ಬಳ್ಳಾರಿ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸುಮಾರು 150ಕ್ಕೂ ಹೆಚ್ಚು ರೈತರು, ತಮ್ಮ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ 3.5 ಕಿ.ಮೀ ಉದ್ದದ ಸರ್ವಿಸ್ ರಸ್ತೆಯನ್ನು ಸ್ವಂತ ಹಣದಲ್ಲಿ ದುರಸ್ತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಮುಷ್ಟಗಟ್ಟೆ 1ಆರ್ ಕಾಲುವೆ ವ್ಯಾಪ್ತಿಯ ಸುಮಾರು 500 ಎಕರೆ ನೀರಾವರಿ ಭೂಮಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ರಸ್ತೆಯುದ್ದಕ್ಕೂ ಮೊಣಕಾಲಿನಷ್ಟು ಆಳದ ಗುಂಡಿಗಳು ಬಿದ್ದಿದ್ದರಿಂದ, ಕೃಷಿ ಚಟುವಟಿಕೆಗಳಿಗೆ ತೆರಳುವ ರೈತರು ನಿರಂತರವಾಗಿ ಅಪಘಾತಕ್ಕೀಡಾಗಿ ಗಾಯಗೊಳ್ಳುತ್ತಿದ್ದರು. ಕಾಲುವೆಯ ನೀರು ರಸ್ತೆಯ ಮೇಲೆ ಹರಿದು ಪ್ರತಿವರ್ಷ ರಸ್ತೆ ಕೊಚ್ಚಿ ಹೋಗುತ್ತಿತ್ತು. ಈ ಕುರಿತು ನೀರಾವರಿ ಇಲಾಖೆ ಹಾಗೂ ಅಧಿಕಾರಿಗಳಿಗೆ ರೈತರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಅಧಿಕಾರಿಗಳ ನಿಷ್ಕ್ರಿಯತೆಯಿಂದ ಬೇಸತ್ತ ರೈತರು ಕೊನೆಗೆ ತಾವೇ ಒಂದಾಗಿ ಪರಿಹಾರ ಕಂಡುಕೊಳ್ಳಲು ಮುಂದಾದರು. ಪ್ರತಿ ಎಕರೆಗೆ ₹2,000 ರಂತೆ ವಂತಿಗೆ ವಸೂಲಿ ಮಾಡಿ, ಒಟ್ಟು ₹3 ಲಕ್ಷ ಹಣವನ್ನು ಸಂಗ್ರಹಿಸಿದರು. ನಂತರ ಟ್ರ್ಯಾಕ್ಟರ್, ಜೆಸಿಬಿ ಯಂತ್ರಗಳ ನೆರವಿನಿಂದ ಗ್ರಾವೆಲ್ (ಮಣ್ಣು-ಕಲ್ಲು) ಬಳಸಿ ಇಡೀ 3.5 ಕಿ.ಮೀ ರಸ್ತೆಯನ್ನು ಯಶಸ್ವಿಯಾಗಿ ದುರಸ್ತಿಗೊಳಿಸಿದ್ದಾರೆ. ಪ್ರತಿ ಬಾರಿ ತಾತ್ಕಾಲಿಕ ದುರಸ್ತಿಗಿಂತ, ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸರ್ಕಾರ ತಕ್ಷಣವೇ ಇಲ್ಲಿ ಸಿಮೆಂಟ್ ಕಾಂಕ್ರೀಟ್ (CC) ರಸ್ತೆ ನಿರ್ಮಿಸಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.





Leave a comment