SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ: ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಆಗಸ್ಟ್ ತಿಂಗಳಲ್ಲಿ ಶೇ 90 ರಷ್ಟು ಮಳೆ ಕೊರತೆ ಎದುರಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದ 19 ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದು 19 ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಬಿಸಿಲು ಇರುವುದರಿಂದ ಮುಂದೆ ಸಮಸ್ಯೆಯಾಗಲಿರುವ 126 ಗ್ರಾಮಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು ಇಲ್ಲಿ ಖಾಸಗಿ ಕೊಳವೆಬಾವಿ ಗುರುತಿಸಿಟ್ಟುಕೊಳ್ಳಲಾಗಿದೆ. ಅವುಗಳು ಲಭ್ಯವಾಗದಲಿದ್ದಲ್ಲಿ ಸಮಸ್ಯೆಯಾದ 24 ಗಂಟೆಯೊಳಗೆ ಟ್ಯಾಂಕರ್‍ಗಳ ಮೂಲಕ ನೀರು ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ. ಭದ್ರಾ ಜಲಾಶಯದ ಮೂಲಕ ತುಂಗಭದ್ರಾ ನದಿಗೆ ಹಾಗೂ ಕಾಲುವೆಗಳಿಗೆ ನೀರು ಬಿಡಿಸಲಾಗಿದೆ. ಶಾಂತಿಸಾಗರದಿಂದ ಹಲವು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದ್ದು ಕಾಲುವೆ ಮೂಲಕ ಶಾಂತಿಸಾಗರಕ್ಕೆ ನೀರು ಬಿಡಿಸಲಾಗಿದೆ ಎಂದರು.
ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ತಲುಪಿಸುವ ಉದ್ದೇಶದಿಂದ ನಾಲೆಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್‍ಸೆಟ್‍ಗಳ ತೆರವಿಗೆ ತಂಡಗಳನ್ನು ರಚಿಸಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಕಾನೂನಾತ್ಮಕ ಸಮಸ್ಯೆ ಎದುರಾಗುತ್ತದೆ, ಅಂತಹ ಭಾಗದಲ್ಲಿ 144 ಸೆಕ್ಷನ್ ಜಾರಿಗೊಳಿಸಲು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೊಳವೆಬಾವಿ ಕೊರೆಸಲು ಅನುಮತಿ ಬೇಕು:
ಅಂತರ್ಜಲ ಮಟ್ಟ ಕಡಿಮೆಯಾಗಿದ್ದರಿಂದ ಕೊಳವೆಬಾವಿ ಕೊರೆಯಲು ನಿರ್ಬಂಧವಿದೆ. ಕೊಳವೆಬಾವಿ ಕೊರೆಯಲು ರಿಗ್ ಮಾಲಿಕರು ನಮೂನೆ-7 ರಲ್ಲಿ ಅನುಮತಿ ಪಡೆಯಬೇಕಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ಬೇಸಿಗೆ ಎದುರಾಗಿದ್ದು ಈಗಾಗಲೇ 19 ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದಾದ 18 ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್ ಮೂಲಕ ನೀರು ಪೂರೈಕೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.