ದಾವಣಗೆರೆ: ಜಿ.ಎಂ. ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (E&CE) ವಿಭಾಗದ ವತಿಯಿಂದ ಹಾಗೂ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಪ್ರಾಯೋಜಕತ್ವದಲ್ಲಿ ಹಾಗೂ NIELIT, ಚಿತ್ರದುರ್ಗ ಸಹಯೋಗದಲ್ಲಿನ ಐದು ದಿನಗಳ ‘eChipHub Bootcamp’ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಆಗಸ್ಟ್ 17ರಂದು ವಿದ್ಯುಕ್ತ ಚಾಲನೆ ದೊರೆಯಿತು.
ಜಿ.ಎಂ. ವಿಶ್ವವಿದ್ಯಾಲಯದ ಹಾಲಮ್ಮ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ-ವೈಸ್ ಚಾನ್ಸಲರ್ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್, ಜಿಎಂಐಟಿ ಪ್ರಾಂಶುಪಾಲರಾದ ಡಾ. ಓಂಕಾರಪ್ಪ ಕೆ.ಎಸ್ ಹಾಗೂ ಸ್ಕೂಲ್ ಆಫ್ ಎಂಜಿನಿಯರಿಂಗ್ ನಿರ್ದೇಶಕರಾದ ಡಾ. ಪ್ರವೀಣ್ ಜೆ ಉಪಸ್ಥಿತರಿದ್ದರು. ಆಗಸ್ಟ್ 21ರವರೆಗೆ ನಡೆಯಲಿರುವ ಈ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
NIELIT ಚಿತ್ರದುರ್ಗದ ಅಕಾಡೆಮಿಕ್ ಮುಖ್ಯಸ್ಥರಾದ ಎಸ್. ವಿಶ್ವನಾಥ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಲಿದ್ದಾರೆ. ಕಾರ್ಯಕ್ರಮದ ಸಂಯೋಜಕರಾಗಿ ಜಿ.ಎಂ. ವಿಶ್ವವಿದ್ಯಾಲಯದ ECE ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ವೀಣಾ ಎಚ್.ಟಿ ಹಾಗೂ ಕುಮಾರಿ ದೀಪಿಕಾ ವಿ.ಬಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎಸ್. ವಿಶ್ವನಾಥ ನಾಯಕ್ ಅವರು ಬೂಟ್‌ಕ್ಯಾಂಪ್‌ನಲ್ಲಿ ಒಳಗೊಂಡಿರುವ ಪಠ್ಯಕ್ರಮ, ತರಬೇತಿಯ ವಿವಿಧ ಹಂತಗಳು ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ಪ್ರಾಯೋಗಿಕ ಕಲಿಕೆಯ ಅವಕಾಶಗಳ ಕುರಿತು ವಿವರಿಸಿದರು.
ಡಾ. ಪ್ರವೀಣ್ ಜೆ. ಅವರು ಸೆಮಿಕಂಡಕ್ಟರ್ ಮತ್ತು VLSI ಕ್ಷೇತ್ರಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಹಾಗೂ ಈ ತರಬೇತಿಯ ಮೂಲಕ ವಿದ್ಯಾರ್ಥಿಗಳು ಕೈಗಾರಿಕಾ ಕ್ಷೇತ್ರದ ಅಗತ್ಯ ಕೌಶಲ್ಯಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡಿದರು.
ಬೂಟ್ ಕ್ಯಾಂಪ್‌ನಲ್ಲಿ ವಿದ್ಯಾರ್ಥಿಗಳಿಗೆ ಚಿಪ್ ವಿನ್ಯಾಸದ ವಿವಿಧ ಹಂತಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ವಿಶೇಷವಾಗಿ RTL ಡಿಸೈನ್, ಅನಾಲಾಗ್ ಡಿಸೈನ್, SoC ಡಿಸೈನ್ ಹಾಗೂ VLSI ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಚಯಿಸಲಾಗುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಆಧುನಿಕ ಚಿಪ್ ವಿನ್ಯಾಸ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಪ್ರಸ್ತುತ ಸೆಮಿಕಂಡಕ್ಟರ್ ಮತ್ತು VLSI ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಅಗತ್ಯ ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಲು ಈ ತರಬೇತಿ ಕಾರ್ಯಕ್ರಮ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ತರಗತಿಯ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಮೂಲಕ ಚಿಪ್ ವಿನ್ಯಾಸದ ಮೂಲಭೂತ ಹಾಗೂ ಮುಂದುವರಿದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಈ ಬೂಟ್ ಕ್ಯಾಂಪ್ ಉತ್ತಮ ವೇದಿಕೆಯಾಗಿದೆ.
ಈ ಕಾರ್ಯಕ್ರಮವು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)ದ ಯೋಜನೆಯಡಿ NIELIT ವತಿಯಿಂದ ಆಯೋಜಿಸಲ್ಪಟ್ಟಿದ್ದು, ವಿದ್ಯಾರ್ಥಿಗಳನ್ನು ದೇಶದ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಹಾಗೂ VLSI ಉದ್ಯಮಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.





Leave a comment