SUDDIKSHANA KANNADA NEWS/ DAVANAGERE/ DATE:09-06-2024
ದಾವಣಗೆರೆ: ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ರೈತನೊಬ್ಬ ತನ್ನ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗುಡಾಳು ಗ್ರಾಮದ ಗೊಲ್ಲರ ಹಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಘಟನೆ ಖಂಡಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಚಿಗಟೇರಿ ಆಸ್ಪತ್ರೆ ಶವಾಗಾರದ ಮುಂದೆ ಪ್ರತಿಭಟನೆ ನಡೆಸಲಾಗಿದ್ದು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸುವ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದಿಡಲಾಗಿದೆ.
ಹನುಮಂತಪ್ಪ (42) ಸಾವಿಗೆ ಶರಣಾದ ರೈತ. 2 ಮಕ್ಕಳು ಮತ್ತು ಅಂಗವಿಕಲೆ ಹೆಂಡತಿಯೊಂದಿಗೆ ಬದುಕುಕಟ್ಟಿಕೊಂಡಿದ್ದ ಹನುಮಂತಪ್ಪ ಚಾಮರಾಜ ಪೇಟೆಯ ಕೆನರಾ ಬ್ಯಾಂಕಿನಲ್ಲಿ ಮನೆ ಮತ್ತು ಕುರಿ ಸಾಲ ಪಡೆದಿದ್ದರು. ಮನೆ ಸಾಲಕ್ಕೆ ಪ್ರತಿ ತಿಂಗಳು ಕಂತು ತುಂಬಿದ್ದರು. ಕುರಿ ಸಾಲವಾಗಿ 2.50 ಲಕ್ಷ ಪಡೆದಿದ್ದರು. ಇದಕ್ಕೆ ಬಡ್ಡಿ ಸೇರಿ 3.50 ಲಕ್ಷ ರೂ ಆಗಿತ್ತು. ಸಾಲ ತೀರುವಳಿಗಾಗಿ ಒನ್ಟೈಮ್ ಸೆಟ್ಲ್ ಮೆಂಟ್ಗೆ ಮನವಿ ಮಾಡಿದಾಗ. 2.10 ಲಕ್ಷ ರೂಗೆ ನಿಗದಿಪಡಿಸಲಾಗಿತ್ತು. ಈ ಹಣವನ್ನು ತುಂಬಲು ಹೋದಾಗ ನೀವು ಮನೆಮೇಲಿನ ಸಾಲ ತುಂಬಿದರೆ ಮಾತ್ರ ಕುರಿ ಲೋನು ಕಟ್ಟಿಸಿಕೊಳ್ಳುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು.
ಈ ವೇಳೆಗಾಗಲೇ ಬ್ಯಾಂಕ್ ಮ್ಯಾನೇಜರ್ ಜಿಲ್ಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಮನೆ ಜಪ್ತಿ ಆದೇಶಕ್ಕೆ ಅನುಮತಿ ಪಡೆದಿದ್ದರು. ಈ ಸಂಬಂಧ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದರು. ಇದರಿಂದ ಬೆದರಿದ ಹನುಮಂತಪ್ಪ ರಾಜ್ಯ ರೈತ ಸಂಘ ಹಸಿರುಸೇನೆ ಮೊರೆ ಹೋಗಿದ್ದರು.
ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮತ್ತು ಗುಮ್ಮನೂರು ಶಂಭಣ್ಣ, ಲೋಕೇಶ್ ಅವರುಗಳು ಎಜೆಎಂ ಶಿಪ್ರಸಾದ್ ಬಳಿ ಹೋದಾಗ ಮನೆ ಜಪ್ತಿಗೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ಆದೇಶ ಪಡೆದಿದ್ದು, ಮನೆ ಜಪ್ತಿ ಮಾಡುವುದಾಗಿ ಹೇಳಿದರು. ಕುರಿ ಲೋನು ತೋರಿಸಿ ಮನೆ ಸಾಲವನ್ನು ವಸೂಲಿ ಮಾಡಲು ಬ್ಯಾಂಕ್ ಅಧಿಕಾರಿಗಳು ಯೋಜಿಸಿದ್ದರು. ಮಾತುಕತೆಯ ನಂತರ ಹನುಮಂತಪ್ಪ ಮನೆ ಮತ್ತು ಕುರಿ ಸಾಲ ಮರುಪಾವತಿಗೆ ಒಪ್ಪಿಕೊಂಡರು. ಆದರೆ ಎರಡೂ ಸಾಲ ತೀರಿಸಲು ಆತನ ಬಳಿ ಹಣ ಇರಲಿಲ್ಲ. ಈ ವೇಳೆ ಮತ್ತು ರೈತ ಸಂಘದ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳ ಬಳಿ ಹೋಗಿ ವಿಷಯ ತಿಳಿಸಿದಾಗ, ಈ ಪ್ರಕರಣ ಅಜಾಗರೂಕತೆಯಿಂದ ಆಗಿದೆ. ಜಪ್ತಿ ಆದೇಶ ವಾಪಾಸು ಪಡೆಯುತ್ತೇವೆ. ಅರ್ಜಿ ಕೊಡಿ ಎಂದರು. ಕೂಡಲೇ ರೈತ ಹನುಮಂತಪ್ಪ ಅರ್ಜಿ ನೀಡಿದರು.
ಆದರೂ ಬ್ಯಾಂಕ್ ಅಧಿಕಾರಿಗಳ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಬೇಸತ್ತ ಹನುಮಂತಪ್ಪ ಇಂದು ಬೆಳಗಿನ ಜಾವ ತನ್ನ ಜಮಿನಿನಲ್ಲಿಯೇ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಚ್ಚವ್ವನಹಳ್ಳಿ ಮಂಜುನಾಥ್ ಮತ್ತು ಇತರರು ಪೊಲೀಸ್ ನೆರವಿನೊಂದಿಗೆ ಹನುಮಂತಪ್ಪ ಶವವನ್ನು ಇಳಿಸಿ ದಾವಣಗೆರೆ ಚಿಗಟೇರಿ ಶವಾಗಾರದಲ್ಲಿ ಇರಿಸಿದ್ದು, ರೈತನ ಸಾವಿಗೆ ಕಾರಣರಾದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಆಗದ ಹೊರತು ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಶವಗಾರದ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯದ್ ಅಫ್ರಿನ್ ಬಳ್ಳಾರಿ ಮತ್ತು ತಹಶಿಲ್ದಾರ್ ಅಶ್ವಥ್, ಹೆಚ್ಚುವರಿ ಎಸ್ಪಿ ಆಗಮಿಸಿ ರೈತರ ಮನವೊಲಿಸಲು ಯತ್ನಿಸಿದಾದರೂ ಸಾಧ್ಯವಾಗದೆ ಬರೀ ಗೈಯಲ್ಲಿ ವಾಪಾಸಾದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕರೆ ಮಾಡಿ ಮಾತನಾಡಿ, ಸೋಮವಾರ ಬೆಳಿಗ್ಗೆ ಈ ಸಂಬಂಧ ಸಭೆ ನಡೆಸಿ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಮೃತ ಹನುಮಂತಪ್ಪ ಅವರ ಶವವನ್ನು ಶೈತ್ಯಾಗಾರದಲ್ಲಿ ಇರಿಸಲಾಗಿದ್ದು, ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಗುಮ್ಮನೂರು ಶಂಭಣ್ಣ, ನಿಟುವಳ್ಳಿ ಅಂಜಿನಪ್ಪ ಪೂಜಾರ್, ಹುಚ್ವವ್ವನಹಳ್ಳಿ ಪ್ರಕಾಶ್, ಗುಮ್ಮನೂರು ಲೋಕೇಶ್, ರುದ್ರೇಶ್, ಹೂವಿನ ಮಡು ನಾಗರಾಜ್, ಕುರ್ಕಿ ಹನುಮಂತ,ರಾಜನಹಟ್ಟಿ ರಾಜು, ಎಲೋದಹಳ್ಳಿ ರವಿ, ಅಸ್ತಪನಹಳ್ಳಿ ಗಂಡುಗಲಿ, ಕೋಗಲೂರು ಕುಮಾರ್, ಹರಪನಹಳ್ಳಿ ಪರಶುರಾಮ್, ಶಿವಪುರ ಕೃಷ್ಣ ಮೂರ್ತಿ, ಮ್ಯಾಸರಹಳ್ಳಿ ಪ್ರಭು ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.