ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ಸಿಟಿ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ 24 ವರ್ಷದ ಮೊದಲ ಬಾರಿಯ ಮ್ಯಾರಥಾನ್ ಓಟಗಾರ್ತಿ ರೇಚಲ್ ಅಪಾ, ಫಿನಿಶ್ ಲೈನ್ ತಲುಪಲು ಕೇವಲ ಎರಡು ಮೈಲಿಗಳಷ್ಟಿರುವಾಗ ಸೆಂಟ್ರಲ್ ಪಾರ್ಕ್‌ನಲ್ಲಿ ಕುಸಿದುಬಿದ್ದು ದುರ್ಮರಣ ಹೊಂದಿದ್ದಾರೆ. ನವೆಂಬರ್ 4ರಂದು ವರದಿಯಾದ ಈ ಘಟನೆಯು ಕ್ರೀಡಾವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಬಕ್ನೆಲ್ ವಿಶ್ವವಿದ್ಯಾನಿಲಯದ ಮಾಜಿ ಡಿವಿಷನ್ I ಫೀಲ್ಡ್ ಹಾಕಿ ಆಟಗಾರ್ತಿಯಾಗಿದ್ದ ರೇಚಲ್ ಅಪಾ, ತಿಂಗಳುಗಟ್ಟಲೆ ಕಠಿಣ ತರಬೇತಿ ಪಡೆದಿದ್ದರು. ತಮ್ಮ ಅಜ್ಜ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು, ಅವರ ನೆನಪಿಗಾಗಿ ಹಾಗೂ ಪಾರ್ಕಿನ್ಸನ್ ಫೌಂಡೇಶನ್ ಚಾಂಪಿಯನ್ಸ್ ಚಾರಿಟಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಅವರು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೊನೆಯ ಕ್ಷಣಗಳು: ರೇಚಲ್ ತಾಯಿ ಮೈಕೆಲ್ ಅಪಾ ಮೈಲಿ 14ರಲ್ಲಿ ಮಗಳ ವಿಡಿಯೋ ಸೆರೆಹಿಡಿದಿದ್ದರು. ಆ ವೇಳೆ ರೇಚಲ್ ಅತ್ಯಂತ ಖುಷಿಯಿಂದ ಓಡುತ್ತಿದ್ದರು. ಮೈಲಿ 18 ಮತ್ತು 19ನ್ನು ದಾಟಿದಾಗ ತಂದೆ ಸ್ಟೀವ್ ಅಪಾ ಜೊತೆ ಅವರು ಮೆಸೇಜ್ ಮೂಲಕ ಮಾತನಾಡಿದ್ದರು.
ಆರೋಗ್ಯ ಸ್ಥಿತಿ: ರೇಚಲ್ ಸಂಪೂರ್ಣ ಸದೃಢರಾಗಿದ್ದರು ಮತ್ತು ಪರಿಪೂರ್ಣ ಆರೋಗ್ಯ ಹೊಂದಿದ್ದರು ಎಂದು ಅವರ ತಂದೆ ಬಿಬಿಸಿಗೆ ತಿಳಿಸಿದ್ದಾರೆ.
ಮರಣಕ್ಕೆ ಕಾರಣ: ಅತಿಯಾದ ದೈಹಿಕ ಶ್ರಮದಿಂದಾಗಿ ಸ್ನಾಯುಗಳು ಮುರಿದು ರಕ್ತಕ್ಕೆ ವಿಷ ಸೇರುವ ‘ರಾಬ್ಡೊಮಯೊಲಿಸಿಸ್’ (Rhabdomyolysis) ಸಮಸ್ಯೆಯಿಂದ ಅವರು ಮೃತಪಟ್ಟಿರುವುದಾಗಿ ತಂದೆ ತಿಳಿಸಿದ್ದು, ನ್ಯೂಯಾರ್ಕ್ ವೈದ್ಯಕೀಯ ಪರೀಕ್ಷಕರ ಕಚೇರಿಯು ಸಾವಿನ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದೆ.
ಮ್ಯಾರಥಾನ್ ಆಯೋಜಕರಾದ ‘ನ್ಯೂಯಾರ್ಕ್ ರೋಡ್ ರನ್ನರ್ಸ್’ ಸಂಸ್ಥೆಯು ರೇಚಲ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದೆ. ಈ ವರ್ಷದ ನ್ಯೂಯಾರ್ಕ್ ಮ್ಯಾರಥಾನ್‌ನಲ್ಲಿ 61,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.





Leave a comment