
ದಾವಣಗೆರೆ: ನಗರದ ಪಿ.ಬಿ. ರಸ್ತೆಯಲ್ಲಿರುವ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಸ್ಮರಣಾರ್ಥಕವಾಗಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಮೂರನೇ ವರ್ಷದ ‘ಜಿ. ಮಲ್ಲಿಕಾರ್ಜುನಪ್ಪ ಮತ್ತು ಜಿ.ಎಂ. ಹಾಲಮ್ಮ ಸ್ಮಾರಕ ಕಪ್’ ರಾಜ್ಯಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ವಿಭಾಗಗಳ ಬಾಸ್ಕೆಟ್ಬಾಲ್ ಪಂದ್ಯಾವಳಿಗೆ ಅದ್ದೂರಿಯಾಗಿ ಚಾಲನೆ ದೊರೆಯಿತು.
ನವೆಂಬರ್ 27, 28 ಮತ್ತು 29 ರಂದು ಜಿಎಂಯು ಕ್ಯಾಂಪಸ್ ಸ್ಪೋರ್ಟ್ಸ್ ಮೈದಾನದಲ್ಲಿ ನಡೆಯಲಿರುವ ಈ ಕ್ರೀಡಾಕೂಟವನ್ನು ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರು ಸ್ವತಹ ಬಾಸ್ಕೆಟ್ಬಾಲ್ ಆಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬಿದರು.
ಈ ವೇಳೆ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿ, “ಕಳೆದ ಮೂರು ವರ್ಷಗಳಿಂದ ನಮ್ಮ ತಂದೆ-ತಾಯಿಯವರ ಸ್ಮರಣಾರ್ಥ ಈ ರಾಜ್ಯಮಟ್ಟದ ಬಾಸ್ಕೆಟ್ಬಾಲ್ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಪ್ರತಿ ವರ್ಷವೂ ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ಬಾರಿ 16 ತಂಡಗಳು ಭಾಗವಹಿಸಿದ್ದರೆ, ಈ ವರ್ಷ ತಂಡಗಳ ಸಂಖ್ಯೆ 20ಕ್ಕೆ ಏರಿಕೆಯಾಗಿರುವುದು ಸಂತಸದ ವಿಷಯ. “ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ತಂಡಗಳು ಆಗಮಿಸಿ, ಈ ಕ್ರೀಡಾಕೂಟದ ಸದುಪಯೋಗ ಪಡೆದುಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
“ಇದೇ ತಿಂಗಳ 30ರಂದು ನಮ್ಮ ತಂದೆ-ತಾಯಿಯವರ ಪುಣ್ಯಸ್ಮರಣೆ ಕಾರ್ಯಕ್ರಮವಿದ್ದು, ಅಂದು ಭೀಮಸಮುದ್ರದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಪ್ರಯುಕ್ತ ಪೂರ್ವಭಾವಿಯಾಗಿ ನಮ್ಮ ಜಿಎಂ ವಿಶ್ವವಿದ್ಯಾಲಯದಲ್ಲಿ ಈ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್ ಮಾತನಾಡಿ, “ಜಿ. ಮಲ್ಲಿಕಾರ್ಜುನಪ್ಪ ಅವರ ದೂರದೃಷ್ಟಿಯು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ಕೌಶಲ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಸಿಗಬೇಕೆಂಬುದು ಅವರ ಆಶಯವಾಗಿತ್ತು. ಅವರ ಇದೇ ಕನಸಿನ ಫಲವಾಗಿ ಇಂದು ಇಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣವಾಗಿದ್ದು, ಅತ್ಯುತ್ತಮ ಮೂಲಸೌಕರ್ಯ ಕಲ್ಪಿಸಲಾಗಿದೆ” ಎಂದು ಸ್ಮರಿಸಿದರು.
“ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕು. ಅಂತಿಮವಾಗಿ ಗೆದ್ದ ತಂಡಕ್ಕೆ ಎಲ್ಲರೂ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಮೂಲಕ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡುತ್ತಾ, ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಈ ಪಂದ್ಯಾವಳಿಯಲ್ಲಿ ಬೆಂಗಳೂರು, ಬೆಳಗಾವಿ, ಹಾಸನ, ಧಾರವಾಡ, ಹುಬ್ಬಳ್ಳಿ, ಮೈಸೂರು, ಹೊಸಪೇಟೆ, ಶಿವಮೊಗ್ಗ, ಸುರತ್ಕಲ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳ ಕ್ರೀಡಾಪಟುಗಳ ಒಟ್ಟು 20 ತಂಡಗಳು ಭಾಗವಹಿಸಿದ್ದು, ಪುರುಷರ ವಿಭಾಗದಿಂದ 12 ತಂಡಗಳು ಹಾಗೂ ಮಹಿಳೆಯರ ವಿಭಾಗದಿಂದ 8 ತಂಡಗಳು ಪ್ರಶಸ್ತಿಗಾಗಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಈ ವೇಳೆ ಜಿಎಂ ಫಾರ್ಮಾಸ್ಯುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ, ಜಿಎಂ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಜಿಎಂ ಹಾಲಮ್ಮ ಪದವಿ ಪೂರ್ವ ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಜಿ.ಜೆ. ಶಿವಕುಮಾರ್, ಮುಖ್ಯ ಎಂಜಿನಿಯರ್ ಶಿವಮೂರ್ತಿ, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಕಿರಣ್ ಕುಮಾರ್ ಎಚ್.ಎಸ್., ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ ಹಾಗೂ ಡಾ. ಗಣೇಶ್ ಜಿ. ಟಿಲ್ವೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರಂಭಿಕ ಪಂದ್ಯದಾಟದ ಮಹಿಳೆಯರ ವಿಭಾಗದಲ್ಲಿ ದಾವಣಗೆರೆಯ ಎಸ್ಎಸ್ಐಎಂಎಸ್ ತಂಡವು (32 ಅಂಕಗಳು) ಹಾಸನದ ನವ್ಕಿಸ್ ತಂಡದ (05 ಅಂಕಗಳು) ವಿರುದ್ಧ ಏಕಪಕ್ಷೀಯ ಪ್ರದರ್ಶನ ನೀಡಿ ಭರ್ಜರಿ ಗೆಲುವು ದಾಖಲಿಸಿತು. ಅಂತೆಯೇ ಪುರುಷರ ವಿಭಾಗದಲ್ಲಿ ಸೇಂಟ್ ಪಾಲ್ಸ್ ತಂಡವು (53 ಅಂಕಗಳು) ಶಿವಮೊಗ್ಗದ ಪಿಇಎಸ್ ತಂಡವನ್ನು (22 ಅಂಕಗಳು) ಬೃಹತ್ ಅಂತರದಿಂದ ಮಣಿಸಿ ಶುಭಾರಂಭ ಮಾಡಿತು.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ತಂಡದ ಕ್ರೀಡಾಪಟುಗಳು ಟೂರ್ನಿಯ ವ್ಯವಸ್ಥೆ ಹಾಗೂ ತಮ್ಮ ಅನುಭವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೈಸೂರು ವಿಶ್ವವಿದ್ಯಾಲಯದ ಕ್ರೀಡಾ ಹಾಸ್ಟೆಲ್ನ ಮಹಿಳಾ ಬಾಸ್ಕೆಟ್ಬಾಲ್ ತಂಡದ ನಾಯಕಿ ಯಶಸ್ವಿನಿ ಮಾತನಾಡಿ, ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಅವರ ಸ್ಮರಣಾರ್ಥ ಕಳೆದ ವರ್ಷವೂ ನಾವು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದೆವು. ಈ ಬಾರಿ ಎರಡನೇ ಬಾರಿಗೆ ಆಡುತ್ತಿದ್ದೇವೆ”. “ಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್ ಹಾಗೂ ಬಾಸ್ಕೆಟ್ಬಾಲ್ ಮೈದಾನ ಅತ್ಯುತ್ತಮವಾಗಿದೆ. ಆಟಗಾರರಿಗೆ ಕಲ್ಪಿಸಲಾಗಿರುವ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ತುಂಬಾ ಚೆನ್ನಾಗಿದೆ ಎಂದು ಶ್ಲಾಘಿಸಿದರು.
“ಇಲ್ಲಿನ ಬಲಿಷ್ಠ ತಂಡಗಳ ವಿರುದ್ಧ ಆಡುವುದರಿಂದ ನಮಗೆ ಉತ್ತಮ ಅನುಭವ ಸಿಗುತ್ತಿದೆ. ಇಂತಹ ಪ್ರತಿಷ್ಠಿತ ಟೂರ್ನಮೆಂಟ್ಗಳಲ್ಲಿ ಹೆಚ್ಚೆಚ್ಚು ಪಂದ್ಯಗಳನ್ನು ಆಡುವುದರಿಂದ ಭವಿಷ್ಯದಲ್ಲಿ ಹೊರರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ. ಅಲ್ಲದೆ, ಸ್ಥಳೀಯ ಆಟಗಾರರಿಗೂ ಇದು ಉತ್ತಮ ಕಲಿಕೆಯ ವೇದಿಕೆಯಾಗಿದೆ” ಎಂದು ಅಭಿಪ್ರಾಯಪಟ್ಟರು.





