SUDDIKSHANA KANNADA NEWS/DAVANAGERE/DATE:30-04-2024
ದಾವಣಗೆರೆ: ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 300 ಹಳ್ಳಿಗಳಿಗೂ ಹೆಚ್ಚು ಕಡೆಗಳಲ್ಲಿ ಬಸ್ ಗಳಿಲ್ಲ. ಮೂರು ದಶಕ ಅಧಿಕಾರ ಅನುಭವಿಸಿದರು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಕೇಳಿ. ಅಭಿವೃದ್ಧಿ ಮಾಡದ ಎರಡೂ ರಾಷ್ಟ್ರೀಯ ಪಕ್ಷಗಳ ತಿರಸ್ಕರಿಸಿ. ಸ್ವಾಭಿಮಾನಿಯಾಗಿ ಕಣಕ್ಕಿಳಿದಿರುವ ನನಗೊಂದು ಅವಕಾಶ ಕೊಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಭರವಸೆ ನೀಡಿದರು.
ಚನ್ನಗಿರಿ ತಾಲೂಕಿನ ಮರಡಿ, ತಣಿಗೆರೆ ಗ್ರಾಮದಲ್ಲಿ ರೋಡ್ ಶೋ ನಡೆಸಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕ್ರಾಂತಿ ಮಾಡಿ ತೋರಿಸುತ್ತೇನೆ. ಹಳ್ಳಿಗಳಲ್ಲಿ ಸೂಕ್ತ ಬಸ್ ಸೌಲಭ್ಯ ಇಲ್ಲದ ಕಾರಣ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಎಷ್ಟೋ ಮಕ್ಕಳು ಶಾಲೆ, ಕಾಲೇಜು ಅರ್ಧಕ್ಕೆ ಬಿಟ್ಟಿದ್ದಾರೆ. ಇವರ ಭವಿಷ್ಯ ಏನಾಗಬೇಕು. ಪೋಷಕರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಅಧಿಕಾರಕ್ಕೆ ಬಂದವರ ಕೈಯಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಹೊಸ ನಾಯಕತ್ವ ಸೃಷ್ಟಿ ಆಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನಿಗಳು. ಬಡಿದೆಬ್ಬಿಸುವ ಕೆಲಸ ಮಾಡಿದ್ದೇನೆ. ಯಾವುದೇ ಕೈಗಾರಿಕೆ, ಶಿಕ್ಷಣ ಸಂಸ್ಥೆಗಳನ್ನು ತಂದಿಲ್ಲ. ಗೊತ್ತಿದ್ದೂ ಗೊತ್ತಿದ್ದು ಮತ ಹಾಕಬೇಕಾ ಎಂದು ಆತ್ಮಾವಲೋಕನ
ಮಾಡಿಕೊಳ್ಳಿ ಎಂದು ಹೇಳಿದರು.
ಅಭಿವೃದ್ಧಿ ತರಲ್ಲ, ಸೇವೆ ಮಾಡಲ್ಲ, ಸೌಲಭ್ಯ ಕೊಡಲ್ಲ ಎಂಬುದು ಗೊತ್ತಿದ್ದರೂ ನೀವ್ಯಾಕೆ ಮತ ನೀಡಬೇಕು. ಸತ್ಯ ನಮ್ಮ ಕಣ್ಣೆದುರಿಗೆ ಇದೆ. ಇಂಥವರಿಗೆ ಮತ ಹಾಕಿದರೆ ನಮಗೆ ನಾವು ಮಾಡಿಕೊಂಡ ವಿಶ್ವಾಸ ದ್ರೋಹ, ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಆಗುತ್ತದೆ ಎಂದರು.
ಜಿಲ್ಲೆಯ ಅಭಿವೃದ್ಧಿಗಾಗಿ ದೊಡ್ಡ ದೊಡ್ಡ ಕನಸು ಕಂಡಿದ್ದೇನೆ. ಕ್ಷೇತ್ರದ ಜನರು, ಯುವಕರು, ಮಕ್ಕಳಿಗೆ ಒಳ್ಳೆಯದಾಗಬೇಕು ಎಂದು. ಯುವಕರಿಗೆ ಉದ್ಯೋಗಾವಕಾಶ ಸಿಗುವಂತಾಗಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ. ಇಬ್ಬರನ್ನು ಸೋಲಿಸಲು ಸ್ವಾಭಿಮಾನಿಯಾಗಿ ಸ್ಪರ್ಧೆ ಮಾಡಿ ಗೆಲುವಿಗೆ ಹೋರಾಟ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಹೇಳಿದರು.
ಒಬ್ಬರು ಮನಸ್ಸು ಮಾಡಿದರೆ 200 ರಿಂದ 300 ಮತ ಹಾಕಿಸಬಹುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬೊಬ್ಬರು ನೂರು ಮತ ಹಾಕಿಸಿ. ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ಇದಕ್ಕೆ ನಾನು ನಿಮ್ಮೆಲ್ಲರ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದರು.
ಇಷ್ಟೊಂದು ಸಂಖ್ಯೆಯಲ್ಲಿ ಬಂದಿರುವ ನಿಮಗೆಲ್ಲರಿಗೂ ಧನ್ಯವಾದಗಳು. ತುಂಬಾ ಬೇಸಿಗೆ ಇದೆ. ಆದರೂ ಇಷ್ಟೊಂದು ಜನರು ಸೇರಿರುವುದು ಒಳ್ಳೆಯ ವಿಚಾರ. ಯಾವ ರಾಷ್ಟ್ರೀಯ ಪಕ್ಷಗಳಿಗೂ ಕಡಿಮೆ ಇಲ್ಲದಂತೆ ಪ್ರಚಾರ ನಡೆಸುತ್ತಿದ್ದೇವೆ.
ಪೂರ್ವ ಸಿದ್ಧತೆ ಮಾಡಿಕೊಂಡೇ ಕಣಕ್ಕಿಳಿದಿದ್ದೇವೆ. ಎಲ್ಲಾ ಕಡೆಗಳಲ್ಲಿಯೂ ವಿನಯ್ ಕುಮಾರ್ ಪರ ಅಲೆ ಅಲ್ಲ, ಸುನಾಮಿ ಸೃಷ್ಟಿಯಾಗುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಯೊಂದು ಸಮೀಕ್ಷೆಯೂ ನನ್ನ ಪರವಾಗಿಯೇ ಬರುತ್ತಿದೆ. ಮೇ. 7ಕ್ಕೆ ಕ್ರಮ ಸಂಖ್ಯೆ 28 ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಮತ ನೀಡುವಂತೆ ಪ್ರತಿ ಮನೆಗೂ ತೆರಳಿ ಪ್ರತಿ ಮನಸಿಗೂ ತಿಳಿಸಿ ಹೇಳಿ. ಪ್ರತಿಯೊಂದು ಹಳ್ಳಿಯಲ್ಲಿಯೂ ಇಬ್ಬರ ಜಗಳ ಬೇಡ,
ಮನೆತನ ಬೇಡ. ಇದುವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಮುಂದೆಯೂ ಆಗುವುದಿಲ್ಲ ಎಂಬುದು ಅರ್ಥವಾಗಿದೆ. ಅಭಿವೃದ್ಧಿ ಮಾಡುವ ಮನಸ್ಸಿಲ್ಲದಿದ್ದರೂ ಎರಡು ಪಕ್ಷಗಳು ತನ್ನ ಮನೆತನಕ್ಕೆ ಟಿಕೆಟ್ ತಂದಿರುವುದು ತನ್ನ ಆಸ್ತಿ ಉಳಿಸಿಕೊಳ್ಳಲು ಎಂದು ಆರೋಪಿಸಿದರು.
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ದೊಡ್ಡ ಕೈಗಾರಿಕೆಗಳಿಲ್ಲ, ಅತ್ಯುನ್ನತ ವಿದ್ಯಾ ಸಂಸ್ಥೆಗಳಿಲ್ಲ. ಎರಡು ಮನೆತನದವರ ಆಚೆಯವರು ಶಾಸಕರು, ಸಂಸದರಾಗಬೇಕು. ತಣಿಗೆರೆ ಗ್ರಾಮಕ್ಕೆ ನಾಲ್ಕೈದು ಬಾರಿ ಬಂದು ಹೋಗಿದ್ದೇನೆ. ನನ್ನಂಥ
ಯುವಕನನ್ನು ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ಜನರ ಬೆಂಬಲವೇ ಗ್ಯಾರಂಟಿ
ತಣಿಗೆರೆ ಗ್ರಾಮದಲ್ಲಿ ಎರಡು ಸಾವಿರ ಮತ ಹಾಕಿಸುವುದು ಗ್ಯಾರಂಟಿ ಎಂದು ರೇವಣ ಸಿದ್ಧಪ್ಪ ಹೇಳಿದರು. ರ್ಯಾಲಿ ವೇಳೆ ಭಾಷಣ ಮಾಡುವ ಜಿ. ಬಿ. ವಿನಯ್ ಕುಮಾರ್ ಅವರು ನಿಮ್ಮೂರಲ್ಲಿ ಎಷ್ಟು ಮತಗಳನ್ನು ನನಗೆ ಹಾಕಿಸುತ್ತೀರಾ ಎಂದರು. ಆಗ ರೇವಣಸಿದ್ಧಪ್ಪ ಕನಿಷ್ಠ ಎಂದರೂ 2 ಸಾವಿರ ಮತಗಳು ನಿಮಗೆ ಎಂದ್ರು. ಆಗ ವಿನಯ್ ಕುಮಾರ್ ಅವರು ಬಿಜೆಪಿಯವರದ್ದು ಮೋದಿ ಗ್ಯಾರಂಟಿ, ಕಾಂಗ್ರೆಸ್ ನವರದ್ದು ಸಿದ್ದರಾಮಯ್ಯರ ಗ್ಯಾರಂಟಿ. ನನಗೆ ಜನರ ಬೆಂಬಲವೇ ಗ್ಯಾರಂಟಿ ಎಂದ್ರು. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದರು.
ಅದ್ಧೂರಿ ಸ್ವಾಗತ
ವಿನಯ್ ಕುಮಾರ್ ಅವರು ತಣಿಗೆರೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು. ಜೈ ಜೈ ವಿನಯಕುಮಾರ್, ವಿನಯ್ ಕುಮಾರ್ ಜೈ, ನಮ್ಮ ಮತ ಗ್ಯಾಸ್ ಸಿಲಿಂಡರ್ ಗೆ ವಿಜಯದ ಹೂಮಾಲೆ ವಿನಯ್ ಕುಮಾರ್ ಗೆ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಭಾಷಣದ ವೇಳೆಯಂತೂ ಜನರು ಕೇಕೆ, ಶಿಳ್ಳೆ ಹೊಡೆದು ಬೆಂಬಲ ನೀಡಿದರು.