ಸ್ಯಾನ್ ಫ್ರಾನ್ಸಿಸ್ಕೋ: ಜಾಗತಿಕ ಸಾಫ್ಟ್‌ವೇರ್ ಮತ್ತು ಕ್ಲೌಡ್ ಕಂಪನಿಯಾದ ಒರಾಕಲ್ ಕಾರ್ಪೊರೇಷನ್ (Oracle Corp) ಕಳೆದ 12 ತಿಂಗಳುಗಳಲ್ಲಿ ಬರೋಬ್ಬರಿ 21,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅಳವಡಿಕೆಯೇ ಈ ಭಾರಿ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ ಎಂದು ಕಂಪನಿ ಅಧಿಕೃತವಾಗಿ ತಿಳಿಸಿದೆ.
ಎಐ ಕ್ರಾಂತಿ: ಒರಾಕಲ್ ಸಂಸ್ಥೆಯಿಂದ 21,000 ಉದ್ಯೋಗಿಗಳ ವಜಾ!
AI ಅಳವಡಿಕೆಯಿಂದ ಉದ್ಯೋಗ ಕಡಿತಗೊಳಿಸಿದ ಜಾಗತಿಕ ಟೆಕ್ ದೈತ್ಯ ಒರಾಕಲ್
ಸೋಮವಾರ ಕಂಪನಿಯು ಸಲ್ಲಿಸಿದ ವಾರ್ಷಿಕ ಹಣಕಾಸು ನಿಯಂತ್ರಣ ವರದಿಯಲ್ಲಿ ಈ ಆಘಾತಕಾರಿ ವಿಷಯ ಹೊರಬಿದ್ದಿದೆ. “ನಮ್ಮ ವ್ಯವಹಾರ ಕಾರ್ಯಾಚರಣೆಗಳಲ್ಲಿ ಎಐ (AI) ತಂತ್ರಜ್ಞಾನಗಳನ್ನು ನಿಯೋಜಿಸುತ್ತಿರುವುದರಿಂದ ಉದ್ಯೋಗಿಗಳನ್ನು ಕಡಿತಗೊಳಿಸಬೇಕಾಗಿ ಬಂದಿದೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯಬಹುದು” ಎಂದು ಒರಾಕಲ್ ಸ್ಪಷ್ಟಪಡಿಸಿದೆ.
ಶೇ. 13 ರಷ್ಟು ಉದ್ಯೋಗಿಗಳಿಗೆ ಮನೆಗೆ:
ಕಳೆದ ವರ್ಷ ಒರಾಕಲ್ ಕಂಪನಿಯಲ್ಲಿ 1,62,000 ಪೂರ್ಣಾವಧಿ ಉದ್ಯೋಗಿಗಳಿದ್ದರು. ಆದರೆ ಮೇ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ವೇಳೆಗೆ ಈ ಸಂಖ್ಯೆ 1,41,000 ಕ್ಕೆ ಕುಸಿದಿದೆ. ಅಂದರೆ ಕಂಪನಿಯು ತನ್ನ ಒಟ್ಟು ಜಾಗತಿಕ ಕಾರ್ಯಪಡೆಯಲ್ಲಿ ಶೇಕಡಾ 13 ರಷ್ಟು ಜನರನ್ನು ವಜಾಗೊಳಿಸಿದೆ.
ಈ ಪುನರ್ರಚನೆಗಾಗಿ ಕಂಪನಿಯು ಸುಮಾರು $1.8 ಬಿಲಿಯನ್ (ಅಂದಾಜು 15,000 ಕೋಟಿ ರೂ.) ವೆಚ್ಚ ಮಾಡಿದೆ.
OpenAI ನಂತಹ ಪ್ರಮುಖ ಗ್ರಾಹಕರಿಗೆ AI ಡೇಟಾ ಕೇಂದ್ರಗಳನ್ನು ನಿರ್ಮಿಸಲು ಒರಾಕಲ್ ಪ್ರಸ್ತುತ ಭಾರಿ ಹೂಡಿಕೆ ಮಾಡುತ್ತಿದೆ. ಈ ಹಣಕಾಸಿನ ಒತ್ತಡವನ್ನು ನಿಭಾಯಿಸಲು ಮತ್ತು ವೆಚ್ಚವನ್ನು ಉಳಿಸಲು ಕಂಪನಿಯು ಈ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಕಂಪನಿಯು ಅಮೆರಿಕದಲ್ಲಿ 49,000 ಮತ್ತು ಜಾಗತಿಕವಾಗಿ 92,000 ಉದ್ಯೋಗಿಗಳನ್ನು ಹೊಂದಿದೆ.





Leave a comment