ಸರ್ವೇ ಆಗಿಲ್ಲ ಎಂದು ಹೇಳಲಿ. ಆಗ ಅದು ಸತ್ಯವೇ ಅಗಿದ್ದರೇ ಆ ಪ್ರದೇಶದಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರಕ್ಕೆ ಒತ್ತಡ
ಹಾಕೋಣ. ಈ ಸಂಬಂಧ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ವರದಿ ಬಹಿರಂಗಕ್ಕೆ ಮುನ್ನವೇ ಅನಗತ್ಯವಾಗಿ ವಿರೋಧ ಮಾಡಿದರೇ ನಾವು ಸಹಿಸುವುದಿಲ್ಲ. ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಸ್ವೀಕಾರ, ಮಂಡನೆ, ಬಹಿರಂಗೊಳಿಸುವುದು ತುರ್ತು ಅಗತ್ಯವಿದೆ. ಅದರಲ್ಲೂ ಈ ವಿಷಯದಲ್ಲಿ
ಕೋರ್ಟ್ ಕೇಳುತ್ತಿದ್ದ ಅನೇಕ ಪ್ರಶ್ನೇಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದು ಆಂಜನೇಯ ಅಭಿಪ್ರಾಯಪಟ್ಟರು.
ಕಾಂತರಾಜ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ 1 ಲಕ್ಷದ 50 ಸಾವಿರ ಶಿಕ್ಷಕರು ಪಾಲ್ಗೊಂಡಿದ್ದು, ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಅನೇಕ ಐಎಎಸ್ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಅಂದಾಜು 180 ಕೋಟಿ ರೂ. ವೆಚ್ಚ ಮಾಡಿ ಅತ್ಯಂತ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ. ಈ ವರದಿ ಎಲ್ಲ ವರ್ಗದಲ್ಲಿನ ನೊಂದ ಜನರಿಗೆ ಸರ್ಕಾರದ ಸೌಲಭ್ಯವನ್ನು ತಲುಪಿಸಲು ಬುನಾದಿ ಆಗಲಿದೆ. ಅದರಲ್ಲೂ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಲು ಸಹಕಾರಿ ಆಗಲಿದೆ. ಮೀಸಲಾತಿ, ಸೌಲಭ್ಯ ಹಂಚಿಕೆ ವೇಳೆ ಯಾವ ಆಧಾರದ ಮೇಲೆ ಇದನ್ನು ಜಾರಿಗೊಳಿಸಿದ್ದೀರಾ, ನಿಮ್ಮಲ್ಲಿ ಏನಾದ್ರೂ ಅಂಕಿ-ಅಂಶಗಳು ಇವೆಯೇ ಎಂದು ಪದೇ ಪದೆ ಕೋರ್ಟ್ ಪ್ರಶ್ನೆಗೆ ಕಾಂತರಾಜ್ ಆಯೋಗದ ವರದಿ ಉತ್ತರವಾಗಲಿದೆ ಎಂದರು.
ಆದ್ದರಿಂದ ಕಾಂತರಾಜ್ ಆಯೋಗ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿರುವ ವರದಿ ಕುರಿತು ಯಾವುದೇ ರೀತಿ ಟೀಕೆ, ಆರೋಪ, ಬೆದರಿಕೆ, ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಜಗ್ಗಬಾರದು. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ, ಚರ್ಚಿಸಿ ವರದಿಯನ್ನು ಬಹಿರಂಗಪಡಿಸಿ ಮಂಡಿಸಬೇಕು. ಬಳಿಕ ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಬಹುದು. ಈ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದಲೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಂದರ್ಭ ಆಡಳಿತದ ವಿರುದ್ಧ ಕೆಲವರು ತಿರುಗಿಬಿದ್ದಿದ್ದಾರೆ. ಸಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ವಿ.ಪಿ.ಸಿಂಗ್, ದೇವರಾಜ ಅರಸು ಸೇರಿ ಅನೇಕರ ಕಾಲದಲ್ಲಿ ನೊಂದ ಜನರಿಗೆ ಮೀಸಲಾತಿ ಕೊಡಲು ಅಡ್ಡಿಗಳು ಎದುರಾಗಿವೆ. ಆದರೂ ಅವರು ಯಾವುದೇ ಒತ್ತಡ, ಪ್ರತಿಭಟನೆಗಳಿಗೆ ಬೆದರದೆ ಹಕ್ಕು ಕಲ್ಪಿಸಿದ್ದಾರೆ ಎಂದು ಹೇಳಿದರು.
ಅದೇ ಹಾದಿಯಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಾಗುತ್ತಾರೆಂಬ ವಿಶ್ವಾಸ ಇದೆ. ಈಗಾಗಲೇ ಹಲವರು ಬಾರಿ ಅವರು ತಮ್ಮ ಮಾತು, ನಡೆ ಮೂಲಕ ದೃಢಪಡಿಸಿದ್ದು, ಜಾತಿ ಗಣತಿ ವರದಿ ಜಾರಿ ಮಾಡುವುದಾಗಿ ತಿಳಿಸಿದ್ದು, ಅದರಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಶಾಸಕ ಬಸವಂತಪ್ಪ ಮತ್ತಿತರರು ಹಾಜರಿದ್ದರು.