SUDDIKSHANA KANNADA NEWS/ DAVANAGERE/ DATE:29-02-2024
ದಾವಣಗೆರೆ: ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಹುಟ್ಟು ಹಾಕಿದ್ದ ಕೆ. ಶಿವರಾಂ ಅವರು ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗ ಎಂಬ ಖ್ಯಾತಿ
ಹೊಂದಿದ್ದರು. ಇಂದು ಇಹಲೋಕ ತ್ಯಜಿಸಿದ್ದಾರೆ. ಆದ್ರೆ, ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಕೆ. ಶಿವರಾಂ ಅವರದ್ದು ಬೆಣ್ಣೆನಗರಿಯಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರು.
ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸುಮಾರು ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಕೆಲಸ ನಿರ್ವಹಿಸಿ, ಮನೆ ಮಾತಾಗಿದ್ದರು. ಹಳ್ಳಿಗಳಲ್ಲಿ ಒಂದರಿಂದ ಮೂರು ದಿನಗಳ ಕಾಲ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಅಧಿಕಾರಿ. ಈ ಕ್ರಾಂತಿಕಾರಕ ಕಾರ್ಯಕ್ರಮ ಆಮೇಲೆ ಎಲ್ಲೆಡೆ ಪ್ರಚುರವಾಯಿತಲ್ಲದೇ, ರಾಜಕಾರಣಿಗಳು ಸೇರಿದಂತೆ ಅಧಿಕಾರಿಗಳು ಈಗಲೂ ಅನುಸರಿಸುತ್ತಿರುವುದು ವಿಶೇಷ. ಛಲವಾದಿ ಸಮಾಜಕ್ಕೆ ಆರ್ಥಿಕ ಸಬಲತೆ ತರಲು ಶ್ರಮಿಸಿದರು. ಗೊಲ್ಲರಹಟ್ಟಿಯಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಪಣ ತೊಟ್ಟಿದ್ದರು. ಆಗಲೇ ಜನರಲ್ಲಿ ಜಾಗೃತಿ ಮೂಡಿಸುವ ಕೈಂಕರ್ಯ ತೊಟ್ಟವರು.
ದಾವಣಗೆರೆ ಜಿಲ್ಲೆಯಾಗಿ ಘೋಷಣೆ ಆದ ಬಳಿಕ ಕೆ. ಎಸ್. ಮಂಜುನಾಥ್ ಅವರು ವಿಶೇಷ ಅಧಿಕಾರಿಯಾಗಿದ್ದರು. ಆ ನಂತರ ಬಿ. ಬಸವರಾಜ್ ಅವರು ಪ್ರಭಾರ ಕಾರ್ಯ ನಿರ್ವಹಿಸಿದ್ದರು. ಬಿ. ಹೆಚ್. ಅನಿಲ್ ಕುಮಾರ್ ಅವರು 2000ರಲ್ಲಿ ವರ್ಗಾವಣೆಗೊಂಡ ಬಳಿಕ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಬಂದವರೇ ಕೆ. ಶಿವರಾಂ. 2000 ಇಸವಿಯ ಏಪ್ರಿಲ್ 17ರಂದು ದಾವಣಗೆರೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಆ ನಂತರ 2002ರ ನವೆಂಬರ್ 22ರವರೆಗೆ ಜಿಲ್ಲಾಧಿಕಾರಿಯಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು. ಅಭಿವೃದ್ಧಿಗೆ ಶ್ರಮಿಸಿದ ಕೀರ್ತಿ ಸಲ್ಲುತ್ತದೆ.
ಕೆ. ಶಿವರಾಂ ಅವರು ಸಿಂಪಲ್ ಆಗಿದ್ದವರು. ಎಲ್ಲರೊಟ್ಟಿಗೂ ಉತ್ತಮ ಸಂಹವನ ಹೊಂದಿದ್ದರು. ಯಾರೇ ಕಷ್ಟ ಅಂತಾ ಹೋದರೂ ಸಮಾಧಾನದಿಂದ ಕೇಳಿಸಿಕೊಳ್ಳುತ್ತಿದ್ದರು. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು,
ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷವಾಗಿ ಸಹಾಯಹಸ್ತ ಚಾಚಿದವರು. ಅವರಿಗಾಗಿ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಲು ತುಂಬಾನೇ ಪ್ರಯತ್ನ ಪಟ್ಟರು. ಕೆಳಸಮುದಾಯದಲ್ಲಿ ಜಾಗೃತಿ ಮೂಡಿಸಲು, ಆರ್ಥಿಕವಾಗಿ ಸಬಲೀಕರಣ,
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಧಿಕಾರಿಯಾಗಿ ಶ್ರಮ ವಹಿಸಿದ ಕೀರ್ತಿ ಕೆ. ಶಿವರಾಂ ಅವರಿಗೆ ಸಲ್ಲುತ್ತದೆ.
1999ರಲ್ಲಿ ಎಸ್. ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದಾವಣಗೆರೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್. ಎಸ್. ಮಲ್ಲಿಕಾರ್ಜುನ್ ಅವರಿದ್ದರು. ಈ ವೇಳೆ ಎಸ್. ಎಂ. ಕೃಷ್ಣ ನಗರ ಸೇರಿದಂತೆ ಬಡವರಿಗೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು. ಸಾವಿರಾರು ಜನರಿಗೆ ಸೂರು ಒದಗಿಸಿಕೊಟ್ಟ ಕೀರ್ತಿ ಶಿವರಾಂ ಅವರಿಗೆ ಸಲ್ಲುತ್ತದೆ. ಎಸ್. ಎಂ. ಕೃಷ್ಣ ಅವರಿದ್ದಾಗಲೇ ಹಕ್ಕುಪತ್ರ ಕೊಡಿಸಿದರಲ್ಲದೇ, ನಿರ್ಗತಿಕರಿಗೆ ಮನೆ ಕಲ್ಪಿಸಿಕೊಟ್ಟ ಅಧಿಕಾರಿ ಎಂಬ ಶ್ರೇಯವನ್ನೂ ಪಡೆದಿದ್ದರು.
ಆಗಲೇ ಬೆಳೆದಿತ್ತು ನಂಟು:
ಜಿಲ್ಲಾಧಿಕಾರಿಯಾಗಿದ್ದರೂ ಸಹ ಆಗಿದ್ದಾಂಗೆ ಯಾರಿಗೂ ಗೊತ್ತಾಗದ ಹಾಗೆ ಆಗಲೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರಿಗೆ ಬಣ್ಣ ಲೋಕದ ಗೀಳು ಅಂಟಿತ್ತು. ಸಿನಿಮಾ ಶೂಟಿಂಗ್ ಗೆ ಯಾವಾಗ ಹೋಗುತ್ತಿದ್ದರು, ಯಾವಾಗ ಬರುತ್ತಿದ್ದರು ಎಂಬುದು ಹೆಚ್ಚಿನ ಜನರಿಗೆ ಗೊತ್ತೇ ಆಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಿದ್ದ ಛಾತಿ ಇದ್ದ ಕೆ. ಶಿವರಾಂ ಅವರು ದಾವಣಗೆರೆ ಜಿಲ್ಲೆಯಲ್ಲಿ ಅಚ್ಚಳಿಯದಂಥ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಇದನ್ನು ಈಗಲೂ ಅವರನ್ನು ಬಲ್ಲವರಿಗೆ ಮಾತ್ರ ಗೊತ್ತಿದೆ.
ಗ್ರಾಮ ವಾಸ್ತವ್ಯದಂಥ ಕಾರ್ಯಕ್ರಮ ಪರಿಚಯಿಸಿದವರು:
ಈಗ ಗ್ರಾಮ ವಾಸ್ತವ್ಯ ಮಾಡುತ್ತಿರುವ ಪರಿಕಲ್ಪನೆಯನ್ನು ಕೆ. ಶಿವರಾಂ ಅವರು 2000ನೇ ಇಸವಿಯಲ್ಲಿಯೇ ಕಾರ್ಯರೂಪಕ್ಕೆ ತಂದಿದ್ದರು ಎಂಬುದೇ ವಿಶೇಷ. ಸುಮಾರು 24 ವರ್ಷಗಳ ಹಿಂದೆಯೇ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಇಂಥದ್ದೊಂದು ಅಪರೂಪದ, ಜನಪ್ರಿಯ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದವರೇ ಕೆ. ಶಿವರಾಂ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲ, ಟೀಕೆ, ಟಿಪ್ಪಣಿ ಕೇಳಿ ಬಂದಾಗ ತಲೆಕೆಡಿಸಿಕೊಳ್ಳದೇ ಮುಂದುವರಿಯುತ್ತಿದ್ದ ಕೆ. ಶಿವರಾಂ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು.
24 ವರ್ಷಗಳ ಹಿಂದೆಯೇ ಹಳ್ಳಿಗಳಿಗೆ ಹೋಗಿ ವಾಸ್ತವ್ಯ ಮಾಡುತ್ತಿದ್ದ ಕೆ. ಶಿವರಾಂ ಅವರು, ಜನರ ಸಮಸ್ಯೆಗಳು, ಕುಂದುಕೊರತೆಗಳನ್ನು ಆಲಿಸುತ್ತಿದ್ದರು. ಅಲ್ಲಿಯೇ ಬಗೆಹರಿಸಲು ಸಾಧ್ಯವಾದ್ರೆ ಪರಿಹರಿಸುತ್ತಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು ಇಲ್ಲಿಗೆ ಬಂದು ದೂರು ಕೊಡಬಹುದಿತ್ತು. ಗ್ರಾಮೀಣ ಜನರ ಕಷ್ಟ, ನೋವು ನಲಿವು, ಸಮಸ್ಯೆಗಳ ಇತ್ಯರ್ಥಕ್ಕಾಗಿ ಇಂಥದ್ದೊಂದ ಕ್ರಾಂತಿಕಾರಕ ಕಾರ್ಯಕ್ರಮ ನಡೆಸಿದ್ದರು ಎನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಕೆ. ಶಿವರಾಂ ಅವರು ಜನರಿಗೆ ಹತ್ತಿರವಾಗಿದ್ದರು. ಬಡವರ ಪರವಾಗಿ ಕೆಲಸ ಮಾಡಿ ಬಡವರ ಅಧಿಕಾರಿ ಎಂಬ ಶ್ರೇಯವನ್ನೂ ಪಡೆದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ಪತ್ರಕರ್ತ ಹೆಚ್. ಬಿ. ಮಂಜುನಾಥ್ ಅವರು.
ಅಧಿಕಾರಿಗಳು ವಾಸ್ತವ್ಯ:
ಜಿಲ್ಲಾಧಿಕಾರಿಯಾಗಿದ್ದ ಕೆ. ಶಿವರಾಂ ಅವರು ಮಾತ್ರ ಗ್ರಾಮ ವಾಸ್ತವ್ಯ ಮಾಡ್ತಿರಲಿಲ್ಲ. ಅಧಿಕಾರಿಗಳನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಜೊತೆಗೆ ಈ ಕಾರ್ಯಕ್ರಮಕ್ಕೆಂದೇ ಬಸ್ ವೊಂದನ್ನು ಯಾವಾಗಲೂ ರೆಡಿ ಇರುತಿತ್ತು. ಈ ಬಸ್ ನಲ್ಲಿ ಹೋಗಿ ಗ್ರಾಮೀಣ ಪ್ರದೇಶಗಳ ಜನರ, ರೈತರ, ಹಿಂದುಳಿದವರ, ದಲಿತರು ಸೇರಿದಂತೆ ಎಲ್ಲಾ ವರ್ಗದವರ ಸಂಕಷ್ಟ ಪರಿಹರಿಸುವ ಕೆಲಸ ಮಾಡಿದವರು. ಸಮಸ್ಯೆಗಳು ಬಗೆಹರಿಯದಿದ್ದರೆ ಮತ್ತೆ ಮುಗಿಯುವವರೆಗೆ ಬಿಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಜನಪರ ಜಿಲ್ಲಾಧಿಕಾರಿ ಅಂತಾನೂ ಕರೆಯಿಸಿಕೊಂಡಿದ್ದರು. ಕೆಲ ಆರೋಪಗಳು ಕೇಳಿ ಬಂದಿದ್ದರೂ ಅಷ್ಟೇ ಲೀಲಾಜಾಲವಾಗಿ ಇದೆಲ್ಲಾ ಸಾಮಾನ್ಯ. ನಮ್ಮ ಕೆಲಸ ನಮಗೆ ತೃಪ್ತಿ ನೀಡಬೇಕು ಎಂದು ಆಪ್ತರಲ್ಲಿ ಹೇಳಿಕೊಳ್ಳುತ್ತಿದ್ದರು ಶಿವರಾಂ ಅವರು.
ಗೊಲ್ಲರಹಟ್ಟಿಯಲ್ಲಿ ಜಾಗೃತಿ:
ಮಹಿಳೆಯರು ಮುಟ್ಟಿನ ಸಂದರ್ಭ ಹಾಗೂ ಬಾಣಂತಿಯರನ್ನು ಊರಿನಿಂದ ಹೊರಗಿಡುವ ಅನಿಷ್ಯ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಗೊಲ್ಲರ ಹಟ್ಟಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದವರು. ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಕಾರ್ಯವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನೂ ತೆಗೆದು ಕೊಂಡಿದ್ದರು. ಶಿವರಾಂ ಅವರು ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಹಲವು ದಾಳಿಗಳನ್ನು ಮಾಡಿದ್ದಾರೆ.
ವಿದ್ಯುತ್ ಕಳ್ಳತನ ಪತ್ತೆ ಹಚ್ಚುವ ಟೆಕ್ನಿಕ್:
ಕೆ. ಶಿವರಾಂ ಅವರ ಕಾರ್ಯವೈಖರಿಗೆ ಡಿಫರೆಂಟ್ ಆಗಿತ್ತು. ಆಗ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಳ್ಳತನ ಹೆಚ್ಚಾಗುತಿತ್ತು. ಬೆಳಿಗ್ಗೆ ಸಂಪರ್ಕ ಕಡಿತ ಮಾಡುವುದು, ರಾತ್ರಿ ವೇಳೆ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಇದು ಜಿಲ್ಲಾಡಳಿತ ಹಾಗೂ ಇಂಧನ ಇಲಾಖೆಗೆ ತಲೆನೋವು ತಂದಿತ್ತು. ಇದನ್ನು ಪತ್ತೆ ಹಚ್ಚಲು ಶಿವರಾಂ ಅವರು ಮಾಡಿದ್ದ ಕಾರ್ಯತಂತ್ರವೇ ವಿಶೇಷವಾಗಿತ್ತು. ಹಳ್ಳಿ ಜನರ ಬಳಿ ಹೋಗಿ ಅವರಿಂದಲೇ ಕರೆಂಟ್ ಹೇಗೆ ಪಡೆಯುವುದು? ಇದು ಕಾರ್ಯಸಾಧ್ಯನಾ? ಹೇಗೆ ಸಾಧ್ಯವಾಗುತ್ತೆ? ನೀವು ಕಡಿಮೆ ಏನಲ್ಲ ಬಿಡಿ ಎಂದು ಮಾತನಾಡುತ್ತಾ ಅವರಿಂದಲೇ ಮಾಹಿತಿ ಪಡೆಯುತ್ತಿದ್ದರು. ಬಡವರಾದರೆ ಎಚ್ಚರಿಕೆ ಕೊಟ್ಟು ಮುಂದೆ ತಪ್ಪೆಸಗದಂತೆ ಸೂಚನೆ ನೀಡುತ್ತಿದ್ದರು. ದೊಡ್ಡವರಾಗಿದ್ದರೆ ದಂಡ ವಿಧಿಸುತ್ತಿದ್ದರು. ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವರಾಂ ಅವರು ಸುಮಾರು ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರಿಯಾಗಿ ಜನರಿಂದಲೂ ಪ್ರಶಂಸೆಗೆ ಪಾತ್ರವಾಗಿದ್ದರು.
ಟೆನಿಸ್ ಕೋರ್ಟ್:
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಟೆನಿಸ್ ಕೋರ್ಟ್ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂಡೋರ್ ಸ್ಟೇಡಿಯಂನ ಉನ್ನತಿಗೂ ಕಾರ್ಯತಂತ್ರ ರೂಪಿಸಿದವರು. ದಾವಣಗೆರೆ ಜಿಲ್ಲೆಯಾದ ಕಾರಣ ಹಮ್ಮಿಕೊಳ್ಳುತ್ತಿದ್ದ ಜಿಲ್ಲಾ ಉತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿಸಿ ಯಶಸ್ವಿ ಮಾಡಿದ ಕೀರ್ತಿಯೂ ಶಿವರಾಂ ಅವರಿಗೆ ಸಲ್ಲುತ್ತದೆ. ಒಟ್ಟಿನಲ್ಲಿ ಶಿವರಾಂ ಅವರು ಎರಡೂವರೆ ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದು, ಅವರ ಕಾರ್ಯಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ ಜನರು.