ಹಾಸನ: ಹಾಸನ ಜಿಲ್ಲೆಯ (Hassan news) ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ (Karnataka Rain News) ಮುಂದುವರಿದಿದ್ದು, ಶಿರಾಡಿ ಘಾಟಿಯ (Shiradi Ghat) ರೈಲ್ವೆ ಹಳಿಯ (Railway Track) ಮೇಲೆ ಮಣ್ಣು ಕುಸಿತ (landslide) ಆಗಿದೆ. ಸಕಲೇಶಪುರ (Sakaleshpur) ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದಿದ್ದು, ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರ ಬಂದ್ (Trains cancelled) ಮಾಡಲಾಗಿದೆ. ಜೊತೆಗೆ ಶಾಂತಿಗ್ರಾಮ ಬಳಿ ಚಲಿಸುತ್ತಿರುವ ರೈಲಿನ ಮೇಲೆಯೇ ಮಣ್ಣು ಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಅಪಾಯ ತಪ್ಪಿದೆ.
ಕಿಲೋಮೀಟರ್ ನಂಬರ್ 63ರಲ್ಲಿ ರೈಲ್ವೆ ಹಳಿಯ ಮೇಲೆ ನಿನ್ನೆ ರಾತ್ರಿ ಮಣ್ಣು ಕುಸಿತವಾಗಿತ್ತು. ಇದರಿಂದಾಗಿ ಬೆಂಗಳೂರು- ಹಾಸನ- ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಇಲಾಖೆ ಬಂದ್ ಮಾಡಿದೆ. ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ರೈಲು ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ.
ನಿನ್ನೆ ಸಂಜೆಯಿಂದ ಹಳಿ ದುರಸ್ತಿ ಹಾಗು ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಸಂಜೆಯಿಂದಲೇ ಬೆಂಗಳೂರು ಮಂಗಳೂರು ನಡುವಿನ ಎಲ್ಲಾ ಪ್ರಯಾಣಿಕ ಹಾಗು ಗೂಡ್ಸ್ ರೈಲು ಸಂಚಾರ ರದ್ದುಪಡಿಸಲಾಗಿದ್ದು, ರೈಲ್ವೆ ಇಲಾಖೆ ನಿನ್ನೆ ರೈಲಿನಲ್ಲಿ ಸಿಲುಕಿದ್ದವರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ. ಅಪಾರ ಪ್ರಮಾಣದ ಮಣ್ಣು ಕುಸಿದ ಹಿನ್ನೆಲೆಯಲ್ಲಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.