Home ಕ್ರೈಂ ನ್ಯೂಸ್ “ಶರದ್ ಪವಾರ್ ಅವರ ಬಾಸ್ ದಾವೂದ್ ಇಬ್ರಾಹಿಂ”: ಪ್ರಕಾಶ್ ಅಂಬೇಡ್ಕರ್ ಹೊಸ ಬಾಂಬ್, 90ರ ದಶಕದ ಆ ರಹಸ್ಯ ಮತ್ತೆ ಮುನ್ನೆಲೆಗೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಶರದ್ ಪವಾರ್ ಅವರ ಬಾಸ್ ದಾವೂದ್ ಇಬ್ರಾಹಿಂ”: ಪ್ರಕಾಶ್ ಅಂಬೇಡ್ಕರ್ ಹೊಸ ಬಾಂಬ್, 90ರ ದಶಕದ ಆ ರಹಸ್ಯ ಮತ್ತೆ ಮುನ್ನೆಲೆಗೆ!

Share
ದಾವೂದ್ ಇಬ್ರಾಹಿಂ
Share

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರು ಮತ್ತೊಮ್ಮೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ತಳುಕು ಹಾಕಿಕೊಂಡಿದೆ. ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಶರದ್ ಪವಾರ್ ಬೆಂಬಲ ನೀಡಿರುವುದನ್ನು ಟೀಕಿಸಿರುವ ವಂಚಿತ್ ಬಹುಜನ್ ಆಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್, “ಎನ್‌ಸಿಪಿ ದಾವೂದ್‌ನ ಪಕ್ಷ ಮತ್ತು ಶರದ್ ಪವಾರ್ ಅವರ ‘ಬಾಸ್’ ದಾವೂದ್ ಇಬ್ರಾಹಿಂ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪುಣೆಯಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ದುಬೈಗೆ ಭೇಟಿ ನೀಡಿದ್ದ ವೇಳೆ ದಾವೂದ್ ಅವರಿಗೆ ಚಿನ್ನದ ಸರ ಹಾಕಿ ಸ್ವಾಗತಿಸಿದ್ದ ಎಂದು ಹಳೆಯ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಆದರೆ, 80ರ ಹರೆಯದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರಿಗೆ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಜೊತೆ ನಂಟಿದೆ ಎಂಬ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. 1990ರ ದಶಕದಿಂದಲೂ ಇಂತಹ ಆರೋಪಗಳು ಕೇಳಿಬಂದಿದ್ದರೂ, ಇದುವರೆಗೂ ಯಾವುದೇ ತನಿಖಾ ಸಂಸ್ಥೆಗಳು ಈ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ.

ಜಿ.ಆರ್. ಖೈರ್ನಾರ್ ಆರೋಪಗಳು (1990ರ ದಶಕ): ಮುಂಬೈ ಪಾಲಿಕೆಯ ಅಧಿಕಾರಿ ಮತ್ತು ‘ಡೆಮಾಲಿಷನ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ಜಿ.ಆರ್. ಖೈರ್ನಾರ್, ದಾವೂದ್ ಪತ್ನಿ ಹೆಸರಿನ ‘ಮೆಹಜಬೀನ್’ ಕಟ್ಟಡವನ್ನು ನೆಲಸಮಗೊಳಿಸಿದ್ದರು. ಬಳಿಕ ಮೊಹಮ್ಮದ್ ಅಲಿ ರಸ್ತೆಯ ಅಕ್ರಮ ಕಟ್ಟಡಗಳ ತೆರವು ವಿವಾದದ ನಂತರ ತಮ್ಮ ಅಧಿಕಾರ ಕಡಿತಗೊಂಡಾಗ, ಪವಾರ್ ಅವರು ದಾವೂದ್ ಪರ ಕೆಲಸ ಮಾಡುತ್ತಿದ್ದಾರೆ ಮತ್ತು ತಮ್ಮ ಬಳಿ ಟ್ರಕ್‌ಗಟ್ಟಲೆ ಸಾಕ್ಷ್ಯಗಳಿವೆ ಎಂದು ಆರೋಪಿಸಿದ್ದರು. ಆದರೆ ಆ ಸಾಕ್ಷ್ಯಗಳನ್ನು ಅವರು ಎಂದಿಗೂ ಬಹಿರಂಗಪಡಿಸಲಿಲ್ಲ.

ವಿಪಕ್ಷಗಳ ವಾಗ್ದಾಳಿ: ಅಂದು ಬಿಜೆಪಿ ಮತ್ತು ಶಿವಸೇನೆ ಈ ಆರೋಪಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದವು. ಚುನಾವಣಾ ರ‍್ಯಾಲಿಯೊಂದರಲ್ಲಿ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ, “ಅವರ ಬಳಿ ದಾವೂದ್ ಇದ್ದರೆ, ನಮ್ಮ ಬಳಿ ಗಾವ್ಳಿ (ಅರುಣ್ ಗಾವ್ಳಿ) ಇದ್ದಾನೆ” ಎಂದು ಬಹಿರಂಗವಾಗಿ ಗುಡುಗಿದ್ದರು.

ಚುನಾವಣಾ ಟಿಕೆಟ್ ಮತ್ತು ಐಪಿಎಸ್ ಅಧಿಕಾರಿ ಅಫಿಡವಿಟ್: 1990ರಲ್ಲಿ ವಿರಾರ್ ಮತ್ತು ಉಲ್ಲಾಸನಗರದ ಟಾಡಾ (TADA) ಆರೋಪಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಪವಾರ್ ಪ್ರಚಾರ ಮಾಡಿದ್ದರು ಎಂಬ ಆರೋಪವಿದೆ. 1994ರಲ್ಲಿ ಐಪಿಎಸ್ ಅಧಿಕಾರಿ ಉಲ್ಲಾಸ್ ಜೋಶಿ, ಬಾಂಬೆ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿ ಪವಾರ್ ಈ ಗ್ಯಾಂಗ್‌ಸ್ಟರ್‌ಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿದ್ದರು. ಆದರೆ, ಜೋಶಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ತನಿಖೆ ನಡೆಯುತ್ತಿದ್ದ ಕಾರಣಕ್ಕೆ ಅವರು ಹೀಗೆ ಆರೋಪಿಸುತ್ತಿದ್ದಾರೆ ಎಂದು ಪವಾರ್ ತಿರುಗೇಟು ನೀಡಿದ್ದರು.

ರಾಮ್ ಜೇಠ್ಮಲಾನಿ ಶರಣಾಗತಿ ಪ್ರಸ್ತಾಪ: ದಾವೂದ್ ಇಬ್ರಾಹಿಂ ಲಂಡನ್‌ನಿಂದ ಕರೆ ಮಾಡಿ ಕೆಲವು ಷರತ್ತುಗಳೊಂದಿಗೆ ಶರಣಾಗಲು ಬಯಸಿದ್ದ, ಆದರೆ ಅಂದು ಸರ್ಕಾರದಲ್ಲಿದ್ದ ಶರದ್ ಪವಾರ್ ಅದನ್ನು ತಿರಸ್ಕರಿಸಿದ್ದರು ಎಂದು ಈ ಹಿಂದೆಯೇ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದರು. “ಭೂಗತ ಪಾತಕಿಯೊಬ್ಬ ಸರ್ಕಾರಕ್ಕೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ” ಎಂದು ಪವಾರ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

1993ರ ಅಕ್ಟೋಬರ್‌ನಲ್ಲಿ ಅಂದಿನ ಕೇಂದ್ರ ಗೃಹ ಕಾರ್ಯದರ್ಶಿ ಎನ್.ಎನ್. ವೋಹ್ರಾ ಅವರು ರಾಜಕಾರಣಿ-ಅಪರಾಧಿಗಳ ನಂಟಿನ ಕುರಿತು ವರದಿ ಸಲ್ಲಿಸಿದ್ದರೂ, ಆ ವರದಿ ಪೂರ್ಣವಾಗಿ ಬಹಿರಂಗಗೊಂಡಿಲ್ಲ. ತಮ್ಮ ಆತ್ಮಕಥೆ ‘ಆನ್ ಮೈ ಟರ್ಮ್ಸ್’ನಲ್ಲಿಯೂ ಪವಾರ್ ಈ ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇಂದಿಗೂ ಪವಾರ್ ಮತ್ತು ದಾವೂದ್ ನಡುವಿನ ಸಂಬಂಧಕ್ಕೆ ಯಾವುದೇ ಅಧಿಕೃತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ.

Share

Recent Posts

Recent Comments

No comments to show.
Related Articles