SUDDIKSHANA KANNADA NEWS/ DAVANAGERE/ DATE:05-03-2024
ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯು ಮೂರು ವರ್ಷಗಳಿಗೊಮ್ಮೆ ನಡೆಯಲಿದ್ದು ಮಾರ್ಚ್ 17 ರಿಂದ 20 ರ ವರೆಗೆ ಅದ್ದೂರಿಯಾಗಿ ಜರುಗುವುದರಿಂದ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ದಾವಣಗೆರೆ ದಕ್ಷಿಣ ಶಾಸಕ ಹಾಗೂ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಡಾ; ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಅವರು ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಜಾತ್ರಾ ಸಿದ್ದತೆ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಾತ್ರಾ ಸಂದರ್ಭದಲ್ಲಿ ಲಕ್ಷಾಂತರ ಭಕ್ತಾಧಿಗಳು ಇಲ್ಲಿಗೆ ಆಗಮಿಸುವುದರಿಂದ
ಜನರಿಗೆ ಸುಗಮ ಸಂಚಾರ, ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ, ಪೊಲೀಸ್ ಬಂದೋಬಸ್ತ್, ಶೌಚಾಲಯದ ವ್ಯವಸ್ಥೆ ಸೇರಿದಂತೆ ಜನರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜಿಲ್ಲಾ ಆಡಳಿತದಿಂದ ಜಾತ್ರೆಗೆ ಬೇಕಾದ ಎಲ್ಲಾ ನೆರವು ನೀಡಬೇಕು ಮತ್ತು ಮಹಾನಗರ ಪಾಲಿಕೆಯಿಂದ ಸ್ವಚ್ಚತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದರು.
ಜಾತ್ರೆಯನ್ನು ಸರ್ಕಾರ ಹೇಳಿದ ರೀತಿ ನಡೆಸಲಾಗುತ್ತದೆ, ಪ್ರಾಣಿಬಲಿ ನೀಡುವುದಿಲ್ಲ, ಮೌಢ್ಯಾಚರಣೆ ಮಾಡಲಾಗುವುದಿಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವ ಮೂಲಕ ನಗರ ದೇವತೆ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಬೇಕೆಂದು ತಿಳಿಸಿದರು.
ಸ್ವಚ್ಚತೆ ಮತ್ತು ನೆರಳು:
ಲಕ್ಷಾಂತರ ಭಕ್ತಾಧಿಗಳು ಜಾತ್ರಾ ವೇಳೆ ಆಗಮಿಸುವುದರಿಂದ ಇಲ್ಲಿ ಅವರು ತಮ್ಮ ಹರಕೆಯ ವಸ್ತುಗಳನ್ನು ಬಿಡುವುದು, ಹೂ, ಬೇವಿನಸೊಪ್ಪು ತರುವುದರಿಂದ ಆಗಿಂದಾಗ್ಗೆ ತೆರವು ಮಾಡಬೇಕಾಗುತ್ತದೆ. ಇದಕ್ಕಾಗಿ ಪಾಲಿಕೆಯಿಂದ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಮತ್ತು ನಿರಂತರ ನೀರು ಸರಬರಾಜು ಮಾಡಬೇಕು. ದೇವಸ್ಥಾನದ ಬಳಿ ಎರಡು ಶೌಚಾಲಯಗಳು ಇದ್ದು ಹೆಚ್ಚುವರಿಯಾಗಿ ಮೊಬೈಲ್ ಟಾಯ್ಲೆಟ್ಗಳನ್ನು
ಪಾಲಿಕೆಯಿಂದ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಪಾಲಿಕೆ ಆಯುಕ್ತರು ಮಾತನಾಡಿ ಪಾಲಿಕೆಯಿಂದ ಸ್ವಚ್ಚತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮತ್ತು ಈಗಾಗಲೇ ಇಲ್ಲಿನ ರಸ್ತೆ ಗುಂಡಿ ಮುಚ್ಚಲು, ಚರಂಡಿ ದುರಸ್ಥಿಗೆ ಹಾಗೂ ಈ ಭಾಗದಲ್ಲಿನ 40 ದೇವಸ್ಥಾನಗಳ
ಸುಣ್ಣ ಬಣ್ಣಕ್ಕಾಗಿ ಪಾಲಿಕೆಯಿಂದ ರೂ. 2 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.
ನಿರಂತರ ವಿದ್ಯುತ್; ಜಾತ್ರೆಯಲ್ಲಿ ಹೆಚ್ಚು ಜನರು ಭಾಗವಹಿಸುವುದರಿಂದ ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಜೊತೆಗೆ ಎಲ್ಲಿಯೂ ಶಾರ್ಟ್ಸಕ್ರ್ಯೂಟ್ ಆಗದ ರೀತಿ ನೋಡಿಕೊಂಡು ಇಲ್ಲಿಗೆ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಬೆಸ್ಕಾಂ ಇಂಜಿನಿಯರ್ಗೆ ತಿಳಿಸಲಾಯಿತು.
ಆರೋಗ್ಯ ರಕ್ಷಣೆ; ಜಾತ್ರಾ ವೇಳೆ ಹೆಚ್ಚು ಜನರು ಭಾಗವಹಿಸುವುದರಿಂದ ಈಗ ಬಿಸಿಲು ಹೆಚ್ಚಿದೆ, ಜನಸಂದಣಿ ಜಾಸ್ತಿಯಾಗುವುದರಿಂದ ಕೆಲವು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು ಪಾಲಿಕೆಯಿಂದ ಚರಂಡಿಗಳಿಗೆ ರಾಸಾಯಿನಿಕ ಸಿಂಪರಣೆ ಮಾಡಬೇಕು. ಆರೋಗ್ಯ ಇಲಾಖೆಯಿಂದ ಮೊಬೈಲ್ ಚಿಕಿತ್ಸಾಲಯ ನಿಯೋಜಿಸಿ ತುರ್ತು ಸೇವೆಗಾಗಿ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ; ಜಾತ್ರಾ ವೇಳೆ ಭಕ್ತಾಧಿಗಳು ಮೂಢನಂಬಿಕೆಗಳನ್ನು ಆಚರಣೆ ಮಾಡುವ ಸಾಧ್ಯತೆ ಇದ್ದು ಸಿಬ್ಬಂದಿಗಳ ನೇಮಕ ಮಾಡುವ ಮೂಲಕ ತೀವ್ರ ನಿಗಾವಹಿಸಲು ತಿಳಿಸಲಾಯಿತು.
ಸಭೆಯಲ್ಲಿ ಪಾಲಿಕೆ ಮೇಯರ್ ವಿನಾಯಕ್ ಬಿ.ಹೆಚ್, ಟ್ರಸ್ಟ್ ಸದಸ್ಯ ವೀರಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ಪಾಲಿಕೆ ಆಯುಕ್ತರಾದ ರೇಣುಕಾ,
ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ಡಾ; ಅಶ್ವಥ್ ಎಂ.ಬಿ ಹಾಗೂ ಇನ್ನಿತರೆ ಇಲಾಖೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.