ದಾವಣಗೆರೆ: ಇಂದಿನ ಪತ್ರಿಕೋದ್ಯಮ ತನ್ನ ಮೂಲ ಆಶಯ ಮತ್ತು ಜವಾಬ್ದಾರಿಯನ್ನು ಮರೆಯುತ್ತಿರುವ ಸಂದರ್ಭದಲ್ಲಿ ಪತ್ರಕರ್ತರು ಸುಳ್ಳುಗಳಿಗೆ ಕವಚವಾಗದೆ, ಸತ್ಯದ ಕಿಟಕಿಗಳಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಪತ್ರಿಕೆಗಳಲ್ಲಿ ಜಾಹೀರಾತುಗಳು, ಬಣ್ಣದ ಪುಟಗಳು ಹಾಗೂ ವಿವಿಧ ಲೇಖನಗಳು ಹೆಚ್ಚಾಗಿದ್ದರೂ ಪತ್ರಿಕೋದ್ಯಮದ ನಿಜವಾದ ಉದ್ದೇಶ ಮರೆಯಾಗುತ್ತಿದೆ. ಜನರ ಸಮಸ್ಯೆಗಳ ಮೇಲೆ ಗಮನ ಹರಿಸುವುದು ಕಡಿಮೆಯಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ತಿಲಕ್ ಸೇರಿದಂತೆ ಹಲವರು ಜನರಲ್ಲಿ ಸ್ಫೂರ್ತಿ ಮತ್ತು ಉತ್ಸಾಹ ತುಂಬಲು ಪತ್ರಿಕೆಗಳನ್ನು ನಡೆಸಿದರು. ನಂತರ ಅಭಿವೃದ್ಧಿಪರ ಹಾಗೂ ತನಿಖಾ ಪತ್ರಿಕೋದ್ಯಮ ಬೆಳೆದಿತ್ತು. ಆದರೆ ಈಗ ‘ಸ್ಟೇಟ್ಮೆಂಟ್ ಓರಿಯೆಂಟೆಡ್’ ವರದಿಗಾರಿಕೆ ಹೆಚ್ಚಾಗಿದ್ದು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ಪಡೆಯುವುದಕ್ಕೆ ಸೀಮಿತವಾಗುತ್ತಿದೆ ಎಂದು ವಿಷಾದಿಸಿದರು.
ಡಿಜಿಟಲ್ ಮಾಧ್ಯಮ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬೆಳವಣಿಗೆಯಿಂದ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹರಡುವುದು ಸುಲಭವಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಸುಳ್ಳು ಸುದ್ದಿ ಹರಡಿದರೆ ಅದು ಯಾರನ್ನು ತಲುಪುತ್ತದೆ, ಯಾವ ರೀತಿಯ ಹಾನಿ ಉಂಟುಮಾಡುತ್ತದೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಸತ್ಯಶೋಧನೆ ಮತ್ತು ನಿಖರತೆ ಪತ್ರಕರ್ತರಿಗೆ ಅತ್ಯಂತ ಮುಖ್ಯ ಎಂದರು.
ಮಾಧ್ಯಮಗಳ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ ಎಂಬ ಮಾತುಗಳ ನಡುವೆಯೂ ಜನರಿಗೆ ಮುದ್ರಣ ಮಾಧ್ಯಮದ ಮೇಲೆ ಇಂದಿಗೂ ವಿಶ್ವಾಸವಿದೆ. ರಾಜ್ಯಮಟ್ಟದ ಪತ್ರಿಕೆಗಳ ಜೊತೆಗೆ ಜಿಲ್ಲಾ ಮಟ್ಟದ ಪತ್ರಿಕೆಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಜನರು ನಿಖರವಾದ ಸುದ್ದಿಗಾಗಿ ಇಂದಿಗೂ ಪತ್ರಕರ್ತರನ್ನೇ ನೋಡುತ್ತಾರೆ. ನಕಲಿ ಸುದ್ದಿಗಳನ್ನು ನೀಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಪತ್ರಿಕೆಗಳಿಂದ ಬಂದಿರುವ ತಮಗೆ ಗ್ರಾಮೀಣ ಹಾಗೂ ಜಿಲ್ಲಾ ಪತ್ರಕರ್ತರ ಕಷ್ಟ-ಸುಖಗಳ ಆಳವಾದ ಅರಿವಿದೆ. ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ ಎಂದು ಶ್ಲಾಘಿಸಿದರು.
ಪತ್ರಕರ್ತರ ಸಂಘಟನೆಗಳು ಪತ್ರಕರ್ತರ ಹಾಗೂ ಪತ್ರಿಕೋದ್ಯಮದ ಹಿತಕ್ಕಾಗಿ ಕೆಲಸ ಮಾಡುತ್ತವೆ. ಅವುಗಳಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಾರ್ತಾ ಇಲಾಖೆಯ ಆದೇಶದಿಂದ ಉಂಟಾಗಿದ್ದ ಸಮಸ್ಯೆಯನ್ನು ಕೇವಲ ಹತ್ತು ನಿಮಿಷಗಳಲ್ಲಿ ಬಗೆಹರಿಸಿದ ಘಟನೆ ಸ್ಮರಿಸಿದರು. ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಘೋಷಿಸಿದಂತೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ಜಾರಿಗೊಳಿಸಲಾಗಿದೆ. ಪತ್ರಕರ್ತರು ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗಾಗಿ ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಿದ್ದು, ಅನಾರೋಗ್ಯದ ಸಂದರ್ಭದಲ್ಲಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ದೊರೆಯಲಿದೆ ಎಂದರು.
ಪತ್ರಕರ್ತರಿಗೆ ನಿವೇಶನ ನೀಡಲು ಪ್ರಯತ್ನ:
ಎಂಎಲ್ಸಿ ಕೆ.ಎಂ.ಸುರೇಶ್ ಮಾತನಾಡಿ, ವರದಿಗಾರರ ಕೂಟಕ್ಕೆ ನಿವೇಶನ ಪಡೆಯಲು ಪ್ರಯತ್ನಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ನಿವೇಶನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಹಿಂದೆ ಬಿಜೆಪಿ ಸರ್ಕಾರವಿದ್ದಾಗ, ತಾವು ದೂಡಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಂಜಣ್ಣ ಮತ್ತು ಏಕಾಂತಪ್ಪ ಅವರ ಮನವಿಯ ಮೇರೆಗೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಒಂದು ರೂಪಾಯಿ ದರದಲ್ಲಿ 70×90 ಅಳತೆಯ ನಿವೇಶನ ನೀಡಲಾಗಿತ್ತು. ಆದರೆ ನಂತರ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದರು.
2008ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಶವಂತರಾವ್ ಜಾಧವ್ ಅಧ್ಯಕ್ಷರಾಗಿದ್ದಾಗ, ರವೀಂದ್ರನಾಥ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನಿವೇಶನವಿಲ್ಲದ 30 ಹಿರಿಯ ಪತ್ರಕರ್ತರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೂಲಕ ರಿಯಾಯಿತಿ ದರದಲ್ಲಿ 30 ನಿವೇಶನಗಳನ್ನು ಕೊಡಿಸಲಾದ ವಿಚಾರವನ್ನು ಸ್ಮರಿಸಿದರು.
ವಿದೇಶಗಳಲ್ಲಿ ಘಟನೆ ನಡೆದಾಗ ಸಣ್ಣ ಪ್ರಮಾಣದಲ್ಲಿ ಸುದ್ದಿ ಪ್ರಕಟಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ದೊಡ್ಡ ಪ್ರಮಾಣದಲ್ಲಿ ಪ್ರಕಟಿಸಲಾಗುತ್ತದೆ. ಆದರೆ ನಮ್ಮಲ್ಲಿ ಘಟನೆಗಳನ್ನು ದೊಡ್ಡದಾಗಿ ತೋರಿಸಿ, ಶಿಕ್ಷೆಯಾದಾಗ ಸಣ್ಣ ಮೂಲೆಯಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಪತ್ರಕರ್ತರು ಸಕಾರಾತ್ಮಕ ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಪತ್ರಕರ್ತರ ಕುಟುಂಬಗಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ: ದಿನೇಶ್ ಕೆ.ಶೆಟ್ಟಿ
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಪತ್ರಕರ್ತರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾಜದಲ್ಲಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯ. ಪತ್ರಕರ್ತರ ಕುಟುಂಬಗಳಿಗೆ ಉಚಿತ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಬದ್ಧರಾಗಿದ್ದಾರೆ ಎಂದು ಭರವಸೆ ನೀಡಿದರು.
ಪತ್ರಕರ್ತರು ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗದಷ್ಟು ಒತ್ತಡದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಪತ್ರಕರ್ತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೈಜೋಡಿಸಿ ಪತ್ರಕರ್ತರ ಕುಟುಂಬಗಳಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಕಲ್ಪಿಸಿದರೆ ಯುವ ಪ್ರತಿಭೆಗಳು ಪತ್ರಿಕೋದ್ಯಮದತ್ತ ಆಕರ್ಷಿತರಾಗಲಿದ್ದಾರೆ ಎಂದರು.
ಪತ್ರಕರ್ತರಿಗೆ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ ಈಗಾಗಲೇ ನಿವೇಶನ ಪಡೆದವರನ್ನು ಹೊರತುಪಡಿಸಿ, ಜ್ಯೇಷ್ಠತೆ ಆಧಾರದ ಮೇಲೆ ‘ಎ, ಬಿ, ಸಿ’ ಪಟ್ಟಿಗಳನ್ನು ತಯಾರಿಸಿ, ನಿವೇಶನ ಸಿಗದ ಅರ್ಹ ಪತ್ರಕರ್ತರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಪತ್ರಕರ್ತರಿಗೆ ನಿವೇಶನ ನೀಡುವ ಭರವಸೆ ನೀಡಿದ್ದಾರೆ. ಬಾತಿಯಲ್ಲಿ ಗುರುತಿಸಿರುವ 200 ಎಕರೆ ಜಮೀನಿನಲ್ಲಿ ಕ್ರೀಡಾಪಟುಗಳು, ಅಂಗವಿಕಲರು ಮತ್ತು ಮಹಿಳೆಯರ ಜೊತೆಗೆ ಪತ್ರಕರ್ತರಿಗೂ ನಿಗದಿತ ಪ್ರಮಾಣದಲ್ಲಿ ನಿವೇಶನ ಮೀಸಲಿಡುವ ಕುರಿತು ಇತ್ತೀಚಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರಿಗೆ ಮೊದಲು ಆರೋಗ್ಯ ಭದ್ರತೆ ಕಲ್ಪಿಸಿ: ರವಿಕುಮಾರ್
ಕಾನಿಪ ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್ ಮಾತನಾಡಿ, ಪತ್ರಕರ್ತರ ಬದುಕು ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಕೋವಿಡ್ ನಂತರದ ಅವಧಿಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. 2021ರಿಂದ ಇಲ್ಲಿಯವರೆಗೆ, ಅದರಲ್ಲೂ ಕೋವಿಡ್ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದು, ಸುಮಾರು 50ರಿಂದ 56 ಪತ್ರಕರ್ತರು ಸಂಕಷ್ಟದ ನಡುವೆ ಸಾವನ್ನಪ್ಪಿದ್ದಾರೆ ಎಂದರು.
ವೈಯಕ್ತಿಕ ನಿವೇಶನ ಅಥವಾ ಪತ್ರಿಕಾ ಭವನಕ್ಕಿಂತ ಮೊದಲು ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಕ್ಯಾಶ್ಲೆಸ್ ಚಿಕಿತ್ಸೆ ವ್ಯವಸ್ಥೆ ಜಾರಿಗೆ ತರಬೇಕು. ಅಪಘಾತ ಅಥವಾ ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಆಸರೆಯಾಗುವ ಆರೋಗ್ಯ ಮತ್ತು ಜೀವ ವಿಮೆ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದು ಆಗ್ರಹಿಸಿದರು.
2013-2018ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ.ಪ್ರಭಾಕರ್ ಅವರು 2018ರಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಬಾಕಿ ಇದ್ದ ₹90 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದನ್ನು, ಆಯುಷ್ಮಾನ್ ಆರೋಗ್ಯ ಯೋಜನೆ ಹಾಗೂ ಬಸ್ ಪಾಸ್ ಸೌಲಭ್ಯ ಜಾರಿಯಲ್ಲಿ ವಹಿಸಿದ ಪಾತ್ರವನ್ನು ಸ್ಮರಿಸಿದರು.
ವರದಿಗಾರರ ಕೂಟವು ಸಮುದಾಯದ ಹಿತದ ಜೊತೆಗೆ ಪತ್ರಕರ್ತರ ವೈಯಕ್ತಿಕ ಶ್ರೇಯೋಭಿವೃದ್ಧಿಗೂ ಕಾರ್ಯಕ್ರಮಗಳನ್ನು ರೂಪಿಸಬೇಕು. ನೂತನ ಅಧ್ಯಕ್ಷ ರವಿ ಅವರ ನೇತೃತ್ವದ ಆಡಳಿತ ಮಂಡಳಿ ಸರ್ಕಾರದ ಮಟ್ಟದಲ್ಲಿ ಬೇಡಿಕೆಗಳಿಗೆ ಶಿಫಾರಸು ಮಾಡಿ ಸ್ಪಂದನೆ ಪಡೆಯುವ ವಿಶ್ವಾಸವಿದೆ ಎಂದರು.
ಒಗ್ಗಟ್ಟಿನಿಂದ ಹೋರಾಟ ಅಗತ್ಯ: ಬಿ.ಎನ್.ಮಲ್ಲೇಶ್
ಪ್ರಾಸ್ತಾವಿಕವಾಗಿ ಮಾತನಾಡಿದ ಕೂಟದ ಗೌರವ ಅಧ್ಯಕ್ಷ ಬಿ.ಎನ್.ಮಲ್ಲೇಶ್, ಪತ್ರಕರ್ತರಲ್ಲಿ ಗುಂಪುಗಾರಿಕೆ, ಜಾತಿಭೇದ ಹಾಗೂ ಭಿನ್ನಾಭಿಪ್ರಾಯಗಳು ತಲೆದೋರಿದರೆ ಒಗ್ಗಟ್ಟು ಸಾಧ್ಯವಾಗುವುದಿಲ್ಲ. ಒಗ್ಗಟ್ಟಿಲ್ಲದಿದ್ದರೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಸಮಸ್ಯೆಗಳು ಮತ್ತು ಸೌಲಭ್ಯಗಳಿಗಾಗಿ ಹೋರಾಡಲು ಎಲ್ಲರೂ ಒಂದಾಗಬೇಕು ಎಂದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಸುಮಾರು 164 ಸದಸ್ಯರು ಹಾಗೂ ಪತ್ರಕರ್ತರ ಸಂಘದಲ್ಲಿ 250ರಿಂದ 300 ಸದಸ್ಯರಿದ್ದಾರೆ. ಅರ್ಹ ಪತ್ರಕರ್ತರಿಗೆ ನಿವೇಶನ ಕಲ್ಪಿಸಬೇಕು ಹಾಗೂ ಸರ್ಕಾರದ ನಿಯಮದಂತೆ ಸುಮಾರು ಶೇ.5ರಷ್ಟು ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿಡಬೇಕು ಎಂದು ಮನವಿ ಮಾಡಿದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪತ್ರಿಕೆಗಳ ಮುದ್ರಣ ಪ್ರತಿಗಳ ಪರಿಶೀಲನೆಗಾಗಿ ಕರೆಂಟ್ ಬಿಲ್, ಪೇಪರ್ ಖರೀದಿ ಬಿಲ್, ವಿಡಿಯೋ ಸೇರಿದಂತೆ 25-30 ದಾಖಲೆಗಳನ್ನು ಕೇಳಿ ನೋಟಿಸ್ ನೀಡಲಾಗಿತ್ತು. ಆಗ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ತಂದಾಗ ತಕ್ಷಣ ಅದನ್ನು ಹಿಂಪಡೆಯಲಾಗಿತ್ತು. ಆದರೆ ಈಗ ಮತ್ತೆ ಅದೇ ರೀತಿಯ ಒತ್ತಡ ಎದುರಾಗುತ್ತಿದ್ದು, ಸುಮಾರು 75 ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸದಸ್ಯರ ಕಲ್ಯಾಣ, ಸ್ವಂತ ಕಟ್ಟಡಕ್ಕೆ ಆದ್ಯತೆ: ಆರ್.ರವಿ
ಕೂಟದ ನೂತನ ಅಧ್ಯಕ್ಷ ಆರ್.ರವಿ ಮಾತನಾಡಿ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು ಸಂತಸ ತಂದಿದ್ದು, ಇದು ದೊಡ್ಡ ಜವಾಬ್ದಾರಿ ಹಾಗೂ ಸವಾಲಿನ ಸಂಗತಿಯಾಗಿದೆ ಎಂದರು.
ವರದಿಗಾರರ ಕೂಟ ಈ ಮಟ್ಟಕ್ಕೆ ಬೆಳೆಯಲು ಒಬ್ಬರ ಪ್ರಯತ್ನ ಕಾರಣವಲ್ಲ. ಹಿರಿಯ ಪತ್ರಕರ್ತರು, ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳ ನಿರಂತರ ಶ್ರಮ, ಸಹಕಾರ ಮತ್ತು ಮಾರ್ಗದರ್ಶನವೇ ಸಂಘಟನೆಯ ಇಂದಿನ ಶಕ್ತಿಗೆ ಕಾರಣವಾಗಿದೆ ಎಂದು ಶ್ಲಾಘಿಸಿದರು.
20-25 ವರ್ಷಗಳ ಹಿಂದೆ 40-45 ಸದಸ್ಯರಿದ್ದ ಸಂಘಟನೆಯಲ್ಲಿ ಪ್ರಸ್ತುತ 165 ಸದಸ್ಯರಿದ್ದು, 19 ವರ್ಷಗಳ ಪಯಣ ಪೂರೈಸಿ 20ನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಹಿಂದಿನ ಅಧ್ಯಕ್ಷರಾದ ಕೆ.ಏಕಾಂತಪ್ಪ, ಚಂದ್ರಹಾಸ, ಮಲ್ಲಿಕಾರ್ಜುನ ಕಬ್ಬೂರು, ಎಂ.ಎಸ್.ವಿಕಾಸ್, ಬಸವರಾಜ ದೊಡ್ಮನಿ, ಬಿ.ಎನ್.ಮಲ್ಲೇಶ್, ಆರಾಧ್ಯ, ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಬಡದಾಳ್ ಹಾಗೂ ಎನ್.ಡಿ.ಶಾಂತಕುಮಾರ್ ಅವರ ಸೇವೆ ಸ್ಮರಣೀಯವಾಗಿದೆ ಎಂದರು.
ಜೀವಮಾನ ಸೇವಾ ಸಾಧನೆಗಾಗಿ ಗೌರವ ಸನ್ಮಾನ…
ಕೂಟದ ಹಿರಿಯ ಉಪಾಧ್ಯಕ್ಷ ಕೆ.ಚಂದ್ರಣ್ಣ, ಗೌರವ ಅಧ್ಯಕ್ಷ ಕೆ.ಏಕಾಂತಪ್ಪ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ, ಕೂಟದ ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ ಹಾಗೂ ಸುವರ್ಣ ಟಿವಿ ಮಾಜಿ ಹಿರಿಯ ವರದಿಗಾರ ಡಾ.ವರದರಾಜ್ ಅವರಿಗೆ ಜೀವಮಾನ ಸೇವಾ ಸಾಧನೆಗಾಗಿ ಗೌರವ ಸನ್ಮಾನ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಸದಸ್ಯರ ಕಲ್ಯಾಣ ಹಾಗೂ ವೃತ್ತಿಪರ ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮಗಳ ಆಯೋಜನೆಗೆ ಒತ್ತು ನೀಡಲಾಗುವುದು. ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವುದು ಹಾಗೂ ಗ್ರೂಪ್ ಇನ್ಸೂರೆನ್ಸ್ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಪತ್ರಕರ್ತರ ಸೇವಾ ಭದ್ರತೆ, ಭವಿಷ್ಯದ ಸವಾಲುಗಳ ಕುರಿತು ಚರ್ಚಿಸುವುದು ಹಾಗೂ ಸಂಘಟನೆಗೆ ಸ್ವಂತ ನಿವೇಶನ ಮತ್ತು ಕಟ್ಟಡ ಹೊಂದುವ ಪ್ರಯತ್ನಗಳನ್ನು ಮುಂದುವರಿಸಲಾಗುವುದು ಎಂದರು.
ಸಂಘಟನೆಯಲ್ಲಿ ಈ ಹಿಂದೆ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಪ್ರಸ್ತುತ ಎಲ್ಲರೂ ಒಗ್ಗಟ್ಟಾಗಿರುವುದು ಸಂತಸದ ವಿಚಾರ. ಭಾಷಣಕ್ಕಿಂತ ಕೆಲಸದ ಮೂಲಕವೇ ಸಾಮರ್ಥ್ಯ ತೋರಿಸಲು ಬಯಸಿದ್ದು, ದಾವಣಗೆರೆ ಜಿಲ್ಲಾ ವರದಿಗಾರರ ಕೂಟವನ್ನು ರಾಜ್ಯದಲ್ಲೇ ಮಾದರಿ ಕೂಟವನ್ನಾಗಿ ರೂಪಿಸುವ ಆಶಯ ಹೊಂದಿದ್ದೇನೆ ಎಂದು ತಿಳಿಸಿ, ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಿಂಗಪ್ಪ ಎ.ಎನ್., ಪುನೀತ್ ಆಪ್ತಿ, ಕೆ.ಎನ್.ಮಲ್ಲಿಕಾರ್ಜುನ ಮೂರ್ತಿ, ಹನುಮಂತರಾವ್, ಶೇಖರಗೌಡ ಪಾಟೀಲ್ ಹಾಗೂ ಬಾ.ರಾ.ಮಹೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕೂಟದ ಹಿರಿಯ ಉಪಾಧ್ಯಕ್ಷ ಕೆ.ಚಂದ್ರಣ್ಣ, ವಿಜಯವಾಣಿ ಸ್ಥಾನಿಕ ಸಂಪಾದಕ ಎನ್.ಡಿ.ಶಾಂತಕುಮಾರ್, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ, ಕೂಟದ ಗೌರವ ಅಧ್ಯಕ್ಷ ಕೆ.ಏಕಾಂತಪ್ಪ, ಮಾಜಿ ಅಧ್ಯಕ್ಷ ಬಸವರಾಜ ದೊಡ್ಡಮನಿ, ಕಾನಿಪ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ, ಕೂಟದ ಪ್ರಧಾನ ಕಾರ್ಯದರ್ಶಿ ಮಧು ನಾಗರಾಜ್, ಖಜಾಂಚಿ ಮಹೇಶ್ ಕಾಶೀಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬಿ.ಬಿ. ಮಲ್ಲೇಶ್ ಸ್ವಾಗತಿಸಿದರು, ಕೆ.ಎನ್. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಿಗೆ ಜೀವಮಾನ ಸೇವಾ ಸಾಧನೆಗಾಗಿ ಗೌರವ ಸನ್ಮಾನ ಹಾಗೂ ಜಿಲ್ಲಾಡಳಿತದ ರಾಜ್ಯೋತ್ಸವ ಪುರಸ್ಕೃತರಿಗೆ ಸನ್ಮಾನ ಮಾಡಲಾಯಿತು.
- Arogya Sanjeevini Scheme
- BN Mallesh
- Davangere District Reporters Guild
- Davangere News
- Dinesh K Shetty
- Fake News AI
- Journalists Oath Taking Ceremony
- Kannada Journalism
- KM Suresh
- KV Prabhakar
- N Ravikumar
- R Ravi President
- Sites for Journalists
- ಆರೋಗ್ಯ ಸಂಜೀವಿನಿ ಯೋಜನೆ
- ಆರ್ ರವಿ ಅಧ್ಯಕ್ಷ
- ಎನ್ ರವಿಕುಮಾರ್
- ಕೆ ಎಂ ಸುರೇಶ್
- ಕೆ.ವಿ. ಪ್ರಭಾಕರ್
- ದಾವಣಗೆರೆ ಜಿಲ್ಲಾ ವರದಿಗಾರರ ಕೂಟ
- ದಾವಣಗೆರೆ ಸುದ್ದಿ
- ದಿನೇಶ್ ಕೆ. ಶೆಟ್ಟಿ
- ನಕಲಿ ಸುದ್ದಿ ಎಐ
- ಪತ್ರಕರ್ತರ ಪದಗ್ರಹಣ ಸಮಾರಂಭ
- ಪತ್ರಕರ್ತರಿಗೆ ನಿವೇಶನ
- ಬಿ ಎನ್ ಮಲ್ಲೇಶ್




