ದಾವಣಗೆರೆ: ಸಚಿವನಾಗಿದ್ದೇನೆ… ಜನರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರೆ ಮುಜುಗರವಾಗುತ್ತದೆ ಎಂಬ ಅಧಿಕಾರದ ಅಹಂ, ಆಡಂಬರದ ಹಮ್ಮು-ಬಿಮ್ಮು ಯಾವುದೂ ಇಲ್ಲದೆ, ಸಾಮಾನ್ಯ ಭಕ್ತನಂತೆ ಜನರೊಂದಿಗೆ ಬೆರೆತು ದೇವರ ಪ್ರಸಾದ ಸ್ವೀಕರಿಸುವ ಮೂಲಕ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಸರಳತೆ ಮೆರೆದರು.
ತಾಲೂಕಿನ ಆನಗೋಡು ಗ್ರಾಮದ ಶ್ರೀ ಮರಳುಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ಅಂಗವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು, ಶ್ರೀ ಮರಳುಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೂಜಾ ಕಾರ್ಯ ಮುಗಿದ ಬಳಿಕ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸಲಾಗುತ್ತಿದ್ದ ಪ್ರಸಾದವನ್ನು ಸಚಿವರು ಸಹ ಯಾವುದೇ ಹಿಂಜರಿಕೆಯಿಲ್ಲದೆ ಸ್ವೀಕರಿಸಿದರು. ಸಚಿವರಿಗೆ ಪ್ರತ್ಯೇಕ ವ್ಯವಸ್ಥೆ, ಪ್ರತ್ಯೇಕ ಆಸನ, ವಿಶೇಷ ಆತಿಥ್ಯ ಇರಬೇಕೆಂಬ ಮನೋಭಾವಕ್ಕೆ ತದ್ವಿರುದ್ಧವಾಗಿ ಜನಸಾಮಾನ್ಯರೊಂದಿಗೆ ಸಹಜವಾಗಿ ಬೆರೆತು, ಅವರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದ್ದು ಅಲ್ಲಿದ್ದವರ ಗಮನ ಸೆಳೆಯಿತು.
ಸಚಿವರ ಈ ಸರಳ ನಡೆಗೆ ಭಕ್ತರು ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಯಿತು. ಅಧಿಕಾರ ಎನ್ನುವುದು ಜನರಿಂದ ದೂರವಾಗಲು ಕಾರಣವಾಗಬಾರದು; ಬದಲಿಗೆ ಜನರೊಂದಿಗೆ ಇನ್ನಷ್ಟು ಹತ್ತಿರವಾಗಲು ಅವಕಾಶವಾಗಬೇಕು ಎಂಬುದನ್ನು ಬಸವಂತಪ್ಪ ಅವರ ನಡೆ ತೋರಿಸಿಕೊಟ್ಟಂತಾಯಿತು.
‘ಸಚಿವ’ ಎನ್ನುವ ಸ್ಥಾನಕ್ಕಿಂತ ‘ಭಕ್ತ’ ಎನ್ನುವ ಭಾವನೆ ದೊಡ್ಡದು!:
ಸಾಮಾನ್ಯವಾಗಿ ಅಧಿಕಾರದ ಸ್ಥಾನಕ್ಕೆ ಏರಿದಂತೆ ಜನರಿಂದ ಅಂತರ ಕಾಯ್ದುಕೊಳ್ಳುವ ಪ್ರವೃತ್ತಿ ಕಾಣಿಸಿಕೊಳ್ಳುತ್ತದೆ. ಆದರೆ ಬಸವಂತಪ್ಪ ಅವರು ಅದಕ್ಕೆ ಅಪವಾದ ಎಂಬಂತೆ, ದೇವರ ಸನ್ನಿಧಿಯಲ್ಲಿ ಸಚಿವನ ಸ್ಥಾನಮಾನವನ್ನು ಬದಿಗಿಟ್ಟು ಒಬ್ಬ ಸಾಮಾನ್ಯ ಭಕ್ತನಾಗಿ ನಡೆದುಕೊಂಡಿರುವುದು ವಿಶೇಷವಾಗಿತ್ತು.
ಜನರ ಸಮಸ್ಯೆಗಳನ್ನು ಆಲಿಸುವುದಷ್ಟೇ ಅಲ್ಲದೆ, ಅವರೊಂದಿಗೆ ಬೆರೆತು ಅವರ ಆಚರಣೆ, ಸಂಪ್ರದಾಯ ಹಾಗೂ ಭಕ್ತಿಯ ಭಾವನೆಗಳಿಗೆ ಗೌರವ ನೀಡುವ ಇಂತಹ ಸರಳ ನಡೆ ರಾಜಕಾರಣಿಗಳಿಗೆ ಜನರ ವಿಶ್ವಾಸ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಧಿಕಾರ ಬಂದಾಗ ಬದಲಾಗುವುದು ಸುಲಭ; ಆದರೆ ಅಧಿಕಾರದಲ್ಲಿದ್ದರೂ ಸರಳತೆಯನ್ನು ಉಳಿಸಿಕೊಳ್ಳುವುದು ನಿಜವಾದ ನಾಯಕತ್ವ. ಆನಗೋಡು ದೇವಸ್ಥಾನದ ಈ ಪ್ರಸಂಗದಲ್ಲಿ ಸಚಿವ ಕೆ.ಎಸ್. ಬಸವಂತಪ್ಪ ಅವರು ತೋರಿದ ಸರಳತೆ, ಸಾರ್ವಜನಿಕ ಜೀವನದಲ್ಲಿರುವ ಇತರ ಜನಪ್ರತಿನಿಧಿಗಳು ಹಾಗೂ ಸಚಿವರಿಗೆ ಮಾದರಿಯಾಗುವಂತಿದೆ.





Leave a comment