ದಾವಣಗೆರೆ: ಇನ್‌ಫ್ಲುಯೆಂಜಾ (ಹೆಚ್1 ಎನ್1) ವೈರಸ್ / ಋತುಮಾನದ ಜ್ವರ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆಯು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಅಗತ್ಯ ಜಾಗ್ರತೆ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
ಇತ್ತೀಚೆಗೆ ರಾಜ್ಯ ಆರೋಗ್ಯ ಸಚಿವರು ನಡೆಸಿದ ವೀಡಿಯೊ ಕಾನ್ಫರೆನ್ಸ್ ನಿರ್ದೇಶನದಂತೆ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರೋಗ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗಿದೆ.
ಕರ್ನಾಟಕದಲ್ಲಿ ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ತೀವ್ರ ಸ್ವರೂಪದ ಜ್ವರ, ಕೆಮ್ಮು, ಶೀತ ಮತ್ತು ಹಳದಿ ಕಫ, ಗಂಟಲು ಕೆರೆತ ಹಾಗೂ ಅತಿಯಾದ ಮೈ-ಕೈ ನೋವು ಉಸಿರಾಟದ ತೊಂದರೆ ಮತ್ತು ಕೋವಿಡ್-19 ಮಾದರಿಯ ಲಕ್ಷಣಗಳು ಹೆಚ್ಚು ಕಂಡುಬರುತ್ತವೆ.
ಏನು ಮಾಡಬೇಕು?
ಸೀನುವಾಗ ಮತ್ತು ಕೆಮ್ಮುವಾಗ ಮೂಗು-ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
ಸೋಪು ಮತ್ತು ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು.
ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು.
ರೋಗಲಕ್ಷಣಗಳಿರುವ ವ್ಯಕ್ತಿಗಳು ಪ್ರತ್ಯೇಕವಾಗಿ ಇರಬೇಕು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಏನು ಮಾಡಬಾರದು?
ಕಣ್ಣು, ಮೂಗು ಮತ್ತು ಬಾಯಿಯನ್ನು ಕೈಗಳಿಂದ ಪದೇ ಪದೇ ಮುಟ್ಟಬಾರದು.
ವೈದ್ಯರ ಸಲಹೆ ಇಲ್ಲದೆ ಸ್ವಯಂ-ಔಷಧೋಪಚಾರ ಮಾಡಿಕೊಳ್ಳಬಾರದು.
ರೋಗಲಕ್ಷಣಗಳಿದ್ದಾಗ ಜನಸಂದಣಿ ಸ್ಥಳಗಳಿಗೆ ಹೋಗುವುದು, ಕೈ ಕುಲುಕುವುದನ್ನು ತಪ್ಪಿಸಬೇಕು.
ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹಿರಿಯ ನಾಗರಿಕರು ಮತ್ತು ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು ರೋಗಲಕ್ಷಣ ಇರುವ ವ್ಯಕ್ತಿಗಳಿಂದ ದೂರವಿರಬೇಕು.
ಆಸ್ಪತ್ರೆಗಳಲ್ಲಿ ಸಿದ್ಧತೆ:
ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶಂಕಿತ ರೋಗಿಗಳಿಗೆ ಪ್ರತ್ಯೇಕ ವೈರಲ್ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್, ವೆಂಟಿಲೇಟರ್ ಹಾಗೂ ತುರ್ತು ಚಿಕಿತ್ಸೆಗೆ ಬೇಕಾದ ಔಷಧಿಗಳ ದಾಸ್ತಾನು ಲಭ್ಯವಿದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳಲ್ಲಿ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.





Leave a comment