SUDDIKSHANA KANNADA NEWS/ DAVANAGERE/ DATE:16-09-2023
ದಾವಣಗೆರೆ (Davanagere): ಗಣೇಶ ಚತುರ್ಥಿಯಲ್ಲಿ ಪಿಓಪಿ ಗಣೇಶ ಮೂರ್ತಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಮಣ್ಣಿನಲ್ಲಿ ಮಾಡಿದ ಹಾಗೂ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶನ ಹಬ್ಬ ಆಚರಣೆಗೆ ಮುಂದಾಗೋಣ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.
ಈ ಸುದ್ದಿಯನ್ನೂ ಓದಿ:
ಭದ್ರಾ ಜಲಾಶಯ(Bhadra Dam)ದಿಂದ ಭದ್ರಾ ಬಲದಂಡೆ ನಾಲೆ ನೀರು ಬಂದ್: ಅಂತೂ ಇಂತೂ ಆನ್ ಅಂಡ್ ಆಫ್ ಜಾರಿ, ದಾವಣಗೆರೆ ಜಿಲ್ಲೆಯ ರೈತರ ಆಕ್ರೋಶ
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪರಿಸರಕ್ಕೆ ಮಾರಕವಾದ ಪಿಓಪಿ ಗಣೇಶ ಮೂರ್ತಿಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಯಾರು ಸಹ ಮಾರಾಟ ಮಾಡುವಂತಿಲ್ಲ. ಮಹಾರಾಷ್ಟ್ರದಿಂದ ಪಿಓಪಿ ಗಣೇಶ ಮೂರ್ತಿಗಳನ್ನು ತಂದು ಹರಿಹರದಲ್ಲಿ ಮಾರಾಟ ಮಾಡುತ್ತಿದ್ದ ವೇಳೆ 17 ಮೂರ್ತಿಗಳನ್ನು ವಶಪಡಿಸಿಕೊಂಡು ಮಾರಾಟಗಾರರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ ಎಂದರು.
ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಅಥವಾ ಯಾವುದೇ ಸವಕಳಿ ಇಲ್ಲದ ಬೆಲ್ಲದ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡುವುದರಿಂದ ನಷ್ಟವಿಲ್ಲದೆ ಲಾಭವೇ ಹೆಚ್ಚಿರಲಿದೆ. ಈ ಭಾರಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬೆಲ್ಲದ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಮಂಡ್ಯದಲ್ಲಿ ಈ ಹಿಂದೆ ಕೆಲಸ ಮಾಡುತ್ತಿರುವಾಗ ಅಲ್ಲಿನ ರೈತ ಉತ್ಪಾದಕ ಸಂಸ್ಥೆಯ ಮೂಲಕ ಬೆಲ್ಲದ ಗಣೇಶ ಮೂರ್ತಿ ತಯಾರಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಉತ್ತೇಜಿಸಲಾಗಿತ್ತು. ಇಂದು ಆ ಸಂಸ್ಥೆಗೆ ಸಾಕಷ್ಟು ಬೇಡಿಕೆ ಬಂದಿದೆ ಎಂದು ತಿಳಿಸಿದರು.
ದಾವಣಗೆರೆ (Davanagere) ಜಿಲ್ಲೆಯಲ್ಲಿ ಶೂನ್ಯ ನಷ್ಟದ ಬೆಲ್ಲದ ಗಣಪ:
ಬೆಲ್ಲದ ಗಣೇಶ ಮೂರ್ತಿಯನ್ನು ರೈತರು ಬೆಳೆದ ಕಬ್ಬಿನಿಂದ ಹಾಲನ್ನು ತೆಗೆದು ಅದರಲ್ಲಿ ಯಾವುದೇ ರಾಸಾಯನಿಕ ಬೆರಸದೇ ಪಾಕವನ್ನು ತಯಾರು ಮಾಡಿ ಈ ಪಾಕದಿಂದ ಗಣೇಶ ಮೂರ್ತಿಯ ಹಚ್ಚಿಗೆ ಬೆರೆಸಿದಾಗ ಅದು ಮೂರ್ತಿಯಾಗುತ್ತದೆ. ಒಂದು ಗಣೇಶ ಮೂರ್ತಿಯನ್ನು ಕನಿಷ್ಠ 2 ಕೆಜಿ ಬೆಲ್ಲದಿಂದ ಮಾಡಬಹುದಾಗಿದೆ. ಇದರಿಂದ ರೈತರಿಗೂ ಆರ್ಥಿಕಾಭಿವೃದ್ದಿಯಾಗಲಿದೆ ಮತ್ತು ರೈತ ಉತ್ಪಾದಕ ಕಂಪನಿಗಳಿಗೂ ಆದಾಯ ಬರಲಿದ್ದು ಆರ್ಥಿಕತೆ ಹಂಚಿಕೆಯಾಗಲಿದೆ. ಇದರಿಂದ ಎಲ್ಲರಿಗೂ ಲಾಭವಾಗಲಿದ್ದು ಖರೀದಿಸಿದ ಗ್ರಾಹಕರಿಗೂ ಯಾವುದೇ ನಷ್ಟ ಉಂಟಾಗುವುದಿಲ್ಲ. ಬೆಲ್ಲದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವಿಸರ್ಜನೆಯ ದಿನ ಇದೇ ಮೂರ್ತಿಯನ್ನು ಪ್ರಸಾದವನ್ನಾಗಿ ಎಲ್ಲರಿಗೂ ಹಂಚಿಕೆ ಮಾಡಬಹುದಾಗಿದೆ ಎಂದರು.
ದಾವಣಗೆರೆ (Davanagere)ಯಲ್ಲಿಯೇ ತಯಾರು:
ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೇ ಬೆಲ್ಲದ ಗಣೇಶ ಮೂರ್ತಿಯನ್ನು ತಯಾರು ಮಾಡಲು ಎಲ್ಲಾ ತಾಂತ್ರಿಕ ನೆರವನ್ನು ರೈತ ಉತ್ಪಾದಕ ಕಂಪನಿಗಳಿಗೆ ಮತ್ತು ಸ್ವ ಸಹಾಯ ಸಂಘಗಳಿಗೆ ಕೊಡಿಸುವ ಮೂಲಕ ಪರಿಸರ ಸ್ನೇಹಿ ಬ್ಯಾಗ್ಗಳ ಉತ್ಪಾದನೆ, ಮದುವೆ ಸಮಾರಂಭಗಳಲ್ಲಿ ನೀಡಲು ಬೆಲ್ಲದ ಹಚ್ಚುಗಳನ್ನು ಸಹ ತಯಾರು ಮಾಡಿಸುವ ಮೂಲಕ ಜಿಲ್ಲೆಯ ಜನರಿಗೆ ಆರ್ಥಿಕಾಭಿವೃದ್ದಿ ಮತ್ತು ಜಿಲ್ಲೆಯನ್ನು ಆರ್ಥಿಕಾಭಿವೃದ್ದಿಯತ್ತ ಕೊಂಡೊಯ್ಯಲು ಉದ್ದೇಶಿಸಲಾಗಿದೆ ಎಂದರು.
ಮಣ್ಣಿನ ಗಣೇಶ ಮೂರ್ತಿ ಮಾರಾಟವಾಗುವ ಸ್ಥಳದಲ್ಲಿಯೇ ಈ ಭಾರಿ ಬೆಲ್ಲದ ಮೂರ್ತಿಗಳು ಲಭಿಸುವಂತೆ ಮಾಡಲು ಮಹಾನಗರ ಪಾಲಿಕೆ ಹಾಗೂ ಪರಿಸರ ಇಲಾಖೆಯಿಂದ ಬೆಲ್ಲದ ಗಣೇಶ ಮೂರ್ತಿಗಳನ್ನು ತರಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಏಕಗವಾಕ್ಷಿ;
ಗಣೇಶ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಟಾಪನೆ ಮಾಡಲು ಅಗತ್ಯ ಅನುಮತಿಗಾಗಿ ದಾವಣಗೆರೆ ಜಿಲ್ಲೆಯಲ್ಲಿ 7 ಕಡೆ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ದಾವಣಗೆರೆ ಬಡಾವಣೆ ಠಾಣೆ, ಹರಿಹರ ನಗರಸಭಾ ಕಾರ್ಯಾಲಯ, ಮಲೆಬೆನ್ನೂರು ಪುರಸಭಾ ಕಚೇರಿ, ಜಗಳೂರು ಪೊಲೀಸ್ ಠಾಣೆ, ಹೊನ್ನಾಳಿ ಪೊಲೀಸ್ ಠಾಣೆ, ನ್ಯಾಮತಿ ಪೊಲೀಸ್ ಠಾಣೆ, ಚನ್ನಗಿರಿ ಪೊಲೀಸ್ ಠಾಣೆ ಇಲ್ಲಿ ಅನುಮತಿ ಪಡೆಯಬಹುದಾಗಿದ್ದು ಇಲ್ಲಿಯವರೆಗೆ ನೀಡಲಾದ 239 ಪರವಾನಗಿಯಲ್ಲಿ ದಾವಣಗೆರೆಯಲ್ಲಿ 217, ಹರಿಹರ 9, ಮಲೆಬೆನ್ನೂರು 2, ಜಗಳೂರು 6, ನ್ಯಾಮತಿ 1, ಹೊನ್ನಾಳಿ 1, ಚನ್ನಗಿರಿ 3 ಪರವಾನಗಿ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಾಲಿಕೆ ಆಯುಕ್ತರಾದ ರೇಣುಕಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಮಹಂತೇಶ್, ಪರಿಸರ ಅಧಿಕಾರಿ ಲಕ್ಷ್ಮಿಕಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಉಪಸ್ಥಿತರಿದ್ದರು.