ಚಂಡೀಗಢ: ಹರಿಯಾಣದ ಪಂಚಕುಲದ ಸರ್ಕಾರಿ ಶಾಲೆಯೊಂದರ ತರಗತಿಯಲ್ಲಿ 3ನೇ ತರಗತಿಯ ಬಾಲಕನಿಂದ ಭೀಕರ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ 6 ವರ್ಷದ ವಿಶೇಷಚೇತನ ಕಿಂದರ್‌ಗಾರ್ಡನ್ ಬಾಲಕಿ, ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ಗುಣಮುಖಳಾಗಿ ಹೆತ್ತವರೊಂದಿಗೆ ಮನೆಗೆ ವಾಪಸಾಗಿದ್ದಾರೆ. ಅಕ್ಟೋಬರ್ 28 ರಂದು ನಡೆದಿದ್ದ ಈ ಕ್ರೂರ ಹಲ್ಲೆ ಪ್ರಕರಣವು ದೇಶಾದ್ಯಂತ ಭಾರೀ ಆಕ್ರೋಶ ಹಾಗೂ ಕಳವಳಕ್ಕೆ ಕಾರಣವಾಗಿತ್ತು.
ಆಸ್ಪತ್ರೆಯಿಂದ ಬಿಡುಗಡೆಗೊಂಡು ಮಗು ಮನೆಗೆ ಮರಳಿರುವುದು ಆಕೆಯ ಕುಟುಂಬಸ್ಥರಿಗೆ ಮತ್ತು ಹಾರೈಸಿದ್ದ ಕೋಟ್ಯಂತರ ಜನರಿಗೆ ನೆಮ್ಮದಿ ತಂದಿದೆ. ಈ ನಡುವೆ, ಅನಿಲ್ ಥಾಪರ್ ಎಂಬ ಸಮಾಜ ಸೇವಕರೊಬ್ಬರು ಮುಂದೆಬಂದು ಬಾಲಕಿಯ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ.
ಘಟನೆಯ ಹಿನ್ನೆಲೆ: ಅಕ್ಟೋಬರ್ 28 ರಂದು ಪಂಚಕುಲದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿಯ ಬಾಲಕನೊಬ್ಬ KG ವಿದ್ಯಾರ್ಥಿನಿಯ ಕೂದಲನ್ನು ಹಿಡಿದು ಮೇಜಿಗೆ ತಲೆ ಜಜ್ಜಿ, ಹೂವಿನ ಕುಂಡ ಹಾಗೂ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸರ್ಕಾರದ ಕ್ರಮ ಹಾಗೂ ತನಿಖೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಸರ್ಕಾರವು 5 ಸದಸ್ಯರ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿದೆ. ಅಲ್ಲದೆ, ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಮತ್ತು ರಾಜ್ಯದಾದ್ಯಂತ ಶಾಲೆಗಳ ಸುರಕ್ಷತಾ ಆಡಿಟ್ ನಡೆಸುವುದಾಗಿ ತಿಳಿಸಿದೆ.
ಶಾಲೆ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ: ಕರ್ತವ್ಯಲೋಪ ಆರೋಪದಡಿ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಬಾಲಕ ಅಪ್ರಾಪ್ತನಾಗಿರುವುದರಿಂದ ಜುವೆನೈಲ್ ಜಸ್ಟೀಸ್ ಕಾಯ್ದೆಯಡಿ ಮಾನಸಿಕ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ.





Leave a comment