ಹಿರಿಯೂರು: “ನಮ್ಮ ಸರ್ಕಾರದ 10 ಸಚಿವರುಗಳು ತಮ್ಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಆಮೂಲಕ ಸುಧಾಕರ್ ಅವರನ್ನು ಆಯ್ಕೆ ಮಾಡಿ ರಾಜ್ಯದಲ್ಲಿ 136 ಸೀಟುಗಳನ್ನು ಕೊಟ್ಟ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಅದಕ್ಕಾಗಿ ವಾರ್ಷಿಕ 22 ಸಾವಿರ ಕೋಟಿ ಹಣ ನೀಡುತ್ತಿದೆ. ಈ ವರ್ಷ ಬರ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯುತ್ ಬಳಸಿರುವ ಪರಿಣಾಮ ಈ ವರ್ಷ 30 ಸಾವಿರ ಕೋಟಿ ಹಣ ವೆಚ್ಚ ಮಾಡಬೇಕಾಗಿದೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಧರ್ಮಪುರದಲ್ಲಿ ನೂತನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಾವು 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಿಮ್ಮ ಸಮಸ್ಯೆ ನಮಗೆ ಅರ್ಥವಾಗುತ್ತದೆ. ನಿಮ್ಮ ಜಮೀನಿಗೆ ನೀರು ಒದಗಿಸಬೇಕು ಎಂದು ಸುಧಾಕರ್ ಅವರು ಮಾತು ಕೊಟ್ಟಿದ್ದರು. ಜಯಚಂದ್ರ ಅವರು ನಿಮ್ಮ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡು ಈ ತಾಲ್ಲೂಕಿನ ನೀರಾವರಿ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಆಂಜನೇಯ ಅವರು ಈ ಜಿಲ್ಲೆಯ ಜನರ ಬದುಕಿಗಾಗಿ ಶ್ರಮಿಸುತ್ತಿದ್ದಾರೆ” ಎಂದರು.
“ಈ ಬಸ್ ನಿಲ್ದಾಣಕ್ಕೆ 3.5 ಕೋಟಿ ರೂ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೇವೆ. ನಿಮ್ಮ ತಾಲ್ಲೂಕಿನ ನೀರಾವರಿ ಯೋಜನೆ ಬಗ್ಗೆ ಇಟ್ಟ ಬೇಡಿಕೆಗೆ ನಾವು ಮಂಜೂರಾತಿ ನೀಡಿ, ಟೆಂಡರ್ ಕರೆದು, ಈಗಾಗಲೇ ಪರಿಕ್ಷಾರ್ಥ ನೀರು ಹರಿಸಲಾಗಿದೆ. ನಾನು ಖಾಲಿ ಮಾತು ಆಡುವವನಲ್ಲ. ಅಕ್ಬರ್ ಹಾಗೂ ಬೀರ್ಬಲ್ ನಡುವೆ ಸತ್ಯ ಹಾಗೂ ಸುಳ್ಳಿನ ನಡುವಣ ವ್ಯತ್ಯಾಸದ ಬಗ್ಗೆ ಚರ್ಚೆಯಾಗುವಾಗ ಬೀರ್ ಬಲ್ ಹೇಳುತ್ತಾನೆ ಇವರಡರ ಮಧ್ಯೆ ಇರುವುದು ನಾಲ್ಕು ಬೆರಳಿನ ವ್ಯತ್ಯಾಸ. ಅಂದರೆ ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು, ಇವೆರಡರ ನಡುವೆ ಇರುವುದು ನಾಲ್ಕು ಬೆರಳಿನ ಅಂತರ ಎಂದು ವಿವರಿಸುತ್ತಾನೆ. ರಾಜ್ಯದ ಪ್ರಜಾಸೇವಕನಾಗಿ, ಸುಧಾಕರ್ ಆತ್ಮೀಯ ಸ್ನೇಹಿತನಾಗಿ ನಿಮ್ಮ ಮುಂದೆ ನಿಂತಿದ್ದೇವೆ” ಎಂದು ಹೇಳಿದರು.





Leave a comment