ದಾವಣಗೆರೆ : ಇಲ್ಲಿನ ಜಿಎಂ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗವು “ಜಿಎಂ ವೈಜ್ಞಾನಿಕ ನವೋದ್ಯಮ ಮತ್ತು ಸಂಶೋಧನಾ ಎಲ್ಎಲ್ಪಿ” ಸಹಯೋಗದಲ್ಲಿ “ಬಯೋವಿಷನ್–2026”: ಹವಾಮಾನ ಸ್ಥಿತಿಸ್ಥಾಪಕತೆ, ಆಹಾರ ಭದ್ರತೆ ಮತ್ತು ಮಾನವ ಆರೋಗ್ಯಕ್ಕಾಗಿ ಜೈವಿಕ ತಂತ್ರಜ್ಞಾನದಲ್ಲಿನ ನವೋದ್ಯಮಗಳು” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು 2026ರ ಆಗಸ್ಟ್ 6 ಮತ್ತು 7ರಂದು ಜಿಎಂ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದ ಎ.ವಿ. ಸಭಾಂಗಣದಲ್ಲಿ ಆಯೋಜಿಸಿದೆ.
ಈ ರಾಷ್ಟ್ರೀಯ ಸಮ್ಮೇಳನವು ದೇಶದ ವಿವಿಧ ಭಾಗಗಳಿಂದ ಆಗಮಿಸುವ ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸಂಶೋಧಕರು, ಕೈಗಾರಿಕಾ ಪರಿಣಿತರು ಹಾಗೂ ವಿದ್ಯಾರ್ಥಿಗಳಿಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ನವೀನ ಸಂಶೋಧನೆಗಳು, ತಂತ್ರಜ್ಞಾನಗಳು ಹಾಗೂ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲು, ಚರ್ಚಿಸಲು ಮತ್ತು ಪರಸ್ಪರ ಸಹಯೋಗವನ್ನು ವೃದ್ಧಿಸಿಕೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂದು ಜಿಎಂಯು ಜೈವಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಪವನ್ ಕೆ.ಜೆ ಹಾಗೂ ಡಾ. ಪ್ರದೀಪ್ ಎಂ.ಜೆ. ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭವು 2026ರ ಆಗಸ್ಟ್ 6ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಐಐಟಿ ಧಾರವಾಡದ ಬಯೋಸೈನ್ಸಸ್ ಮತ್ತು ಬಯೋಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬದ್ರಿನಾಥ ದುಬೇ ಅವರು ಮುಖ್ಯ ಅತಿಥಿಗಳಾಗಿ ಸಮ್ಮೇಳನವನ್ನು ಉದ್ಘಾಟಿಸಿ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನಾ ಪ್ರವೃತ್ತಿಗಳು ಹಾಗೂ ಭವಿಷ್ಯದ ಅವಕಾಶಗಳ ಕುರಿತು ಉದ್ಘಾಟನಾ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಬಸವರಾಜ ಎಸ್. ಹುನಗುಂದ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಆರ್. ಶಂಕಪಾಲ್ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಹ -ಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ. ಎಸ್., ಹಾಗೂ ಸ್ಕೂಲ್ ಆಫ್ ಇಂಜಿನಿಯರಿಂಗ್ನ ನಿರ್ದೇಶಕರಾದ ಡಾ. ಪ್ರವೀಣ್ ಜೆ. ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ ಎಂದು ವಿವರಿಸಿದರು.
ಸಮ್ಮೇಳನದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ತಜ್ಞರ ಉಪನ್ಯಾಸಗಳು, ಆಹ್ವಾನಿತ ಉಪನ್ಯಾಸಗಳು, ಸಂಶೋಧನಾ ಪ್ರಬಂಧಗಳ ಮೌಖಿಕ ಹಾಗೂ ಪೋಸ್ಟರ್ ಪ್ರಸ್ತುತಿಗಳು ಮತ್ತು ತಾಂತ್ರಿಕ ಅಧಿವೇಶನಗಳು ನಡೆಯಲಿವೆ.
ಹೆಚ್ಚಿನ ಒತ್ತು :
ಹವಾಮಾನ ಬದಲಾವಣೆಗೆ ಜೈವಿಕ ತಂತ್ರಜ್ಞಾನದ ಪರಿಹಾರಗಳು, ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ, ಮಾನವ ಆರೋಗ್ಯ ಮತ್ತು ಜೈವವೈದ್ಯಕೀಯ ನವೋದ್ಯಮಗಳು, ಪರಿಸರ ಜೈವಿಕ ತಂತ್ರಜ್ಞಾನ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಆಣ್ವಿಕ ಜೀವಶಾಸ್ತ್ರ ಹಾಗೂ ಆನುವಂಶಿಕ ಇಂಜಿನಿಯರಿಂಗ್, ಜೈವಮಾಹಿತಿ ವಿಜ್ಞಾನ (Bioinformatics), ಜೈವ ಆಧಾರಿತ ಸುಸ್ಥಿರ ತಂತ್ರಜ್ಞಾನಗಳು.
ಈ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಕೈಗಾರಿಕೆಗಳಿಂದ ಸಂಶೋಧಕರು, ಅಧ್ಯಾಪಕರು, ವಿಜ್ಞಾನಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಸುಮಾರು 75 ವಿವಿಧ ಸಂಶೋಧನಾ ಲೇಖನಗಳು ಆಯ್ಕೆಯಾಗಿದ್ದು, ತಜ್ಞರಿಂದ ಪರಿಶೀಲಿಸಲ್ಪಟ್ಟ ಈ ಸಂಶೋಧನಾ ಲೇಖನಗಳನ್ನು ಸಮ್ಮೇಳನದ ಕಾರ್ಯ ವಿವರಗಳಲ್ಲಿ (Conference Proceedings) ಪ್ರಕಟಿಸಲಾಗುವುದು. ಸಮ್ಮೇಳನದ ಉದ್ಘಾಟನಾ ಸಮಾರಂಭ ಹಾಗೂ ತಾಂತ್ರಿಕ ಅಧಿವೇಶನಗಳಲ್ಲಿ ಶಿಕ್ಷಕರು, ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಕೈಗಾರಿಕಾ ಪರಿಣಿತರು ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಎಂ ವಿಶ್ವವಿದ್ಯಾಲಯದ ಸಂಶೋಧನಾ ಸಹ ಡೀನ್ ಡಾ. ಸ್ವರೂಪ್ ಕೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮತ್ತು ಪ್ರಚಾರ ವಿಭಾಗದ ಡೀನ್ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ. ಹಾಗೂ ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ್ ಕುಮಾರ್ ಉಪಸ್ಥಿತರಿದ್ದರು.
- Biotech startups
- Biotechnology conference
- BioVision 2026
- Climate resilience
- DAVANAGERE NEWS
- Dr Badrinath Dubey
- Food security
- GM University
- GMU Davanagere
- IIT Dharwad
- National conference 2026
- ಆಹಾರ ಭದ್ರತೆ
- ಐಐಟಿ ಧಾರವಾಡ
- ಜಿಎಂ ವಿಶ್ವವಿದ್ಯಾಲಯ
- ಜಿಎಂಯು ದಾವಣಗೆರೆ
- ಜೈವಿಕ ತಂತ್ರಜ್ಞಾನ ಸಮ್ಮೇಳನ
- ಜೈವಿಕ ನವೋದ್ಯಮ
- ಡಾ ಬದ್ರಿನಾಥ ದುಬೇ
- ದಾವಣಗೆರೆ ಸುದ್ದಿ
- ಬಯೋವಿಷನ್ 2026
- ಸಮ್ಮೇಳನ 2026
- ಹವಾಮಾನ ಸ್ಥಿತಿಸ್ಥಾಪಕತೆ






Leave a comment