ಮಧುರೈ: ತಮಿಳುನಾಡಿನ ಮಧುರೈನ ಪ್ರಸಿದ್ಧ ತಿರುಪ್ಪರಕುಂಡ್ರಂ ಗುಡ್ಡದ ಮೇಲಿರುವ ವಿವಾದಿತ ದೀಪಸ್ತೂಣದ ಮೇಲೆ ಶನಿವಾರ ಸಂಜೆ ಸಂಭ್ರಮ ಹಾಗೂ ಬಿಗಿ ಭದ್ರತೆಯ ನಡುವೆ ಕಾರ್ತೀಕ ದೀಪವನ್ನು ಬೆಳಗಿಸಲಾಯಿತು. ಸಂಜೆ 5:02ಕ್ಕೆ ದೀಪ ಪ್ರಜ್ವಲಿಸುತ್ತಿದ್ದಂತೆ ಗುಡ್ಡದ ತಪ್ಪಲಿನಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಕೈಮುಗಿದು, ಮುರುಗನ್ ನಾಮಸ್ಮರಣೆ ಮಾಡುತ್ತಾ ಭಾವುಕರಾದರು. ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾವಲು ಪಡೆಗಳ ಬಿಗಿ ಭದ್ರತೆಯಲ್ಲಿ ಈ ಧಾರ್ಮಿಕ ವಿಧಿವಿಧಾನ ನೆರವೇರಿತು.

ದೀರ್ಘಕಾಲದ ಕಾನೂನು ಹೋರಾಟ ಹಾಗೂ ವಿವಾದದ ಹಿನ್ನೆಲೆಯಲ್ಲಿ ಈ ಬಾರಿಯ ದೀಪೋತ್ಸವವು ಅತ್ಯಂತ ಮಹತ್ವ ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಮಾಜಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಮತ್ತು ಸಶಸ್ತ್ರ ಸಿಆರ್ಪಿಎಫ್ ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ದೀಪವನ್ನು ಹಚ್ಚಲಾಯಿತು. ಈ ವೇಳೆ ಭಕ್ತರು “ವೆಟ್ರಿವೇಲ್ ಮುರುಗನುಕ್ಕು ಅರೋಹರ”, “ವೆಟ್ರಿವೇಲ್, ವೀರವೇಲ್” ಎಂದು ಜೈಕಾರ ಕೂಗಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ದೀಪ ಬೆಳಗುತ್ತಿದ್ದಂತೆ ಅನೇಕ ಮಹಿಳೆಯರು ಹಾಗೂ ಭಕ್ತರು ಆನಂದಭಾಷ್ಪ ಸುರಿಸಿದರು.
ಸುಪ್ರೀಂ ಕೋರ್ಟ್ ಆದೇಶ ಮತ್ತು ಛೀಮಾರಿ: ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿದ ತಮಿಳುನಾಡು ಸರ್ಕಾರದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ, ರಾಜ್ಯ ಪೊಲೀಸ್ ವೈಫಲ್ಯವನ್ನು ಎತ್ತಿಹಿಡಿದು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿತ್ತು.
ಸಿಆರ್ಪಿಎಫ್ ಭದ್ರತೆ: ದೇವಾಲಯ ಮತ್ತು ತಿರುಪ್ಪರಕುಂಡ್ರಂ ಗುಡ್ಡದ ಸಂಪೂರ್ಣ ಭದ್ರತೆಯನ್ನು ಸಿಆರ್ ಪಿಎಫ್ ಗೆ ವಹಿಸಲಾಗಿದ್ದು, ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿಯ ನೇತೃತ್ವದಲ್ಲಿ ದೀಪೋತ್ಸವ ಯಶಸ್ವಿಯಾಗಿ ಜರುಗಿತು.
ದೀರ್ಘ ವಿವಾದಕ್ಕೆ ತೆರೆ: ಕಳೆದ ನವೆಂಬರ್ 20 ರಂದೇ ದೀಪ ಹಚ್ಚಲು ಅನುಮತಿ ನೀಡಿದ್ದರೂ, ಸ್ಥಳೀಯವಾಗಿ ಉಂಟಾದ ವಿವಾದದಿಂದಾಗಿ ಕೇವಲ ಉಚಿಪಿಳ್ಳಯಾರ್ ಮಂಟಪದಲ್ಲಿ ಮಾತ್ರ ದೀಪ ಹಚ್ಚಲಾಗಿತ್ತು. ಇದೀಗ ಗುಡ್ಡದ ಮೇಲಿನ ದೀಪಸ್ತೂಣದಲ್ಲಿ ದೀಪ ಬೆಳಗುವ ಮೂಲಕ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆಬಿದ್ದಿದೆ.




