Home ದಾವಣಗೆರೆ ಬಿಜೆಪಿ ಒಳಜಗಳದ ಬೇಗುದಿ ಬಗ್ಗೆ ಮಾಹಿತಿ: 2028ರಲ್ಲಿ ಬಿಜೆಪಿ ಸರ್ಕಾರ ತರಲು ಹಾಕಿಕೊಂಡಿರುವ ಗುರಿಗಳ ಬಗ್ಗೆ ಅಮಿತ್ ಶಾಗೆ ವರದಿ ಕೊಟ್ಟ ಬಿ. ವೈ. ವಿಜಯೇಂದ್ರ!
ದಾವಣಗೆರೆನವದೆಹಲಿಬೆಂಗಳೂರು

ಬಿಜೆಪಿ ಒಳಜಗಳದ ಬೇಗುದಿ ಬಗ್ಗೆ ಮಾಹಿತಿ: 2028ರಲ್ಲಿ ಬಿಜೆಪಿ ಸರ್ಕಾರ ತರಲು ಹಾಕಿಕೊಂಡಿರುವ ಗುರಿಗಳ ಬಗ್ಗೆ ಅಮಿತ್ ಶಾಗೆ ವರದಿ ಕೊಟ್ಟ ಬಿ. ವೈ. ವಿಜಯೇಂದ್ರ!

Share
ಅಮಿತ್ ಶಾ
Share

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಹಲವು ಬೆಳವಣಿಗೆಗಳ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಹುಬ್ಬಳ್ಳಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ, ಬಿಜೆಪಿ ಕೇಂದ್ರ ನಾಯಕ ಅಮಿತ್ ಶಾ ಅವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಯಶಸ್ವಿ ಸಾರ್ಥಕ ಸಾರ್ವಜನಿಕ ಸೇವೆ ಮತ್ತು ಸಮರ್ಥ ನಾಯಕತ್ವದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಸಂದರ್ಭದಲ್ಲೇ ಈ ಭೇಟಿ ನಡೆದಿದೆ.

ಹುಬ್ಬಳ್ಳಿಯಲ್ಲಿ ಭೇಟಿಯಾಗಿ ವಿಜಯೇಂದ್ರ ಅವರು ಅಮಿತ್ ಶಾ ಅವರಿಗೆ ಬಿಜೆಪಿ ಒಳಜಗಳದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಂಪೂರ್ಣ ವರದಿ ಸಲ್ಲಿಕೆ

ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಇತ್ತೀಚೆಗೆ ಯಶಸ್ವಿಯಾಗಿ ಸಂಘಟಿಸಿದ್ದ BallariChalo ಪಾದಯಾತ್ರೆಯ ಸಂಪೂರ್ಣ ವಿವರ ಹಾಗೂ ವರದಿಯನ್ನು ವಿಜಯೇಂದ್ರ ಅವರು ಅಮಿತ್ ಶಾ ಅವರಿಗೆ ಸಲ್ಲಿಸಿದರು. ಪಾದಯಾತ್ರೆಯುದ್ದಕ್ಕೂ ಅಸಂಖ್ಯಾತ ಕಾರ್ಯಕರ್ತರು, ಸ್ಥಳೀಯ ನಾಯಕರು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ಬೆಂಬಲದ ಕುರಿತು ವಿವರವಾಗಿ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

ವರಿಷ್ಠರ ಮೆಚ್ಚುಗೆ ಮತ್ತು ಮುಂದಿನ ತಂತ್ರಗಾರಿಕೆ

ರಾಜ್ಯದಲ್ಲಿ ಪಕ್ಷದ ಸಂಘಟನೆ ಮತ್ತು ‘ಬಳ್ಳಾರಿ ಚಲೋ’ ಪಾದಯಾತ್ರೆಯ ಮೂಲಕ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವಲ್ಲಿ ಬಿಜೆಪಿ ತೋರಿದ ಸಕ್ರಿಯ ಹೋರಾಟಕ್ಕೆ ಅಮಿತ್ ಶಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳನ್ನು ಮತ್ತಷ್ಟು ತೀವ್ರವಾಗಿ ಜನರಿಗೆ ತಲುಪಿಸಲು ಮತ್ತು ಪ್ರತಿಭಟನೆಯನ್ನು ಗಟ್ಟಿಗೊಳಿಸಲು ಅಗತ್ಯವಿರುವ ತಂತ್ರಗಾರಿಕೆ ಕುರಿತು ವರಿಷ್ಠರಿಂದ ಸೂಕ್ತ ಮಾರ್ಗದರ್ಶನ ಪಡೆಯಲಾಯಿತು.

2028ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವ ಸ್ಪಷ್ಟ ಗುರಿಯೊಂದಿಗೆ, ಪಕ್ಷದ ಎಲ್ಲಾ ವಿಭಾಗಗಳನ್ನು ಒಗ್ಗೂಡಿಸಿ ಜನಜಾಗೃತಿ ಹಾಗೂ ಬೀದಿಗಿಳಿದು ಹೋರಾಡುವ ಕಾರ್ಯಕ್ರಮಗಳನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ.

ಬಿಜೆಪಿಯಲ್ಲಿ ಕೆಲ ನಾಯಕರು ತಮ್ಮನ್ನು ವಿರೋಧಿಸುತ್ತಿರುವ ಮತ್ತು ಮುಜುಗರವಾಗುವಂತೆ ಮಾಡುವ ಕುರಿತಂತೆಯೂ ವಿಜಯೇಂದ್ರ ಅಮಿತ್ ಶಾ ಅವರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ ಅವರು ಹೈಕಮಾಂಡ್ ಎಲ್ಲವನ್ನೂ ನೋಡಿಕೊಳ್ಳಲಿದೆ. ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share

Leave a comment

Leave a Reply

Your email address will not be published. Required fields are marked *