ಹಿರಿಯೂರು: “ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಅಭ್ಯರ್ಥಿ ನಿಲ್ಲಿಸಲಿ, ನಮ್ಮ ಕುಟುಂಬದ ಸದಸ್ಯರಾದ ನಿಮ್ಮ ಭಾವನೆ, ಬದುಕಿನಲ್ಲಿ ಭಾಗವಾಗಿ ಈ ಸರ್ಕಾರ ನಿಮ್ಮ ಜತೆಗಿದೆ. 14 ಗ್ರಾಮಗಳಿಗೆ ಭವನಗಳು, 7 ಕೋಟಿ ಮೊತ್ತದ ಮೂಲಸೌಲಭ್ಯ ಯೋಜನೆ ನೀಡಿದೆ. ನಾನು ರಾಜಕೀಯದಲ್ಲಿ ಎಂದಿಗೂ ಕೊಟ್ಟ ಮಾತನ್ನು ತಪ್ಪಿಲ್ಲ. ಕೆಲವರಿಗೆ ಸುಳ್ಳೇ ಮನೆ ದೇವರು. ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಿಮ್ಮ ಬದುಕಿನಲ್ಲಿ ಏನಾದರೂ ಸಣ್ಣ ಕೊಡುಗೆ ನೀಡಿದ್ದಾರಾ? ಎಂದು ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಧರ್ಮಪುರದಲ್ಲಿ ನೂತನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಮ್ಮ ಬೆಂಬಲದಿಂದ ಕುಮಾರಸ್ವಾಮಿ ಅವರ ಕಾಲದಲ್ಲಿ ಸ್ವಲ್ಪ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5400 ಕೋಟಿ ಅನುದಾನ ಘೋಷಿಸಿದ್ದರು. ಇವತ್ತಿನವರೆಗೂ ಒಂದು ಬಿಡಿಗಾಸು ಕೊಟ್ಟಿಲ್ಲ. ಆದರೂ ಯಾವ ನೈತಿಕತೆ ಇಟ್ಟುಕೊಂಡು ಬಂದು ನಿಮ್ಮ ಬಳಿ ಮತ ಕೇಳುತ್ತಾರೆ?” ಎಂದು ಕಿಡಿಕಾರಿದರು.
ಧರ್ಮಪುರ ಹೋಬಳಿಯಲ್ಲೇ 15 ಸಾವಿರ ಮತಗಳನ್ನು ನೀಡಬೇಕು
“ಎನ್ ಡಿಎ ಪರವಾಗಿ ಬೊಮ್ಮಾಯಿ, ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಕಾರಜೋಳ, ಕುಮಾರಸ್ವಾಮಿ ಅವರು ಸೇರಿದಂತೆ ಯಾರೇ ಬಂದರೂ ನಿಮ್ಮದು ಖಾಲಿ ಡಬ್ಬಾ, ಖಾಲಿ ಮಾತು ಎಂದು ಕೇಳಬೇಕು. ಕ್ಷೇತ್ರಕ್ಕಾಗಿ ಕೆಲಸ ಮಾಡಿದ ನನ್ನ ಸ್ನೇಹಿತ ಸುಧಾಕರನಿಗಾಗಿ ಜನ ಉಪಕಾರಸ್ಮರಣೆ ಹೊಂದಿದ್ದಾರೆ. ಈ ಹೋಬಳಿ ಜನ ಆರು ಸಾವಿರ ಮತ ನೀಡಿ ಗೆಲ್ಲಿಸಿದ್ದೀರಿ. ಆತನ ಸ್ನೇಹಿತನಾಗಿ ನಾನು ಸಿಎಂ ಆಗಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ನೀವು ಈ ಉಪಚುನಾವಣೆಯಲ್ಲಿ ಈ ಹೊಬಳಿಯಿಂದ ಕನಿಷ್ಠ 15 ಸಾವಿರ ಮತಗಳನ್ನು ನೀವು ನೀಡಬೇಕು” ಎಂದು ಮನವಿ ಮಾಡಿದರು.
ಅಭ್ಯರ್ಥಿ ಯಾರಾಗಬೇಕು ಎಂದು ಸರ್ವೇ ಮಾಡಿಸಿರುವೆ
“ನಾನು ಇಲ್ಲಿಗೆ ಬಂದು ಹಾಗೇ ಹೋಗುವುವವನಲ್ಲ. ನಿಮ್ಮ ಸೇವೆಗೆ ಸಂಕಲ್ಪ ಮಾಡಿದ್ದೇನೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಬರಗಾಲ ವಿಚಾರದಲ್ಲಿ ಕೇಂದ್ರ ಸರ್ಕಾರ ಇದುವರೆಗೂ ಒಂದು ರೂ. ನೀಡಿಲ್ಲ. ನಾನು ಕೆರೆಗಳಿಗೆ ನೀರು ತುಂಬಿಸಲು ಆದೇಶ ಮಾಡಿದ್ದೇನೆ. ರೈತರು ನೀಡಿರುವ ಪಟ್ಟಿಯಲ್ಲಿನ ಸಮಸ್ಯೆ ಬಗೆಹರಿಸಲಾಗುವುದು. ನಾನು ಚುನಾವಣೆ ಸಮಯದಲ್ಲಿ ಮಾತ್ರ ಬಂದು ಹೋಗುವವರಲ್ಲ. ನಿಮ್ಮ ಜತೆ ಇದ್ದು ನಿಮ್ಮ ಸೇವೆ ಮಾಡುವವರು. ನಾನು ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಲ್ಲ. ಆದರೂ ಉಪಚುನಾವಣೆಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂದು ನಾಲ್ಕು ಸರ್ವೇ ಮಾಡಿಸಿದ್ದೇನೆ. ನಿಮ್ಮ ಅಭ್ಯರ್ಥಿಯಾಗಿ ನಾನೇ ಇದ್ದೇನೆ. ಈ ಡಿ ಕೆ ಶಿವಕುಮಾರ್ ನಿಮ್ಮ ಅಭ್ಯರ್ಥಿ. ಧರ್ಮಪುರದ ಜನ ಧರ್ಮವನ್ನು ಕಾಪಾಡುವವರು, ಧರ್ಮದಿಂದ ಮತಹಾಕಿ, ನಿಮ್ಮ ಸೇವೆ ಮಾಡುವ ಪಕ್ಷವನ್ನು ಗೆಲ್ಲಿಸಬೇಕು” ಎಂದು ತಿಳಿಸಿದರು.





Leave a comment