ದಾವಣಗೆರೆ: ಜಿಲ್ಲೆಯಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿರುವುದರಿಂದ ಇಡೀ ಕೃಷಿ ವಲಯ ತಲ್ಲಣಗೊಂಡಿದೆ. ಅನ್ನದಾತನ ಬದುಕಿನ ಎರಡು ಕಣ್ಣುಗಳಾದ ಮಣ್ಣು ಮತ್ತು ಜೋಡೆತ್ತುಗಳನ್ನು ಪೂಜಿಸುವ ಪವಿತ್ರ ‘ಮಣ್ಣೆತ್ತಿನ ಅಮಾವಾಸ್ಯೆ’ಯ ದಿನದಂದೇ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ ನಿನೋ ಪ್ರಭಾವದಿಂದಾಗಿ ಮುಂಗಾರು ಕೈಕೊಟ್ಟಿದ್ದು, ಜಿಲ್ಲೆಯ ಜೀವನಾಡಿಯಾದ ಭದ್ರಾ ಜಲಾಶಯದ ಒಳಹರಿವು ಸಂಪೂರ್ಣವಾಗಿ ಕ್ಷೀಣಿಸಿದೆ.
ಕೇವಲ 147 ಅಡಿಗೆ ಕುಸಿದ ಭದ್ರಾ ಮಟ್ಟ!
ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯೊಂದರಲ್ಲೇ ಸುಮಾರು 1.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಭದ್ರಾ ಜಲಾಶಯದ ನೀರಿನ ಮಟ್ಟ ಕೇವಲ 147 ಅಡಿ 6 ಇಂಚು ತಲುಪಿದ್ದು, ಒಳಹರಿವು ಕೇವಲ 1702 ಕ್ಯೂಸೆಕ್ಸ್‌ಗೆ ಕುಸಿದಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜುಲೈ ತಿಂಗಳಿನಲ್ಲೇ ಬೇಸಿಗೆಯ ವಾತಾವರಣ ಗೋಚರಿಸುತ್ತಿದೆ. ಇದರಿಂದಾಗಿ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ಕಣ್ಣೆದುರೇ ಒಣಗುತ್ತಿದ್ದು, ಅನ್ನದಾತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾನೆ.
ಜನಪ್ರತಿನಿಧಿಗಳ ವಿರುದ್ಧ ಅನ್ನದಾತನ ಆಕ್ರೋಶ
ಜಿಲ್ಲೆಯ ರೈತರು ಇಷ್ಟೊಂದು ತೀವ್ರ ಆರ್ಥಿಕ ಮತ್ತು ಮಾನಸಿಕ ಸಂಕಷ್ಟ ಎದುರಿಸುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಸ್ಥಳೀಯ ಶಾಸಕರು ಸಚಿವ ಸ್ಥಾನದ ಪೈಪೋಟಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ” ಎಂದು ನೊಂದ ರೈತರು ಆತಂಕ ಹೊರಹಾಕಿದ್ದಾರೆ.
ರೈತರ ಪ್ರಮುಖ 3 ಪ್ರಮುಖ ಬೇಡಿಕೆಗಳು ಇಲ್ಲಿವೆ:
ತುಂಗಾ ನದಿಯಿಂದ ನೀರು ಪೂರೈಕೆ: ಭದ್ರಾ ಮೇಲ್ದಂಡೆ ಯೋಜನೆಯಂತೆ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿ.ಎಂ.ಸಿ ನೀರನ್ನು ಲಿಫ್ಟ್ ಮೂಲಕ ಎತ್ತಿ ಪೂರೈಕೆ ಮಾಡಬೇಕು. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ ದಾವಣಗೆರೆ ಜಿಲ್ಲೆಯ ನೀರಿನ ಕೊರತೆ ನೀಗಿಸಬಹುದು.
ಮೋಡ ಬಿತ್ತನೆಗೆ ಚಾಲನೆ: ಮಳೆ ಕೊರತೆ ಎದುರಿಸುತ್ತಿರುವ ಭಾಗಗಳಲ್ಲಿ ಸರ್ಕಾರ ತಕ್ಷಣವೇ ಮೋಡ ಬಿತ್ತನೆ ಪ್ರಕ್ರಿಯೆ ಕೈಗೊಳ್ಳಬೇಕು.
ಬರಪೀಡಿತ ಜಿಲ್ಲೆ ಘೋಷಣೆ: ದಾವಣಗೆರೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಯುದ್ಧೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಹಾಗೂ ರೈತರಿಗೆ ಆರ್ಥಿಕ ನೆರವು ನೀಡಲು ಪ್ರಾರಂಭಿಸಬೇಕು ಎಂದು ಜಿಲ್ಲಾ ರೈತರ ಒಕ್ಕೂಟದ ಕೊಳೇನಹಳ್ಳಿ ಸತೀಶ್, ಶಾಮನೂರು ಲಿಂಗರಾಜ್, ನಾಗೇಶ್ವರ ರಾವ್ ಮತ್ತಿತರ ಮುಖಂಡರುಆಗ್ರಹಿಸಿದ್ದಾರೆ.
- Bhadra Dam water level
- Bhadra Upper Canal Project
- Davanagere drought relief
- Davanagere farmers crisis
- El Nino effect Karnataka
- Karnataka monsoon deficit
- Paddy cultivation Davanagere
- Tunga to Bhadra water lift
- ಎಲ್ ನಿನೋ ಪ್ರಭಾವ ಕರ್ನಾಟಕ
- ತುಂಗಾ ನದಿ ನೀರು
- ದಾವಣಗೆರೆ ಕೃಷಿ ಸಂಕಷ್ಟ
- ದಾವಣಗೆರೆ ಬರಗಾಲ ಘೋಷಣೆ
- ಭತ್ತದ ನಾಟಿ ಕುಂಠಿತ
- ಭದ್ರಾ ಜಲಾಶಯದ ನೀರಿನ ಮಟ್ಟ
- ಭದ್ರಾ ಮೇಲ್ದಂಡೆ ಯೋಜನೆ
- ಮಣ್ಣೆತ್ತಿನ ಅಮಾವಾಸ್ಯೆ ರೈತರ ಕಣ್ಣೀರು






Leave a comment