ದಾವಣಗೆರೆ: ನಗರದಲ್ಲಿ ಸದ್ದು ಮಾಡುತ್ತಿರುವ ‘ಪವರ್ ಫಿಟ್ನೆಸ್’ ಜಿಮ್ ಮಾಲೀಕ ಇಸ್ಮಾಯಿಲ್ ವಿರುದ್ಧದ ಆರೋಪಗಳಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ತನ್ನ ಮಗನಿಗೆ ಮಹಿಳೆಯೊಬ್ಬಳ ಜೊತೆ ಸಂಬಂಧವಿರುವುದನ್ನು ಒಪ್ಪಿಕೊಂಡಿರುವ ಆತನ ತಾಯಿ, ಇಡೀ ಪ್ರಕರಣವು ಆಕೆ ಮತ್ತು ಆಕೆಯ ಪತಿ ಸೇರಿ ನಡೆಸಿದ ಸುಸಜ್ಜಿತ ‘ಹನಿಟ್ರ್ಯಾಪ್’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಮಗ 12ರಿಂದ 13 ಮಹಿಳೆಯರು, ಯುವತಿಯರಿಗೆ ಮೋಸ ಮಾಡಿದ್ದಾನೆಂಬುದು ಶುದ್ಧ ಸುಳ್ಳು. ಒಬ್ಬಾಕೆ ಮಹಿಳೆ ಮತ್ತು ಆಕೆಯ ಪತಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ.
ಎರಡನೇ ಮದುವೆ ನೆಪದಲ್ಲಿ ಈ ಹಿಂದೆ 4 ಲಕ್ಷ ರೂ. ಪಡೆದಿದ್ದವರು, ಈಗ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ,” ಎಂದು ಆರೋಪಿಸಿದ್ದಾರೆ.
ಇದೊಂದು ವ್ಯವಸ್ಥಿತ ಪಿತೂರಿಯಾಗಿದ್ದು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪು ಮಾಡಿದ್ದರೆ ಮಗನಿಗೆ ಶಿಕ್ಷೆಯಾಗಲಿ, ಆದರೆ ಸುಳ್ಳು ಆರೋಪಗಳಿಂದ ನೊಂದು ನಮ್ಮ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದೆ
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 8ನೇ ತಾರೀಖಿನ ಬುಧವಾರ ಬೆಳಿಗ್ಗೆ ಫೋನ್ ಬಂದಿದೆ. ಮಾತನಾಡಲು ಕರೆದಿದ್ದಾರೆ. ಜಿಮ್ ಮಾಡಿದ ಬಳಿಕ ಬರುತ್ತೇನೆ ಎಂದು ಇಸ್ಮಾಯಿಲ್ ಹೇಳಿದ್ದಾನೆ. ಒಂದು ಗಂಟೆಯಾಗಿರಲಿಲ್ಲ. ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.
ಮೊಬೈಲ್ ಸೇರಿದಂತೆ ಜಿಮ್ ನ ಎಲೆಕ್ಟ್ರಾನಿಕ್ ವಶಕ್ಕೆ ಪಡೆದಿದ್ದಾರೆ. ಜಿಮ್ ಅನ್ನು ಸಾಲ ಮಾಡಿ ತೆರೆದಿದ್ದೇವೆ. ಹಾಗೆ ಮಾಡಿದ್ದರೆ ಕೇಸ್ ಆಗಬೇಕಿತ್ತು. ಯುವತಿಯರು ಮತ್ತು ಮಹಿಳೆಯರು ಪೊಲೀಸರಿಗೆ ದೂರು ಕೊಡಬಹುದಿತ್ತಲ್ವಾ ಎಂದು
ಪ್ರಶ್ನಿಸಿದರು.
ಆಕಾಶ್, ನಿಖಿಲ್, ರಂಜಿತ್ ಎಂಬ ಹೆಸರಿಟ್ಟುಕೊಂಡು ಯುವತಿಯರು, ಮಹಿಳೆಯರ ಜೊತೆ ಪರಿಚಯಿಸಿಕೊಂಡು ಮೋಸ ಮಾಡಿಲ್ಲ. ಟ್ರೈನರ್ ಆಗಿದ್ದಕ್ಕೆ ನಾವು ಜಿಮ್ ಹಾಕಿಕೊಟ್ಟಿದ್ದೆವು. ಒಂದೇ ಹುಡುಗಿ ಜೊತೆ ಅಫೇರ್ ಇರೋದು ನಿಜ. ಲವ್ ಜಿಹಾದ್ ಇಲ್ಲ, ಜಿಮ್ ಜಿಹಾದ್ ಇಲ್ಲ. ದುಡ್ಡಿನ ಆಸೆಗಾಗಿ ಈ ರೀತಿ ಮಾಡಿದ್ದಾರೆ. ಕೈ ಹಿಡಿದು ತಿರುಗಿಸುವುದು ಸೇರಿದಂತೆ ಒಂದೇ ತಿಂಗಳಲ್ಲಿ ಮೂರು ಫೋಟೋ, ವಿಡಿಯೋಗಳ ದೃಶ್ಯಾವಳಿಗಳನ್ನು ಆರೋಪ ಮಾಡಿದವರು ತೋರಿಸಿದ್ದಾರೆ. ಆದರೆ ಈ ವಿಡಿಯೋದಲ್ಲಿರುವುದು ಆ ಮಹಿಳೆ ಮಾತ್ರ ಎಂದು ದೂರಿದ್ದಾರೆ.
ನನ್ನ ಮಗನ ಬಾಳು ಹಾಳು ಮಾಡಿದ್ದಾಳೆ. ಆಕೆ ಮತ್ತು ಗಂಡ ಸೇರಿಕೊಂಡು ಹನಿಟ್ರ್ಯಾಪ್ ಮಾಡಿದ್ದಾರೆ. ದಾವಣಗೆರೆಯ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಉಪನ್ಯಾಸಕ ಮತ್ತು ಆತನ ಪತ್ನಿಯೇ ಈ ಕೃತ್ಯ ಎಸಗಿದ್ದಾರೆ. ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ಮಹಿಳೆಯು ಹಣ ಕೊಟ್ಟಿದ್ದಾಳೆ. ಆತ ಮತ್ತು ಆಕೆಯ ವಿಚಾರಣೆ ಪೊಲೀಸರು ನಡೆಸಲಿ. ಎರಡರಿಂದ ಮೂರು ವರ್ಷದಿಂದ ಮಹಿಳೆ ಜೊತೆಗೆ ಪುತ್ರ ಸಂಪರ್ಕದಲ್ಲಿದ್ದಾನೆ. ಜಿಮ್ ಪರಿಶೀಲಿಸಿ ಎಂದು ಹೇಳುತ್ತಿರುವವರು ಇದಕ್ಕೆ ಏನು ಹೇಳುತ್ತೀರಿ ಎಂದು ಹೇಳಿದರು.
ಮಹಿಳೆಯರು, ಯುವತಿಯರು ಸೇರಿದಂತೆ 12 ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದರಾ? ಮೊಬೈಲ್, ಡಿವೈಡರ್ ಸೇರಿದಂತೆ ಹಲವು ಸಾಕ್ಷ್ಯಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನನ್ನ ಮಗನ ಜೊತೆ ಮಹಿಳೆಯು ಮಾತನಾಡಿರುವ ಆಡಿಯೋ, ಮೊಬೈಲ್ ಮೆಸೇಜ್ ಗಳು ನನ್ನ ಬಳಿ ಇವೆ. ಟಿವಿ, ಮೊಬೈಲ್ ನಲ್ಲಿ ಬರುವುದನ್ನು ನೋಡಿ ಇಸ್ಮಾಯಿಲ್ ಎಲ್ಲೋ ಹೋಗಿದ್ದಾನೆ ಎಂದು ತಿಳಿಸಿದರು.
ನಾಳೆ ಜಿಮ್ ಗೆ ಯಾರಾದರೂ ಬರುತ್ತಾರಾ? ನನ್ನ ಮಗನ ಜೀವನ ಏನಾಗಬೇಕು? ಒಂದೇ ಮಹಿಳೆಯಿಂದಲೇ ಇಷ್ಟೆಲ್ಲಾ ಆಗಿದ್ದು. ಮೊದಲನೇ ಮದುವೆಯಾಗಿದ್ದಾಗ ಮೂರೇ ತಿಂಗಳಿಗೆ ಸೊಸೆ ಹೋದಳು. ಎರಡನೇ ಮದುವೆ ಮಾಡುವ ಸಲುವಾಗಿ ಈಕೆಗೆ ನಾಲ್ಕು ಲಕ್ಷ ರೂಪಾಯಿ ಕೊಟ್ಟಿದ್ದೇವೆ. 15 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಸಹವಾಸಕ್ಕೆ ಬರಲ್ಲ ಎಂದು ಹೇಳಿದವಳು ಮತ್ತೆ ಬೆನ್ನು ಹತ್ತಿದ್ದಾಳೆ. ಎಲ್ಲಿ ಹೋಗಿದ್ದಾಳೆ ಎಂಬುದು ಗೊತ್ತಿಲ್ಲ. ಪೊಲೀಸರು ಇವರನ್ನು ವಿಚಾರಣೆ ನಡೆಸಿದರೆ ಸತ್ಯಾಸತ್ಯತೆ ಹೊರಗಡೆ ಬರಲಿದೆ ಎಂದು ಹೇಳಿದರು.
ವಿಡಿಯೋಗಳು, ವಾಯ್ಸ್ ಮೆಸೇಜ್ ಕೇಳಿದರೆ ಆಶ್ಚರ್ಯ ಆಗುತ್ತದೆ. ನಾಲ್ವರ ಜೊತೆ ಹೆಂಡತಿ ಒಳಗೆ ಕಳುಹಿಸಿ ಹೊರಗಡೆ ಗಂಡ ನಿಂತಿರುತ್ತಾನೆ. ಜಿಮ್ ಬಳಿ ಬಂದು ಬೆದರಿಕೆ ಹಾಕುತ್ತಿದ್ದಳು. ಕುಡಿದು ನಾನು ಮಲಗಿದ್ದೇನೆ ಎನ್ನುವ ಮಹಿಳೆ ನನ್ನ ಪುತ್ರನ ಜೀವನವನ್ನೇ ಹಾಳು ಮಾಡಿದಳು. ಇದಕ್ಕೊಂದು ಬಣ್ಣ ಹಚ್ಚಿ 13 ಹುಡುಗಿಯರಿಗೆ ಹಾಳು ಮಾಡಿದ್ದಾರೆ ಎಂಬ ಆರೋಪ ಮಾಡುತ್ತಾಳೆ. ಕಾಲೇಜು ಬಿಟ್ಟಾಗಿನಿಂದ ಜಿಮ್ ಮಾಡುತ್ತಿದ್ದಾನೆ. ಸಾಲ ಮಾಡಿ ಜಿಮ್ ಆರಂಭಿಸಿದ್ದು, ಇಂಥ ಕೆಲಸ ಮಾಡಿದ್ದಾರಲ್ವಾ ಏನು ಮಾಡಬೇಕು. ನಾನು ಮತ್ತು ನನ್ನ ಪತಿಗೆ ಬಿಪಿ, ಶುಗರ್ ಇದೆ. ನಾವು ಸುಳ್ಳು ಹೇಳುತ್ತಿಲ್ಲ. ಶುಕ್ರವಾರದಿಂದ ನೆಮ್ಮದಿ ಇಲ್ಲದಂತಾಗಿದೆ. ಮನೆಮಂದಿ ವಿಷ ಕುಡಿದು ಸಾಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದವರು ಬಂದು ದೂರು ಕೊಡಲಿ. ನನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ನಾವು ಬೇಡ ಎನ್ನೋಲ್ಲ ಎಂದು ತಿಳಿಸಿದರು.





Leave a comment