ದಾವಣಗೆರೆ ಜಿಎಂ ವಿಶ್ವವಿದ್ಯಾಲಯ, ದಾವಣಗೆರೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗವು GM Scientific Innovation & Research LLP ಸಹಯೋಗದಲ್ಲಿ “ಮುಂದಿನ ತಲೆಮಾರಿನ ಮೂಲಸೌಕರ್ಯ: ಕಾಂಕ್ರೀಟ್ ರಚನೆಗಳು, ಪರಿಸರ ಸುಸ್ಥಿರತೆ ಮತ್ತು ಸಾರಿಗೆ ಸಂಪರ್ಕತೆ (NICET–2026)” ಎಂಬ ವಿಷಯದ ಮೇಲೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು 2026ರ ಜುಲೈ 30 ಮತ್ತು 31ರಂದು ಜಿಎಂ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದ ಎ.ವಿ. ಸಭಾಂಗಣದಲ್ಲಿ ಆಯೋಜಿಸಿದೆ.
ಈ ರಾಷ್ಟ್ರೀಯ ಸಮ್ಮೇಳನವು ದೇಶದ ವಿವಿಧ ಭಾಗಗಳಿಂದ ಆಗಮಿಸುವ ಶಿಕ್ಷಣ ತಜ್ಞರು, ಸಂಶೋಧಕರು, ಕೈಗಾರಿಕಾ ಪರಿಣಿತರು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಆಲೋಚನೆಗಳು, ನವೀನ ತಂತ್ರಜ್ಞಾನಗಳು ಹಾಗೂ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿನ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಉತ್ತಮ ವೇದಿಕೆಯಾಗಲಿದೆ ಎಂದು ಜಿಎಂ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಬಿ.ಕೆ. ವರುಣ್ ತಿಳಿಸಿದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಜುಲೈ 28,2026 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಉದ್ಘಾಟನಾ ಸಮಾರಂಭವು 2026ರ ಜುಲೈ 30ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದ್ದು, ಎನ್‌ಐಟಿಕೆ, ಸುರತ್ಕಲ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿಶಿಷ್ಟ ನಿವೃತ್ತ ಪ್ರಾಧ್ಯಾಪಕರಾಗಿದ್ದು, ಖ್ಯಾತ ರಚನಾ ಸಲಹೆಗಾರರಾದ ಡಾ. ಕೆ.ಎಸ್. ಬಾಬು ನಾರಾಯಣ ಅವರು ಸಮ್ಮೇಳನವನ್ನು ಉದ್ಘಾಟಿಸಿ, ಮೂಲಸೌಕರ್ಯ ಅಭಿವೃದ್ಧಿಯ ಇತ್ತೀಚಿನ ಪ್ರವೃತ್ತಿಗಳು ಹಾಗೂ ಭವಿಷ್ಯದ ದಿಕ್ಕುಗಳ ಕುರಿತು ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ವಹಿಸಲಿದ್ದಾರೆ. ಸಹ ಉಪ ಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ. ಎಸ್., ಸಂಶೋಧನಾ ಸಲಹೆಗಾರರಾದ ಡಾ. ಸಿ.ಎಸ್. ರಮೇಶ್, ಸ್ಕೂಲ್ ಆಫ್ ಇಂಜಿನಿಯರಿಂಗ್ ನಿರ್ದೇಶಕರಾದ ಡಾ. ಪ್ರವೀಣ್ ಜೆ. ಹಾಗೂ ಸಂಶೋಧನಾ ಮತ್ತು ನ್ಯಾವಿನ್ಯತೆ ಸಹ ಡೀನ್ ಡಾ. ಸ್ವರೂಪ್ ಕೆ. ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಈ ರಾಷ್ಟ್ರೀಯ ಸಮ್ಮೇಳನವನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಭರತರಾಜ್ ಇಟಿಗಿ ವೈ.ಬಿ. ಅವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಸಂಘಟನಾ ಸಮಿತಿಯಲ್ಲಿ ಡಾ. ಬಿ. ಕೆ. ವರುಣ್ ಹಾಗೂ ಡಾ. ಕಿರಣ್ ಕುಮಾರ್ ಎಚ್.ಎಸ್., ಸಹ ಪ್ರಾಧ್ಯಾಪಕರು, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸಮ್ಮೇಳನದ ಪ್ರಮುಖ ವಿಷಯಗಳು:
ಮುಂದಿನ ತಲೆಮಾರಿನ ಕಾಂಕ್ರೀಟ್ ಹಾಗೂ ನಿರ್ಮಾಣ ಸಾಮಗ್ರಿಗಳು, ಸ್ಮಾರ್ಟ್ ಮತ್ತು ಸ್ಥಿತಿಸ್ಥಾಪಕ ರಚನಾ ಇಂಜಿನಿಯರಿಂಗ್, ಸುಸ್ಥಿರ ಪರಿಸರ ಇಂಜಿನಿಯರಿಂಗ್, ಭೂತಾಂತ್ರಿಕ ಮತ್ತು ನೆಲಾಧಾರಿತ ಇಂಜಿನಿಯರಿಂಗ್‌ನಲ್ಲಿನ ನವೀನತೆಗಳು, ಸುಸ್ಥಿರ ಸಾರಿಗೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಮೊಬಿಲಿಟಿ, ಸಮಗ್ರ ಜಲಸಂಪನ್ಮೂಲ ಮತ್ತು ಹೈಡ್ರಾಲಿಕ್ ಇಂಜಿನಿಯರಿಂಗ್, ಆಧುನಿಕ ನಿರ್ಮಾಣ ಇಂಜಿನಿಯರಿಂಗ್ ಹಾಗೂ ಯೋಜನಾ ನಿರ್ವಹಣೆ, ಸ್ಮಾರ್ಟ್ ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆ.
ಈ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸಂಶೋಧಕರು, ಅಧ್ಯಾಪಕರು, ಕೈಗಾರಿಕಾ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಲಿದ್ದಾರೆ. ಸಮ್ಮೇಳನ ಸಂಬಂಧ ಸುಮಾರು 50 ವಿವಿಧ ಸಂಶೋಧನಾ ಲೇಖನಗಳು ಬಂದಿದ್ದು, ಇವುಗಳಲ್ಲಿ ಆಯ್ಕೆಯಾದ ಹಾಗೂ ತಜ್ಞರಿಂದ ಪರಿಶೀಲಿಸಲ್ಪಟ್ಟ 30 ಸಂಶೋಧನಾ ಲೇಖನಗಳನ್ನು ISBN ಹೊಂದಿರುವ ಸಮ್ಮೇಳನದ ಕಾರ್ಯವಿವರಗಳಲ್ಲಿ (Conference Proceedings) ಪ್ರಕಟಿಸಲಾಗುವುದು ಎಂದು ವಿವರಿಸಿದರು.
ಈ ಸಮ್ಮೇಳನವು ಜಿಎಂ ವಿಶ್ವವಿದ್ಯಾಲಯದ ಸಂಶೋಧನಾ ಶ್ರೇಷ್ಠತೆ, ನವೋದ್ಯಮ, ಕೈಗಾರಿಕೆ–ಶೈಕ್ಷಣಿಕ ಸಹಭಾಗಿತ್ವ ಹಾಗೂ ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಯ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸುತ್ತದೆ. ಸಮ್ಮೇಳನದ ಉದ್ಘಾಟನಾ ಸಮಾರಂಭ ಹಾಗೂ ತಾಂತ್ರಿಕ ಅಧಿವೇಶನಗಳಲ್ಲಿ ಶಿಕ್ಷಕರು, ಸಂಶೋಧಕರು, ವಿದ್ಯಾರ್ಥಿಗಳು, ಇಂಜಿನಿಯರ್‌ಗಳು, ಕೈಗಾರಿಕಾ ಪರಿಣಿತರು ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಕಿರಣ್ ಕುಮಾರ್ ಎಚ್.ಎಸ್, ಮಾರ್ಕೆಟಿಂಗ್ ವಿಭಾಗದ ಡೀನ್ ಡಾ. ಟಿ.ಎಂ. ವೀರಗಂಗಾಧರ್ ಸ್ವಾಮಿ, ಅಸಿಸ್ಟೆಂಟ್ ಪಿಆರ್ ಓ ಜಿ.ಎಸ್. ವಸಂತ್ ಕುಮಾರ್ ಉಪಸ್ಥಿತರಿದ್ದರು.
- Civil Engineering Conference
- Concrete Structures Conference
- DAVANAGERE NEWS
- Dr KS Babu Narayan
- GM University Davanagere
- GMU News
- Next Generation Infrastructure
- NICET 2026
- Smart Infrastructure
- Sustainable Engineering
- ಕಾಂಕ್ರೀಟ್ ರಚನೆಗಳು
- ಜಿಎಂ ಯುನಿವರ್ಸಿಟಿ ಸುದ್ದಿ
- ಜಿಎಂ ವಿಶ್ವವಿದ್ಯಾಲಯ
- ಡಾ ಕೆ ಎಸ್ ಬಾಬು ನಾರಾಯಣ
- ಡಾ ಬಿ ಕೆ ವರುಣ್
- ದಾವಣಗೆರೆ ಸುದ್ದಿ
- ರಾಷ್ಟ್ರೀಯ ಸಮ್ಮೇಳನ 2026
- ಸಿವಿಲ್ ಇಂಜಿನಿಯರಿಂಗ್
- ಸುಸ್ಥಿರ ಮೂಲಸೌಕರ್ಯ





Leave a comment