SUDDIKSHANA KANNADA NEWS/DAVANAGERE/DATE:22-04-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಕೆಲವರು ವದಂತಿ ಹಬ್ಬಿಸಿದ್ದರು. ಈ ವದಂತಿಗೆ ಈಗ ತೆರೆ ಬಿದ್ದಿದೆ. ಚುನಾವಣಾ ಕಣದಲ್ಲಿ ಗೆಲುವಿಗೆ ಸೆಣಸಾಡಲಿದ್ದಾರೆ.
ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿತ್ತು. ವಾಪಸ್ ಪಡೆಯಲು ಸೋಮವಾರ ಮಧ್ಯಾಹ್ನ 3 ಗಂಟೆಗೆ ಕೊನೆಯಾಗಿತ್ತು. ವಿನಯ್ ಕುಮಾರ್ ಅವರ ನಾಮಪತ್ರವೂ ಅಂಗೀಕಾರವಾಗಿತ್ತು. ಇನ್ನು ವಿನಯ್ ಕುಮಾರ್ ಅವರಿಗೆ ಸಿಲಿಂಡರ್ ಗುರುತನ್ನು ಕೇಂದ್ರ ಚುನಾವಣಾ ಆಯೋಗ ನೀಡಿದೆ.
ಚಿಹ್ನೆ ಸಿಕ್ಕ ಬಳಿಕ ಮಾತನಾಡಿದ ವಿನಯ್ ಕುಮಾರ್ ಅವರು ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದರು. ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಆದ್ರೆ, ವಾಪಸ್ ಪಡೆದಿಲ್ಲ. ಕಣದಲ್ಲಿ ಉಳಿದಿದ್ದೇನೆ. ದಿನಕಳೆದಂತೆ ಜನರ ಬೆಂಬಲ ಹೆಚ್ಚಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ನನಗೆ ಸಿಲಿಂಡರ್ ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗವು ನೀಡಿದೆ. ಸಿಲಿಂಡರ್ ಅನ್ನು ಪ್ರತಿಯೊಬ್ಬ ಮಹಿಳೆಯೂ ಉಪಯೋಗಿಸುತ್ತಾರೆ. ಜನರಿಗೆ ಬೇಕಾಗಿರುವ ಅವಶ್ಯಕವೂ ಹೌದು. ಎಲ್ಲರಿಗೂ ಗೊತ್ತಿರುವ ಸಿಲಿಂಡರ್ ಗುರುತು ನನ್ನದಾಗಿದ್ದು, ಈ ಚಿಹ್ನೆಗೆ ಮತ ಹಾಕುವ ಮೂಲಕ ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದರು.
ಪೂರ್ವಭಾವಿ ಸಭೆ
ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಅವರಿಗೆ ಸಿಲಿಂಡರ್ ಗುರುತು ಸಿಕ್ಕ ಹಿನ್ನೆಲೆಯಲ್ಲಿ ಮತದಾರರ ಮನವೊಲಿಸುವ ಕುರಿತಂತೆ ಚರ್ಚಿಸಲು ಏಪ್ರಿಲ್ 23ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಸಿಲಿಂಡರ್ ಚಿಹ್ನೆ ಸಿಕ್ಕಿರುವ ಕಾರಣ ಮತದಾರರಿಗೆ ಯಾವ ರೀತಿ ತಲುಪಿಸಬೇಕು, ಮತದಾರರಿಗೆ ಮನದಟ್ಟು ಮಾಡಲು ಯೋಜನೆ ರೂಪಿಸುವ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಗುವುದು. ಅಭಿಮಾನಿಗಳು,
ಹಿತೈಷಿಗಳು, ಮುಖಂಡರು ಸಭೆಗೆ ಬರುವಂತೆ ವಿನಯ್ ಕುಮಾರ್ ಅವರು ಮನವಿ ಮಾಡಿದ್ದಾರೆ.