SUDDIKSHANA KANNADA NEWS/ DAVANAGERE/ DATE:13-12-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್ ಡಿ ಪಿ ಎಸ್ ಆಕ್ಟ್ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 22 ಕೆಜಿ ಹೆಚ್ಚು ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ನ್ಯಾಯಾಲಯದ
ಅನುಮತಿ ಮೇರೆಗೆ ನಾಶಪಡಿಸಲಾಯಿತು.
ಎಸ್ಪಿ ಉಮಾ ಪ್ರಶಾಂತ್ ಉಪಸ್ಥಿತಿಯಲ್ಲಿ ನಗರದ ಹೊರ ವಲಯದ ಅವರಗೊಳ್ಳದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ, ಜಿ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪಿ.ಬಿ ಪ್ರಕಾಶ್, ಪಿಎಸ್ಐ ರೂಪ ತೆಂಬದ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದಡಿಯಲ್ಲಿ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಅಕ್ರಮ ಸಾಗಟಕ್ಕೆ ಇರುವ ಕಾನೂನು ಕ್ರಮಗಳ ಬಗ್ಗೆ ಈಗಾಗಲೇ ಶಾಲಾ ಕಾಲೇಜುಗಳು ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಬಾರದು, ಮಾದಕವಸ್ತುಗಳ ಬಳಕೆ ಹಾಗೂ ಮಾರಾಟ ಮಾಡುತ್ತಿರುವ ಬಗ್ಗೆ ಕಂಡುಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಣ, ಮಾದಕ ವ್ಯಸನ ಮುಕ್ತ ಕರ್ನಾಟಕ, ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯದಲ್ಲಿ ಸಾರ್ವಜನಿಕರು ಕೈಜೋಡಿಸಬೇಕು ಎಂದು ಎಸ್ಪಿ ಮನವಿ ಮಾಡಿದರು.
ಡ್ರಗ್ಸ್ ಫ್ರೀ ಕರ್ನಾಟಕ ಆಪ್ ಅನ್ನು ಜಾರಿಗೆ ತಂದಿದ್ದು ಸಾರ್ವಜನಿಕರು ಈ ಆಪ್ ಅನ್ನು ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡು ತನ್ನ ಸುತ್ತಮುತ್ತ ಹಾಗೂ ಇತರೆಡೆ ಮಾದಕವಸ್ತುಗಳ ಬಳಕೆ, ಮಾರಾಟ ಮಾಡುತ್ತಿರುವ ಬಗ್ಗೆ ಕಂಡು ಬಂದರೆ ಕೂಡಲೇ ಆಪ್ ಮೂಲಕ ಮಾಹಿತಿ ನೀಡಬಹುದು ಎಂದು ಉಮಾ ಪ್ರಶಾಂತ್ ತಿಳಿಸಿದ್ದಾರೆ.