ಮುಂಬೈ: ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಬಳಸಲಾಗುವ ಅಧಿಕ ಶಬ್ದದ ಡಿಜೆ ಸೌಂಡ್ ಸಿಸ್ಟಮ್ಗಳ ಬಳಕೆಯು ತೀವ್ರ ವಿವಾದ ಹಾಗೂ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಇದರ ನಡುವೆ ಪಿಂಪ್ರಿ-ಚಿಂಚ್ವಾಡದ ಮೋಶಿ ಪ್ರದೇಶದಲ್ಲಿ ವಾಸಿಸುವ ಮಹಿಳೆಯೊಬ್ಬರು, ಅತಿ ಜೋರಾದ ಡಿಜೆ ಶಬ್ದದಿಂದಾಗಿ ತಮ್ಮ ವೃದ್ಧ ತಂದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಗದೆ ಮೃತಪಟ್ಟಿದ್ದಾರೆ ಎಂದು ಕಣ್ಣೀರು ಹಾಕಿ ಗಂಭೀರ ಆರೋಪ ಮಾಡಿದ್ದಾರೆ.
ಮನೆಯ ಕೆಳಭಾಗದಲ್ಲೇ ಡಿಜೆ ಸಿಸ್ಟಮ್ಗಳನ್ನು ಅಳವಡಿಸುವುದರಿಂದ ಕಿವಿಗಡಚಿಕ್ಕುವ ಶಬ್ದ ಉಂಟಾಗಿ ಬಾಗಿಲು, ಕಿಟಕಿಗಳು ಮತ್ತು ಪಾತ್ರೆಗಳು ಕಂಪಿಸುತ್ತವೆ ಎಂದು ವರ್ಷಾ ಗಣೇಶ್ ಕದಮ್ ಆರೋಪಿಸಿದ್ದಾರೆ. ಕುಟುಂಬವು ಕಳೆದ ಹತ್ತು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಹಬ್ಬದ ದಿನಗಳಲ್ಲಿ ಅನಿವಾರ್ಯವಾಗಿ ಮನೆ ಬಿಟ್ಟು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಮಗ ಮತ್ತು ಸ್ವತಃ ವರ್ಷಾ ಅವರು ರೋಗದಿಂದಲೂ (Seizures) ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕಳೆದ ವರ್ಷ ತೀವ್ರ ಅಶ್ವಸ್ಥರಾಗಿದ್ದ ಹಾಗೂ ಆಕ್ಸಿಜನ್ ಬೆಂಬಲದಲ್ಲಿದ್ದ ತಮ್ಮ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಆದರೆ ಹಬ್ಬದ ಆಯೋಜಕರು ಡಿಜೆ ಸೌಂಡ್ ಕಡಿಮೆ ಮಾಡಲು ಒಪ್ಪಲಿಲ್ಲ. ಪರಿಸ್ಥಿತಿ ಗಂಭೀರವಾದ್ದರಿಂದ ತಂದೆಯನ್ನು ಬಾರಾಮತಿ ಬಳಿಯ ಸ್ವಗ್ರಾಮಕ್ಕೆ ಕರೆದೊಯ್ಯಲು ಮುಂದಾದಾಗ, ಕಳಪೆ ರಸ್ತೆ ಹಾಗೂ ಸೇತುವೆಯಿಂದಾಗಿ ಆಂಬುಲೆನ್ಸ್ ಸಮಯಕ್ಕೆ ತಲುಪಲಿಲ್ಲ. ಕೊನೆಗೆ ತಂದೆಯು ತಮ್ಮ ತೋಳುಗಳಲ್ಲೇ ಪ್ರಾಣಬಿಟ್ಟರು ಎಂದು ವರ್ಷಾ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುಟುಂಬ ಆರೋಪಿಸಿದೆ. ರಾಜ್ಯದಲ್ಲಿ ಈ ವಿಚಾರವಾಗಿ ರಾಜಕೀಯ ನಾಯಕರು ಪರ-ವಿರೋಧ ಚರ್ಚೆ ನಡೆಸುತ್ತಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಈ ಕುರಿತು ವರದಿ ಕೋರಿದೆ.





Leave a comment