SUDDIKSHANA KANNADA NEWS/ DAVANAGERE/ DATE:03-03-2024
ದಾವಣಗೆರೆ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶದ ಗೆಜೆಟ್, ಸ್ಥಳ ನಿಯುಕ್ತಿ ವೇಳಾಪಟ್ಟಿ ಹೊರಡಿಸುವಂತೆ ಒತ್ತಾಯಿಸಿ ಮಾ.5ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಭ್ಯರ್ಥಿಗಳು ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
2021ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ 26 ವಿಷಯಗಳ 1242 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಾಗಿ, 2023ರ ಮಾರ್ಚ್ 3ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಈ ಆಯ್ಕೆ ಪಟ್ಟಿಯಲ್ಲಿ ಒಟ್ಟು 1208 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ವರ್ಷವಾದ್ರೂ ನೆನಗುದಿಗೆ ಬಿದ್ದಿದ್ದ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು ಸರ್ಕಾರವು 20223 ನವೆಂಬರ್ 4ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.
ಉನ್ನತ ಶಿಕ್ಷಣ ಇಲಾಖೆಯು ಸಹ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಸಂಬಂಧ 2024ರ ಫೆಬ್ರವರಿ 26ರಂದು ಹೊರಡಿಸಿದ (ಪತ್ರ ಸಂಖ್ಯೆ: ಕಾಶಿಇ/110/ವರ್ಗಾವಣೆ/2023-2024) ಅಧಿಕೃತ ಜ್ಞಾಪನ ಪತ್ರವನ್ನೂ ಒಂದೇ ದಿನದಲ್ಲಿ ಹಿಂಪಡೆದಿದೆ. ಇಲಾಖೆಯ ಅಧಿಕೃತ ಜ್ಞಾಪನ ಪತ್ರವನ್ನು ಹಿಂಪಡೆಯಲು ಕಾರಣವೇನು? ಮರುದಿವಸ ಅಂದರೆ, 27ರಂದು ಪ್ರಕಟವಾದ ಇಲಾಖೆಯ ಅಧಿಕೃತ ಜ್ಞಾಪನ ಪತ್ರದಲ್ಲಿ ಹೊಸದಾಗಿ
ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕರ ಸ್ಥಳ ನಿಯುಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ವೇಳಾಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಸೂಚಿಸಲಾಗಿದೆ ಎಂದು ಅಭ್ಯರ್ಥಿಗಳು ಮಾಹಿತಿ ನೀಡಿದ್ದಾರೆ.
ಉನ್ನತ ಶಿಕ್ಷಣ ಸಚಿವರು ಡಿಸೆಂಬರ್ ತಿಂಗಳ ಅಂತ್ಯಕ್ಕೆ, ನಂತರ ಜನವರಿ ತಿಂಗಳ ಅಂತ್ಯಕ್ಕೆ, ತದನಂತರವೂ ಫೆಬ್ರವರಿ ತಿಂಗಳ ಅಂತ್ಯಕ್ಕೆ ಆದೇಶ ಕೊಡಲಾಗುವುದು ಎಂಬ ಭರವಸೆಗಳನ್ನು ನಂಬಿಕೊಂಡಿದ್ದೆವು. ಹೀಗೆ ತಿಂಗಳಾಂತ್ಯಗಳು ಮುಗಿದವೇ ಹೊರೆತು ನಮಗೆ ನೇಮಕಾತಿ ಆದೇಶ ದೊರೆಯುತ್ತಿಲ್ಲ. ಇದರಿಂದಾಗಿ ನಮಗಂತೂ ಪ್ರತಿಕ್ಷಣವು ನರಕ ದರ್ಶನವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ಅನೇಕ ಅಡೆತಡೆಗಳು ನಮ್ಮ ನೇಮಕಾತಿಯನ್ನು ಬೆಂಬಿಡದೇ ಕಾಡಿವೆ. ಈಗ 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ ಇದರಿಂದ ಮತ್ತೆ ನಮ್ಮ ಭವಿಷ್ಯ ಡೋಲಾಯಮಾನವಾಗುತ್ತದೆ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವರು ಕೊಟ್ಟ ಮಾತಿಗೆ ಇನ್ನೂ ಬದ್ಧವಾಗಿದ್ದರೆ 2024ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೆ, ಯಾವುದೇ ತೊಂದರೆ ಇಲ್ಲದ ಆದೇಶ ಪಡೆಯಲು ಸಿದ್ಧವಾಗಿರುವ 908 ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶದ ರಾಜ್ಯಪತ್ರವನ್ನು ಹೊರಡಿಸುವಂತಹ ಇಚ್ಛಾಶಕ್ತಿಯನ್ನು ತೋರಿಸಬೇಕೆಂದು ಪ್ರಾರ್ಥಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.
ಆದ್ದರಿಂದ 2021ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶದ ಗೆಜೆಟ್ ಮತ್ತು ಸ್ಥಳ ನಿಯುಕ್ತಿಯ ವೇಳಾಪಟ್ಟಿಯನ್ನು ಹೊರಡಿಸುವಂತೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾ. 5ರಂದು ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿಯ ಪ್ರಜಾಸತ್ತಾತ್ಮಕವಾದ ಸತ್ಯಾಗ್ರಹವನ್ನು ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎಂದು ತಿಳಿಸಲಾಗಿದೆ.