SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ: ಮುಂಬರುವ 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸನ್ನದ್ದರನ್ನಾಗಿಸಲು ಚುನಾವಣಾ ತಂಡಗಳಿಗೆ ಗುರುವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು.
ಸಹಾಯಕ ಚುನಾವಣಾಧಿಕಾರಿಗಳು, ಚೆಕ್ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುವ ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ ಎಸ್ಎಸ್ಟಿ, ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ಸರ್ವಲೆನ್ಸ್ ಟೀಮ್, ವೀಡಿಯೋ ವೀವಿಂಗ್ ಟೀಮ್,
ಅಬಕಾರಿ ತಂಡ, ವಾಣಿಜ್ಯ ತೆರಿಗೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವಿವಿಧ ತಂಡಗಳ ನೋಡಲ್ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯಗಳ ಬಗ್ಗೆ ತರಬೇತಿ ನೀಡಲಾಯಿತು.
ಚುನಾವಣಾ ಸಂದರ್ಭದಲ್ಲಿ ಚೆಕ್ಪೋಸ್ಟ್ ಗಳಲ್ಲಿ ಅನುಸರಿಸಬೇಕಾದ ಕ್ರಮಗಳು, ಚುನಾವಣಾ ರ್ಯಾಲಿಗಳ ಸಂದರ್ಭದಲ್ಲಿ ಖರ್ಚುವೆಚ್ಚಗಳ ನಿಗಾ, ಅನುಮತಿ, ಪಡೆಯುವ ಬಗ್ಗೆ, ಚುನಾವಣಾ ಪ್ರಚಾರಕ್ಕೆ ಅನುಮತಿ ಇಲ್ಲದೆ ಕರಪತ್ರ ಹಂಚಿಕೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಹಣ, ಮದ್ಯ ಹಂಚಿಕೆ, ಉಡುಗೊರೆಗಳ ಹಂಚಿಕೆ ಕುರಿತಂತೆ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಕಾಯಿದೆ, ಸೆಕ್ಷನ್ಗಳ ಬಗ್ಗೆ ಎಲ್ಲಾ ತಂಡಗಳಿಗೆ ತರಬೇತಿ ನೀಡಲಾಯಿತು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯನ್ನು ಪಾರದರ್ಶಕ, ನ್ಯಾಯ ಸಮ್ಮತ, ನಿಷ್ಪಕ್ಷಪಾತವಾಗಿ ನಡೆಸಲು ಎಲ್ಲಾ ಸಿಬ್ಬಂದಿಗಳು ಭಾಗವಹಿಸುವಿಕೆಯೊಂದಿಗೆ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ, ಅನುಷ್ಟಾನ ಮಾಡುವ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಸಂಘಟಿತರಾಗಿ ಕೆಲಸ ಮಾಡಬೇಕೆಂದರು.
ಚುನಾವಣಾ ಕರ್ತವ್ಯವನ್ನು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು, ಯಾವುದೇ ನಿರ್ಲಕ್ಷ್ಯತೆ ಸಲ್ಲದು, ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಸರಿಯಾಗಿ ದಾಖಲು ಮಾಡುವ ಮೂಲಕ ಅದಕ್ಕೆ ಪೂರಕವಾದ ಸಾಕ್ಷ್ಯಗಳ ಕ್ರೂಢೀಕರಣ ಮಾಡಿಕೊಳ್ಳಬೇಕೆಂದರು.
ತರಬೇತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ತರಬೇತುದಾರರಾದ ಅರವಿಂದ್ ಐರಾಣಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.