ವಲ್ಸಾದ್ (ಗುಜರಾತ್): ಕೌಟುಂಬಿಕ ಕಲಹ ಹಾಗೂ ಮದ್ಯಪಾನದ ಚಟದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕನೊಬ್ಬ ತನ್ನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ಬಳಿಕ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಘಟನೆ ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು 50 ವರ್ಷದ ಶಾಲಾ ಶಿಕ್ಷಕ ಸುರೇಶ್ ವಾಘ್ಮಾರೆ ಎಂದು ಗುರುತಿಸಲಾಗಿದ್ದು, ಈತನ ಪತ್ನಿ ಆನಂದಿ (48) ಕೊಲೆಯಾದ ದುರ್ದೈವಿ.
ಘಟನೆಯ ವಿವರ:
ಪೋಲಿಸರ ಮಾಹಿತಿ ಪ್ರಕಾರ, ಸುರೇಶ್ ವಾಘ್ಮಾರೆ ಮತ್ತು ಆನಂದಿ ದಂಪತಿಗೆ ಮದ್ಯಪಾನ ಮಾಡುವ ಅಭ್ಯಾಸವಿತ್ತು. ಕುಡಿದು ಮನೆಗೆ ಬರುವುದು ಮತ್ತು ಗೃಹಕೃತ್ಯಗಳ ವಿಚಾರವಾಗಿ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಕುಟುಂಬಸ್ಥರು ಹಲವು ಬಾರಿ ಸಂಧಾನ ಮಾಡಲು ಯತ್ನಿಸಿದ್ದರೂ ಜಗಳ ಶಮನಗೊಂಡಿರಲಿಲ್ಲ.
ಘಟನೆಯ ದಿನದಂದು ಬೆಳಗ್ಗೆ ಸುಮಾರು 5 ಗಂಟೆಗೆ ಆನಂದಿ ಮನೆಗೆ ಹಿಂತಿರುಗಿದಾಗ, ಕುಡಿಯುವ ಚಟದ ವಿಷಯವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೋಪಗೊಂಡ ಸುರೇಶ್, ಪತ್ನಿಯ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಆನಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸಾಕ್ಷ್ಯ ನಾಶಕ್ಕೆ ಯತ್ನ:
ಕೊಲೆಯ ನಂತರ ಆರೋಪಿ ಸುರೇಶ್, ರಕ್ತಸಿಕ್ತವಾಗಿದ್ದ ಬಟ್ಟೆಗಳನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ನಂತರ ಮನೆಗೆ ಬಂದ 27 ವರ್ಷದ ಮಗ ಪ್ರವೀಣ್‌ಗೆ “ನಿನ್ನ ತಾಯಿ ಏಳುತ್ತಿಲ್ಲ” ಎಂದು ಸುಳ್ಳು ಹೇಳಿ ನಂಬಿಸಲು ಯತ್ನಿಸಿದ್ದಾನೆ.
ಆದರೆ ತಾಯಿ ಮೃತಪಟ್ಟಿರುವುದನ್ನು ಗಮನಿಸಿದ ಮಗ ಪ್ರವೀಣ್ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸುರೇಶ್ ವಾಘ್ಮಾರೆನನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಆರೋಪಿಯು ರಕ್ತಸಿಕ್ತ ಬಟ್ಟೆಗಳನ್ನು ಸುಟ್ಟುಹಾಕಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಸುಟ್ಟ ಬಟ್ಟೆಯ ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.




Leave a comment