ನವದೆಹಲಿ: ಜಾಗತಿಕ ತಾಪಮಾನ ಮತ್ತು ತೀವ್ರ ಉಷ್ಣಾಂಶವು ಕೇವಲ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವಿಶ್ವ ಬ್ಯಾಂಕ್ ಮತ್ತು ಜಾರ್ಜ್ಟೌನ್ ವಿಶ್ವವಿದ್ಯಾಲಯದ ಹೊಸ ಅಧ್ಯಯನವು ಎಚ್ಚರಿಸಿದೆ. ಅತಿ ಹೆಚ್ಚು ಬಿಸಿಯಿಂದಾಗಿ ನಿದ್ರೆ ಹಾಗೂ ಭಾವನೆಗಳ ಮೇಲಿನ ನಿಯಂತ್ರಣ ತಪ್ಪಿ, ಇದು ಆತ್ಮಹತ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯಕ್ಕೆ ತುತ್ತಾಗುವ ಬಾಂಗ್ಲಾದೇಶದಲ್ಲಿ ನಡೆದ ಈ ಅಧ್ಯಯನವು ತಾಪಮಾನ ಹೆಚ್ಚಳಕ್ಕೂ ಮಾನಸಿಕ ಒತ್ತಡ ಹಾಗೂ ಆತ್ಮಹತ್ಯೆ ಪ್ರವೃತ್ತಿಗೂ ಇರುವ ನಂಟು ಬಹಿರಂಗಪಡಿಸಿದೆ. ನಿರ್ದಿಷ್ಟವಾಗಿ 28°C ನಿಂದ 35°C ವರೆಗಿನ ತಾಪಮಾನದಲ್ಲಿ ಈ ಅಪಾಯದ ಪ್ರಮಾಣ ಗರಿಷ್ಠ ಮಟ್ಟದಲ್ಲಿರುವುದು ಕಂಡುಬಂದಿದೆ.
ನಿದ್ರೆ ಮತ್ತು ಭಾವನೆಗಳ ಮೇಲೆ ಪರಿಣಾಮ: 35 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕಳಪೆ ನಿದ್ರೆಯು ಶೇ. 29.5 ರಷ್ಟು ಹಾಗೂ ಭಾವನಾತ್ಮಕ ನಿಯಂತ್ರಣದ ಕೊರತೆಯು ಶೇ. 1.8 ರಷ್ಟು ಆತ್ಮಹತ್ಯೆಯ ಅಪಾಯದ ನಂಟಿಗೆ ಕಾರಣವಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ.
ಬಡ ಹಾಗೂ ಶ್ರಮಿಕ ವರ್ಗದವರಿಗೆ: ಈ ಸಮಸ್ಯೆಯ ತೀವ್ರತೆಯು ಬೇಸಿಗೆಯ ಕಾಲದಲ್ಲಿ ಹಾಗೂ ಬಡ ಮತ್ತು ಕಡಿಮೆ ಶಿಕ್ಷಣ ಪಡೆದ ಜನರಲ್ಲಿ ಹೆಚ್ಚು ಕಂಡುಬಂದಿದೆ. ಕೂಲಿ ಕಾರ್ಮಿಕರು ಹಾಗೂ ಕಡಿಮೆ ಸೌಲಭ್ಯವಿರುವ ಸಮುದಾಯಗಳು ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳು: ಹವಾಮಾನ ವೈಪರೀತ್ಯದ ಮುನ್ಸೂಚನೆ ಜತೆಗೆ ನಿದ್ರಾಹೀನತೆ ಸೂಚಕಗಳನ್ನು ಗಮನಿಸುವುದು, ಮನೆಗಳಲ್ಲಿ ತಂಪಾದ ವಾತಾವರಣ ಕಲ್ಪಿಸುವುದು ಮತ್ತು ಸಮುದಾಯ ಮಟ್ಟದಲ್ಲಿ ಮಾನಸಿಕ ಆರೋಗ್ಯ ತರಬೇತಿ ನೀಡುವ ಅವಶ್ಯಕತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಹವಾಮಾನ ಸ್ಥಿತಿಸ್ಥಾಪಕತ್ವ ಯೋಜನೆಗಳು ಹಾಗೂ ಮುನ್ನೆಚ್ಚರಿಕೆ ವ್ಯವಸ್ಥೆಗಳಲ್ಲಿ ಮಾನಸಿಕ ಆರೋಗ್ಯ ರಕ್ಷಣೆಯನ್ನೂ ಸೇರ್ಪಡೆಗೊಳಿಸಬೇಕಾದ ಅಗತ್ಯತೆಯನ್ನು ಈ ಅಧ್ಯಯನವು ಒತ್ತಿ ಹೇಳಿದೆ.





Leave a comment