SUDDIKSHANA KANNADA NEWS/ DAVANAGERE/ DATE:26-10-2023
ದಾವಣಗೆರೆ: ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕವಾಗಿ ಯಾವುದೇ ಅವಘಡಗಳು ಸಂಭವಿಸದಂತೆ ಜನರು ಹಸಿರು ಪಟಾಕಿ ಬಳಸಿ ಪರಿಸರ ಸ್ನೇಹಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕವಾಗಿ ಯಾವುದೇ ಅವಘಡಗಳು ಸಂಭವಿಸದಂತೆ ಜನರು ಸಂಭ್ರಮ, ಸಂತೋಷದಿಂದ ಹಬ್ಬ ಆಚರಿಸಬೇಕಾಗಿದೆ. ಈ ಬಾರಿಯ ಹಬ್ಬದಲ್ಲಿ ಹೆಚ್ಚು ಶಬ್ಧ ಬರುವಂತಹ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಟಾಕಿ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಮತ್ತು ಮಾರಾಟವನ್ನು ನಿಗಧಿತ ಪ್ರದೇಶದಲ್ಲಿಯೇ ಮಾರಾಟ ಮಾಡಬೇಕೆಂದು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು ಅವರು ನೀಡಿದ ವರದಿಯನ್ವಯ ಸ್ಥಳವನ್ನು ಗುರುತಿಸಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ದಾವಣಗೆರೆ ನಗರ ಸ್ಮಾರ್ಟ್ ಸಿಟಿಯಾಗಿದ್ದು ಹೈಸ್ಕೂಲ್ ಮೈದಾನದಲ್ಲಿ ಈ ಹಿಂದೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತು. ಖಾಸಗಿ ಬಸ್ ನಿಲ್ದಾಣ, ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣ, ಶಾಲೆ ಇರುವುದರಿಂದ ಮತ್ತು ಮೈದಾನವು ಚಿಕ್ಕದಾಗುವುದರಿಂದ ಇಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲು ಮಾರ್ಗಸೂಚಿಯನ್ವಯ ಅವಕಾಶ ಇಲ್ಲದ ಪ್ರಯುಕ್ತ ಹರಿಹರ ರಸ್ತೆಯ ಜೆ.ಎಂ.ಐ.ಟಿ ಪಕ್ಕದ ಖಾಸಗಿ ಜಮೀನು ಅಥವಾ ಸೂಕ್ತವಾದ ಸ್ಥಳವನ್ನು ಗುರುತಿಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿವವರಿಸಿದರು.
ಹರಿಹರ, ಹೊನ್ನಾಳಿ, ಮೆಬೆನ್ನೂರು, ನ್ಯಾಮತಿ, ಚನ್ನಗಿರಿ, ಜಗಳೂರು, ನಲ್ಲೂರು ಗ್ರಾಮದಲ್ಲಿ ಪಟಾಕಿ ಮಾರಾಟಕ್ಕೆ ಪ್ರತ್ಯೇಕವಾದ ಸ್ಥಳವನ್ನು ಗುರುತಿಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ನಿಗದಿತ ಅವಧಿಯಲ್ಲಿ ಪರವಾನಗಿ:
ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು ಜಿ.ಎಸ್.ಟಿ. ಹೊಂದಿರಬೇಕು. ಪರವಾನಗಿಯನ್ನು ಅಡೆತಡೆಗಳಿಲ್ಲದೆ ನೀಡಲು ಕ್ರಮ ವಹಿಸಲಾಗುತ್ತದೆ. ಪರವಾನಗಿ ಪಡೆದವರು ನಿಗಧಿತ ಸ್ಥಳದಲ್ಲಿ ಮಾರಾಟ ಮಾಡಲು ನವಂಬರ್ 9 ರಿಂದ 15 ರವರೆಗೆ ಮಾತ್ರ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪಟಾಕಿ ಮಾರಾಟ ಮಳಿಗೆಯನ್ನು 10*10 ರ ಅಳತೆಯಲ್ಲಿ ನಿರ್ಮಿಸಬೇಕು ಹಾಗೂ ಪಟಾಕಿ ಮಾರಾಟಕ್ಕೆ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಬಾರದು ಎಂದರು.
ಹಬ್ಬದ ಸಮಯದಲ್ಲಿ ವಿವಿಧ ರೀತಿಯ ಪಟಾಕಿಗಳನ್ನು ಸಿಡಿಸುವುದರಿಂದ ಉಂಟಾಗುವ ಶಬ್ಧಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಹಸಿರು ಪಟಾಕಿಗೆ ಉತ್ತೇಜನ ನೀಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಹೊನ್ನಾಳಿ ಉಪ ವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮಲ್ಲನಾಯ್ಕ್, ದಾವಣಗೆರೆ ತಾಲ್ಲೂಕು ತಹಸಿಲ್ದಾರ್ ಡಾ. ಅಶ್ವತ್ ಎಂ.ಬಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ ಕೆ.ಆರ್, ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ ಹಾಗೂ ಪಟಾಕಿ ಮಾರಾಟಗಾರರು ಉಪಸ್ಥಿತರಿದ್ದರು.