ದಾವಣಗೆರೆ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ತೀವ್ರವಾಗಿ ಕುಸಿದಿದೆ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 11.89 ಮೀಟರ್ ಇದ್ದು ಪ್ರಸಕ್ತ ಅದು 2.29 ಮೀಟರ್ ಗಳಷ್ಟು ಕುಸಿದಿದೆ.
ಜಗಳೂರು ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 4.89 ಮೀಟರ್‌ಗಳಷ್ಟು ಅಂತರ್ಜಲ ಮಟ್ಟ ಕುಸಿದಿರುವುದು ಆತಂಕಕಾರಿ ಸಂಗತಿಯಾಗಿದೆ. ಕುಂದುವಾಡ ಕೆರೆಗೆ ಮುಂದಿನ 2-3 ತಿಂಗಳು ನೀರು ಬರುವ ಸಾಧ್ಯತೆ ಇಲ್ಲದಿರುವುದರಿಂದ ಲಭ್ಯವಿರುವ ನೀರನ್ನೇ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಾಗಿದೆ.
ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ, ನೆಲ-ಜಲ, ಪರಿಸರ ವೃದ್ಧಿಸಲು, ಮಳೆ ನೀರು ಕೊಯ್ಲಿ, ಸಸಿ ನೆಡುವುದು ಮತ್ತು ಜಿಲ್ಲಾ ಕೆರೆಗಳ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಸೂಚನೆಗಳನ್ನು ನೀಡಿದ್ದಾರೆ.
ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಕರೆ:
ರೈತರು ಪ್ರತಿವರ್ಷ ಮೆಕ್ಕೆಜೋಳವನ್ನೇ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಮತ್ತು ಯೂರಿಯಾ ಸೇರಿದಂತೆ ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಆದ್ದರಿಂದ ರೈತರು ಪರ್ಯಾಯ ಬೆಳೆಗಳಾದ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಮಳೆ ನೀರು ಕೊಯ್ಲು ಕಡ್ಡಾಯ:
ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಂಪೂರ್ಣ ಕಟ್ಟಡದಲ್ಲಿ ಈಗಾಗಲೇ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಇದೇ ಮಾದರಿಯನ್ನು ಜಿಲ್ಲೆಯ ಎಲ್ಲಾ ಇಲಾಖೆಗಳು, ಅಧಿಕಾರಿಗಳು ತಮ್ಮ ಸ್ವಂತ ಮನೆಗಳು, ಶಾಲಾ-ಕಾಲೇಜುಗಳು, ವಸತಿನಿಲಯಗಳು, ಕಲ್ಯಾಣ ಮಂಟಪ ಮತ್ತು ಅತಿಥಿಗೃಹಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದೇವರಾಜ ಅರಸು ಬಡಾವಣೆಯ ರೈಲ್ವೇ ಹಳಿ ಪಕ್ಕದ ಬಫರ್ ವಲಯದಲ್ಲಿದ್ದ ಕಪ್ಪು ಚುಕ್ಕೆ ಪ್ರದೇಶವನ್ನು ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರು ಸೇರಿ ಸುಂದರ ಉದ್ಯಾನವನವಾಗಿ ಪರಿವರ್ತಿಸಿರುವುದನ್ನು ಶ್ಲಾಘಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಇಂತಹ ಜಾಗೃತಿ ನಡೆ ಮಾದರಿಯಾಗಿದೆ ಎಂದರು.





Leave a comment