SUDDIKSHANA KANNADA NEWS/ DAVANAGERE/ DATE:17-06-2024
ದಾವಣಗೆರೆ: ಲೋಕಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ದಾವಣಗೆರೆ ಜಿಲ್ಲಾ ಬಿಜೆಪಿ ಒಡೆದ ಮನೆಯಾಗಿದೆ. ರೆಬೆಲ್ ಟೀಂನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್ ಅವರು ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ಗುಟುರು ಹಾಕಿದ್ದಾರೆ. ವಿನಾಕಾರಣ ಆರೋಪ, ತೇಜೋವಧೆ ಮಾಡಿದರೆ ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯ ಎಸ್. ಎ. ರವೀಂದ್ರನಾಥ್ ಮನೆಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೂವರು ನಾಯಕರು ಹರೀಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಎಸ್. ಎ. ರವೀಂದ್ರನಾಥ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ನಮ್ಮ ಮನೆಗೆ ಬಂದಿದ್ದರು ಎಂಬ ಕಾರಣಕ್ಕೆ ನಾವು ಅವರಿಗೆ ಮತ ಹಾಕಿದ್ದೇವೆ ಎಂದೇನಲ್ಲ. ನಾನು ಐದು ಚುನಾವಣೆಯಲ್ಲಿ ಗೆದ್ದಿದ್ದೇನೆ, ಐದು ಚುನಾವಣೆಯಲ್ಲಿ ಸೋತಿದ್ದನೆ. ನಾನು ಸೋತಾಗ ಯಾರ ವಿರುದ್ಧವೂ ಮಾತನಾಡಿಲ್ಲ. ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ದೊಡ್ಡದಾದ ಆಲದ ಮರದ ಕೆಳಗಡೆ ಹೋಗಿ ಸ್ವಲ್ಪ ದಿನ ವಿಶ್ರಾಂತಿ ಪಡೆಯಲಿ. ನಾನು ಹುಚ್ಚ ಅಂತೆಲ್ಲಾ ಅವರೇ ಮಾತನಾಡಿದರೆ ನಾವೇನೂ ಹೇಳಲು ಆಗುತ್ತದೆ. ಇದೇ ರೀತಿ ಮಾತನಾಡಿದರೆ ಯಾಕೋ ಸರಿ ಇದ್ದಂಗೆ ಕಾಣಿಸುತ್ತಿಲ್ಲ. ಸರಿಯಾದ ಗೌರವ ಸಿಗದ ಕಾರಣ ನಾವು ಹೋಗುವುದನ್ನು ಬಿಟ್ಟೆವು. ಸಮ- ಸಮ ಆಗಿದೆ. ನಾನು ನಾಲ್ಕು ಬಾರಿ ಗೆದ್ದಿದ್ದೇನೆ, ಈ ಬಾರಿಯೂ ಗೆಲ್ಲುತ್ತೇವೆ ಎಂದರೆ ಆಗದು. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ನಾವು ಗೆಲುವಿಗೆ ಎಲ್ಲಾ ರೀತಿಯಲ್ಲಿಯೂ ಕೆಲಸ ಮಾಡಿದ್ದೇವೆ. ಸೋತಾಗ ಸ್ವಲ್ಪ ಸಮಾಧಾನದಿಂದ ಇರಬೇಕು. ಇಲ್ಲದಿದ್ದರೆ ಹಳ್ಳಿಗಳಿಗೆ ಹೋದರೆ ಕಲ್ಲು, ಕಣಿಗೆ ತೆಗೆದುಕೊಂಡು ಜನರು ಬರುತ್ತಾರೆ ಅಷ್ಟೇ. ಹೊಸ ಅಧ್ಯಾಯವೆಂದು ತಿಳಿದುಕೊಂಡು ಮುನ್ನಡೆಯಬೇಕು ಎಂದು ತಿಳಿಸಿದ ರವೀಂದ್ರನಾಥ್ ಅವರು ಬುಕ್ ಆಗಿದ್ದು ನಾವಲ್ಲ, ಅವರು ಎಂದು ಕಿಡಿಕಾರಿದರು.