SUDDIKSHANA KANNADA NEWS/ DAVANAGERE/ DATE:05-10-2024
ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯು ವೈಭವ, ಸಂಭ್ರಮದ ಅಲೆ ಸೃಷ್ಟಿಸಿತ್ತು. ಎಲ್ಲಿ ನೋಡಿದರೂ ಜನವೋ ಜನ. ಡಿಜೆ ಹಾಡಿಗೆ ಡ್ಯಾನ್ಸ್ ಮಾಡಿದ ಲಕ್ಷಾಂತರ ಯುವಕರ ನೃತ್ಯ ನೋಡಿ ಜನರು ಖುಷಿಪಟ್ಟರು. ಗಣೇಶ ಮೂರ್ತಿ ನೋಡಲು ಮುಗಿಬಿದ್ದ ಜನರು, ಗಣೇಶ ನೋಡುತ್ತಿದ್ದಂತೆ ಕೈಮುಗಿದು ನಮಸ್ಕರಿಸಿದರು.
ಬೆಣ್ಣೆನಗರಿ ಎಂದೇ ಖ್ಯಾತಿಯಾಗಿರುವ ದಾವಣಗೆರೆ ಇಂದು ಅಕ್ಷರಕ್ಷಃ ಕೇಸರಿಮಯವಾಗಿತ್ತು. ಯುವಕರು ಕೇಸರಿ ಶಾಲು ಧರಿಸಿ ನೃತ್ಯ ಮಾಡಿದರೆ, ಕೇಸರಿ ಸಾಮ್ರಾಜ್ಯವೇ ನಿರ್ಮಾಣವಾದಂತಿತ್ತು. ಬಂಟಿಗ್ಸ್ ಗಳು ರಾರಾಜಿಸಿದವು. ಯುವಕರ ಡ್ಯಾನ್ಸ್ ಮೆರವಣಿಗೆಗೆ ರಂಗು ತಂದಿತು.
ಬೆಳಿಗ್ಗೆ ಹೈಸ್ಕೂಲ್ ಮೈದಾನದಿಂದ ಹೊರಟ ಮೆರವಣಿಗೆಗೆ ಸಾವಿರಾರು ಜನರು ಬಂದಿದ್ದರು. ಮೆರವಣಿಗೆ ಶುರುವಾಗುತ್ತಿದ್ದಂತೆ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು. ದಾವಣಗೆರೆ ಜಿಲ್ಲೆಯ ಜನರು ಮಾತ್ರವಲ್ಲ,
ಬೇರೆ ಬೇರೆ ಜಿಲ್ಲೆಗಳಿಂದಲೂ ಯುವಕರು ಆಗಮಿಸಿದ್ದರು. ಗಣೇಶ ಮೆರವಣಿಗೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಜನರು ಸಾಕ್ಷಿಯಾದರು. ಗಣೇಶನ ಮೆರವಣಿಗೆಗೆ ಕೇಸರಿ ನಾಯಕರು ರಂಗು ತಂದರು. ಡಿಜೆ ಹಾಡು, ಬೀಟ್ ಗೆ ಹೆಜ್ಜೆ ಹಾಕಿ
ಯುವಕರಿಗೆ ಪ್ರೋತ್ಸಾಹ ನೀಡಿದರು.
ದಾವಣಗೆರೆಯ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಪ್ರಯುಕ್ತ ಪ್ರಮುಖ ರಸ್ತೆಗಳು, ಸರ್ಕಲ್ ಗಳು ಕೇಸರಿಯಿಂದ ಕಂಗೊಳಿಸಿದವು. ವಿಘ್ನ ನಿವಾರಕನ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಹದ್ದಿನ ಕಣ್ಣು
ಇಟ್ಟಿತ್ತು. ಮುಂಜಾಗ್ರತಾ ಕ್ರಮಗಳ ಜೊತೆಗೆ ಹದ್ದಿನ ಕಣ್ಣಿಟ್ಟಿತ್ತು. ಕುಟುಂಬ ಸಮೇತರಾಗಿ ಜನರು ಬಂದು ಗಣೇಶನ ಮೆರವಣಿಗೆ ವೀಕ್ಷಿಸಿ ಖುಷಿಪಟ್ಟರು.
ದಾವಣಗೆರೆಯ ಬೇತೂರು ರಸ್ತೆಯಲ್ಲಿ ನಡೆದಿದ್ದ ಗಲಾಟೆ, ದೊಂಬಿ ಹಿನ್ನೆಲೆಯಲ್ಲಿ ಸಣ್ಣ ಅಹಿತಕರ ಘಟನೆಯಾಗದಂತೆ ಖಾಕಿ ಪಡೆ ಕಟ್ಟೆಚ್ಚರ ವಹಿಸಿತ್ತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಖಾಕಿ ಕಾವಲು ಇತ್ತು. ಪೊಲೀಸರು ಅಚ್ಚುಕಟ್ಟಾಗಿ
ಕರ್ತವ್ಯ ನಿರ್ವಹಿಸಿದರು. ಟ್ರಾಫಿಕ್ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಿದರು. ಕೆಲ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದರು.
ಕೋಮುದಳ್ಳುರಿಯಿಂದ ನಲುಗಿದ್ದ ದಾವಣಗೆರೆಯಲ್ಲಿ ಶಾಂತಿ ನೆಲೆಸಿದ್ದರೂ, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಬೀದಿ, ಬೀದಿಗಳಲ್ಲಿ, ವೃತ್ತ, ವೃತ್ತಗಳಲ್ಲಿ ಕೇಸರಿ ಶಾಲು ಧರಿಸಿದ್ದ ಯುವಕರ ಡ್ಯಾನ್ಸ್
ಸೂಪರ್.
ಡಿಜೆ ವಿಶೇಷ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಇಲಾಖೆಯು ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಡಿಜೆ ಬಳಸಲು ಅನುಮತಿ ನೀಡಲಾಗಿತ್ತು. ನಗರದ ಹೈಸ್ಕೂಲ್ ಮೈದಾನದಿಂದ ಆರಂಭವಾದ ಮೆರವಣಿಗೆ ಎವಿಕೆ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆಯಲ್ಲಿ ಹೆಚ್ಚಿನ ಕಳೆಗಟ್ಟಿತ್ತು. ಸಾವಿರಾರು ಜನರು ಒಂದೊಂದು ಡಿಜೆ ಬಳಿ ನೃತ್ಯ ಮಾಡುವಾಗಲಂತೂ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು.