SUDDIKSHANA KANNADA NEWS/ DAVANAGERE/ DATE:05-11-2024
ದಾವಣಗೆರೆ: ಹರಿಹರ ತಾಲೂಕಿನ ಗುತ್ತೂರು ಗ್ರಾಮದ ನದಿಯಲ್ಲಿ ಇಬ್ಬರು ಟ್ರ್ಯಾಕ್ಟರ್ ತೊಳೆಯಲು ಹೋದಾಗ ಮರಳಿನ ಗುಂಡಿಯಲ್ಲಿ ಮುಳುಗಿ ಸಾವು ಕಂಡ ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಗಣಿ ಇಲಾಖೆಯ ಭೂ ವಿಜ್ಞಾನಿಗಳು, ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುತ್ತೂರು ಗ್ರಾಮದ ಎ. ಪಿ. ಆನಂದ್ ಹಾಗೂ ಆರ್. ಬಿ. ರವಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಣ್ಣಪ್ಪ ಗಿಡ್ಡಬಸಪ್ಪರ್ (48) ಹಾಗೂ ಪ್ರಶಾಂತ್ ಗಿಡ್ಡಬಸಪ್ಪರ್ (16) ಮೃತಪಟ್ಟಿದ್ದರು. ಸಂತ್ರಸ್ತರ ಕುಟುಂಬದವರು ಮತ್ತು ಗ್ರಾಮಸ್ಥರ ಒತ್ತಾಯದ ಮೇರೆಗೆ ಗಣಿ ಇಲಾಖೆಯ ಭೂ ವಿಜ್ಞಾನಿ ಎಸ್. ಕವಿತಾ, ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.
ತುಂಗಾಭದ್ರಾ ನದಿಯಲ್ಲಿ ಇಬ್ಬರು ಮುಳುಗಿ ಮೃತಪಟ್ಟ ಪ್ರಕರಣದ ಬಳಿಕ ಗ್ರಾಮಸ್ಥರು ಆಕ್ರೋಶಗೊಂಡಿದ್ದರು. ಗ್ರಾಮದ ಸಮೀಪದ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗಾಗಿ ಆಳವಾದ ಗುಂಡಿ ಅಗೆಯಲಾಗಿದೆ. ಇದಕ್ಕೆ ಆನಂದ್ ಮತ್ತು ರವಿ ಅವರೇ ಕಾರಣ. ನನ್ನ ಸಹೋದರ ಮತ್ತು ಆತನ ಪುತ್ರನ ಸಾವಿಗೆ ಇವರಿಬ್ಬರೇ ಕಾರಣ. ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ಸುರೇಶ್ ಸಗರಿ ಅವರು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದ ಅನೇಕ ಸಮಸ್ಯೆಗಳಾಗುತ್ತಿವೆ. ಗಣಿಗಾರಿಕೆ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಯಿಂದ ಸೃಷ್ಟಿಯಾಗಿರುವ ಆಳವಾದ ಗುಂಡಿಗಳನ್ನು ಅಧಿಕಾರಿಗಳಿಗೆ ಗ್ರಾಮಸ್ಥರು ತೋರಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕವಿತಾ ಅವರು, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಆದಷ್ಟು ಬೇಗ ತಾಲೂಕು ಅಧಿಕಾರಿಗಳ ಸಭೆ ನಡೆಸಿ ಕಾರ್ಯಪಡೆ ಸಭೆ ನಡೆಸಲಾಗುವುದು. ಗುತ್ತೂರು ಗ್ರಾಮದ ನದಿ ದಡದಲ್ಲಿ ಮರಳು ಗಣಿಗಾರಿಕೆಯ ಅಧಿಕೃತ ಪಾಯಿಂಟ್ ಇಲ್ಲ. ಆದರೂ ಇಲ್ಲಿ ಮರಳುಗಾರಿಕೆ ನಡೆದ ಕುರುಹುಗಳು ಪತ್ತೆಯಾಗಿವೆ. ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಮರಳುಗಾರಿಕೆಯಿಂದಾಗಿರುವ ಗುಂಡಿಗಳಿರುವ ಪ್ರದೇಶದಲ್ಲಿ ಎಚ್ಚರಿಕೆಯ ನಾಮಫಲಕಗಳನ್ನು ಅಳವಡಿಸಲಾಗುವುದು. ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ರಾತ್ರಿ ಗಸ್ತು ಜಾರಿ ಮಾಡುವುದೂ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.