ದಾವಣಗೆರೆ:ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಸಮರ್ಥ್ ಶಾಮನೂರು ಅವರನ್ನೊಳಗೊಂಡ ‘ಎಸ್‌ಎಸ್‌ಎಂ’ ಕುಟುಂಬದ ವಿರುದ್ಧ ವೈಯಕ್ತಿಕ ಹಾಗೂ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರು ಮಾತನಾಡುವಾಗ ನಾಲಗೆಯ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು ಎಂದು ಎಚ್ಚರಿಸಿರುವ ಅವರು, ಜಿಲ್ಲೆಯ ಜನಪ್ರಿಯ ನಾಯಕರ ವಿರುದ್ಧ ಆಧಾರರಹಿತ ಮತ್ತು ವೈಯಕ್ತಿಕ ಟೀಕೆ ಮಾಡುವುದು ರಾಜಕಾರಣದ ಅಸಭ್ಯ ಸಂಸ್ಕೃತಿ ಎಂದು ಕಟುವಾಗಿ ಟೀಕಿಸಿದ್ದಾರೆ.
ಆರೋಪಕ್ಕೂ ಮುನ್ನ ಸತ್ಯಾಸತ್ಯತೆ ಅರಿಯಿರಿ:
ಈ ಕುರಿತು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸೈಯದ್ ಖಾಲಿದ್ ಅಹ್ಮದ್, “ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಸೇರಿದಂತೆ ಕೆಲವು ನಾಯಕರು ಮಾಧ್ಯಮಗಳ ಮುಂದೆ ಆರೋಪ ಮಾಡುವ ಮೊದಲು ವಿಷಯದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು. ಎಸ್‌ಎಸ್‌ಎಂ ಕುಟುಂಬವು ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಇಂತಹ ಜನಪ್ರಿಯ ಕುಟುಂಬದ ವಿರುದ್ಧ ಆಧಾರರಹಿತವಾಗಿ ನಡೆದುಕೊಳ್ಳುವುದು ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದೆ” ಎಂದಿದ್ದಾರೆ.
ಬಿಜೆಪಿ ಆಡಳಿತ ಭ್ರಷ್ಟಾಚಾರದ ಕೂಪವಾಗಿತ್ತು:
ಕಾಂಗ್ರೆಸ್ ನಾಯಕರ ನೈತಿಕತೆ ಪ್ರಶ್ನಿಸುವ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, “ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಮಿತಿಮೀರಿತ್ತು. ಸ್ವತಃ ಅವರದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ‘ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ’ ಎಂದು ಬಹಿರಂಗವಾಗಿ ಕರೆದಿದ್ದರು. ಮಾಜಿ ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಹಾಗೂ ಜನಾರ್ದನ ರೆಡ್ಡಿ ಅವರಂತಹ ಬಿಜೆಪಿ ನಾಯಕರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದವರು. ಇಂತಹ ಹಿನ್ನೆಲೆಯುಳ್ಳ ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಅಥವಾ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಮಾಡದ ಬಿಜೆಪಿಗೆ ಗ್ಯಾರಂಟಿ ಜನಪ್ರಿಯತೆ ಕಂಡು ಹೊಟ್ಟೆಕಿಚ್ಚು:
“ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಬಾಳಿಗೆ ಬೆಳಕಾಗಿವೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾಗದೆ ತತ್ತರಿಸಿರುವ ಬಿಜೆಪಿ ನಾಯಕರು ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಬಿಜೆಪಿ ಆಡಳಿತದಲ್ಲಿದ್ದಾಗ ದಾವಣಗೆರೆಯಲ್ಲಿ ನಡೆಸಿದ ಕಾಮಗಾರಿಗಳ ಸ್ಥಿತಿ ಹೇಗಿತ್ತು ಎಂಬುದು ಅಶೋಕ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿಯ ಮೇಲ್ಸೇತುವೆ ಹಾಗೂ ಖಾಸಗಿ ಬಸ್ ನಿಲ್ದಾಣವನ್ನು ನೋಡಿದರೆ ತಿಳಿಯುತ್ತದೆ. ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಬಿಟ್ಟು ಹಣ ಲೂಟಿ ಹೊಡೆಯುವುದರಲ್ಲೇ ಮಗ್ನರಾಗಿದ್ದ ಬಿಜೆಪಿಗರು, ಇಂದು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವುದು ‘ಭೂತದ ಬಾಯಲ್ಲಿ ಭಗವದ್ಗೀತೆ’ ಕೇಳಿದಂತಿದೆ” ಎಂದು ಸೈಯದ್ ಖಾಲಿದ್ ಅಹ್ಮದ್ ಎಚ್ಚರಿಸಿದ್ದಾರೆ





Leave a comment