Home ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಅತ್ಯಂತ ಶ್ರೇಷ್ಠ ವೃತ್ತಿ, ಸಮಾಜದ ಪ್ರಗತಿಗೆ ಮೂಲಾಧಾರ”: ಡಾ. ಕೆ.ಎಸ್. ಬಾಬು ನಾರಾಯಣ ಪ್ರತಿಪಾದನೆ
ದಾವಣಗೆರೆಬೆಂಗಳೂರು

ಸಿವಿಲ್ ಇಂಜಿನಿಯರಿಂಗ್ ಅತ್ಯಂತ ಶ್ರೇಷ್ಠ ವೃತ್ತಿ, ಸಮಾಜದ ಪ್ರಗತಿಗೆ ಮೂಲಾಧಾರ”: ಡಾ. ಕೆ.ಎಸ್. ಬಾಬು ನಾರಾಯಣ ಪ್ರತಿಪಾದನೆ

Share
ಇಂಜಿನಿಯರಿಂಗ್
Share

ದಾವಣಗೆರೆ: “ಇಂಜಿನಿಯರಿಂಗ್ ಕ್ಷೇತ್ರವು ಜಿಜ್ಞಾಸೆಯ ಮನಸ್ಸಿಗೆ ಒಂದು ದೊಡ್ಡ ಸವಾಲಾಗಿದೆ. ಯಾವುದೇ ಸಮಾಜದ ಅಭಿವೃದ್ಧಿಗೆ ಸಿವಿಲ್ ಇಂಜಿನಿಯರ್‌ಗಳ ಕೊಡುಗೆ ಅಪಾರವಾಗಿದ್ದು, ಇದು ಅತ್ಯಂತ ಶ್ರೇಷ್ಠ ಹಾಗೂ ಗೌರವಾನ್ವಿತ ವೃತ್ತಿಯಾಗಿದೆ” ಎಂದು ಎನ್‌ಐಟಿಕೆ ಸುರತ್ಕಲ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿಶಿಷ್ಟ ನಿವೃತ್ತ ಪ್ರಾಧ್ಯಾಪಕರು, ಖ್ಯಾತ ರಚನಾ ಸಲಹೆಗಾರ ಡಾ. ಕೆ.ಎಸ್. ಬಾಬು ನಾರಾಯಣ ಪ್ರತಿಪಾದಿಸಿದರು.

ಇಲ್ಲಿನ ಜಿಎಂ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ GM Scientific Innovation & Research LLP ಸಹಯೋಗದಲ್ಲಿ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದ ಎ.ವಿ. ಸಭಾಂಗಣದಲ್ಲಿ “ಮುಂದಿನ ತಲೆಮಾರಿನ ಮೂಲಸೌಕರ್ಯ: ಕಾಂಕ್ರೀಟ್ ರಚನೆಗಳು, ಪರಿಸರ ಸುಸ್ಥಿರತೆ ಮತ್ತು ಸಾರಿಗೆ ಸಂಪರ್ಕತೆ (NICET–2026)” ಎಂಬ ವಿಷಯ ಕುರಿತು ಜುಲೈ 30 ರಿಂದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ -2026 ಅನ್ನು ಉದ್ಘಾಟಿಸಿ ಮಾತನಾಡಿದರು.

ನಿರ್ಮಾಣ ರಂಗವು ಅತ್ಯಂತ ದೊಡ್ಡ ಉದ್ಯೋಗ ಸೃಷ್ಟಿ ಕ್ಷೇತ್ರವಾಗಿದ್ದು, ಈ ಕೋರ್ ತಂತ್ರಜ್ಞಾನ ವಿಭಾಗಗಳು ಇಂದು ಹೊಸ ರೂಪದೊಂದಿಗೆ ಮರುಜೀವ ಪಡೆಯುತ್ತಿವೆ. ಆದ್ದರಿಂದ ಇಂಜಿನಿಯರ್‌ಗಳು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಕರೆ ನೀಡಿದರು.

“ಇಂಜಿನಿಯರ್‌ಗಳು ಕೇವಲ ತಾಂತ್ರಿಕ ನಿಪುಣರಷ್ಟೇ ಅಲ್ಲ, ಅವರು ವಿಜ್ಞಾನಿ ಮತ್ತು ಕಲಾವಿದ ಇಬ್ಬರೂ ಹೌದು. ವಿಜ್ಞಾನ ಎಂಬುದು ವಿಷಯವನ್ನು ತಿಳಿದುಕೊಳ್ಳುವುದಾದರೆ, ಕಲೆ ಎಂಬುದು ಅದನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸುತ್ತದೆ. ಪ್ರತಿಯೊಬ್ಬ ಸಮಾಜಕ್ಕೂ ಇಂಜಿನಿಯರ್‌ಗಳ ಅಗತ್ಯವಿದೆ. ವೈದ್ಯರು ಅಥವಾ ವಕೀಲರ ಬಳಿಗೆ ಜನರು ಕಷ್ಟ ಅಥವಾ ಸಮಸ್ಯೆಯಲ್ಲಿದ್ದಾಗ ಹೋಗುತ್ತಾರೆ. ಆದರೆ, ಒಬ್ಬ ಇಂಜಿನಿಯರ್ ಬಳಿಗೆ ಸಮಾಜವು ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿದ್ದಾಗ ಹೋಗುತ್ತದೆ. ಆದ್ದರಿಂದ ಇಂಜಿನಿಯರ್‌ಗಳಿಂದಲೇ ಸಮಾಜ ಪ್ರಗತಿ ಹೊಂದುತ್ತದೆ,” ಎಂದು ವಿವರಿಸಿದರು.

“ಅಮೆರಿಕದಂತಹ ದೇಶಗಳು ತಮ್ಮ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮೂಲಕ ಆರ್ಥಿಕತೆಯನ್ನು ಉತ್ತೇಜಿಸಿದವು. ಚೀನಾ ಇಂದು ಬೆಳೆದು ನಿಂತಿರುವುದಕ್ಕೂ ಮೂಲಸೌಕರ್ಯದಲ್ಲಿ ಮಾಡಿರುವ ಬೃಹತ್ ಹೂಡಿಕೆಯೇ ಕಾರಣ. ನಾವು ಬೆಳಿಗ್ಗೆ ಎದ್ದ ತಕ್ಷಣ ಬಳಸುವ ಕುಡಿಯುವ ನೀರು, ವಾಸಿಸುವ ಮನೆಗಳು, ಸಂಚರಿಸುವ ರಸ್ತೆಗಳು, ಮೇಲ್ಸೇತುವೆಗಳು, ಸುರಂಗಗಳು — ಹೀಗೆ ಪ್ರತಿಯೊಂದರ ಹಿಂದೆ ಸಿವಿಲ್ ಇಂಜಿನಿಯರ್‌ಗಳ ಶ್ರಮವಿದೆ. ವಿಶ್ವದಲ್ಲೇ ನೀರಿನ ನಂತರ ಮಾನವ ಅತಿ ಹೆಚ್ಚು ಬಳಸುವ ವಸ್ತುವೆಂದರೆ ಅದು ಸಿಮೆಂಟ್. ಇದು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ವ್ಯಾಪ್ತಿಯನ್ನು ತೋರಿಸುತ್ತದೆ,” ಎಂದು ಉದಾಹರಿಸಿದರು.

ಈ ಕಾಲೇಜಿನ ತಮ್ಮ ಹಳೆಯ ಶೈಕ್ಷಣಿಕ ದಿನಗಳ ನೆನಪುಗಳನ್ನು ಮೆಲಕು ಹಾಕುತ್ತಾ, “ಇಂದು ಕ್ಯಾಂಪಸ್ ವಿಶಾಲವಾಗಿ ಬೆಳೆದಿದ್ದು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅದ್ಭುತವಾಗಿ ಮಾರ್ಪಟ್ಟಿದೆ. ಈ ಮಹತ್ತರ ಬದಲಾವಣೆಗೆ ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆಗಳು” ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರು, “2047ರ ವೇಳೆಗೆ ಭಾರತವನ್ನು 30 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಬಲವಾದ ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ರೂಪಿಸುವುದು ನಮ್ಮ ದೇಶದ ಹೆಗ್ಗುರಿಯಾಗಿದೆ. ಈ ಗುರಿ ತಲುಪಲು ಮೂಲಸೌಕರ್ಯ (Infrastructure) ಅಭಿವೃದ್ಧಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

“ಕಳೆದ 10-15 ವರ್ಷಗಳಲ್ಲಿ ಭಾರತದಲ್ಲಿ ವಿಮಾನ ನಿಲ್ದಾಣಗಳು, ರೈಲ್ವೆ ವ್ಯವಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಜಾಲವು ಅಭೂತಪೂರ್ವ ರೀತಿಯಲ್ಲಿ ಸುಧಾರಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣದ ಸಮಯ ಈ ಹಿಂದೆ 3.5 ರಿಂದ 4 ಗಂಟೆ ತೆಗೆದುಕೊಳ್ಳುತ್ತಿತ್ತು. ಆದರೆ ಆಧುನಿಕ ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದಾಗಿ ಪ್ರಯಾಣದ ಸಮಯ 75 ರಿಂದ 90 ನಿಮಿಷಗಳಿಗೆ ಇಳಿಕೆಯಾಗಿದೆ. ಇದು ಕೈಗಾರಿಕಾ ಹಾಗೂ ವಾಣಿಜ್ಯ ಕ್ಷೇತ್ರದ ಬೆಳವಣಿಗೆಗೆ ಶಕ್ತಿ ನೀಡಿದೆ” ಎಂದರು.

“ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಿಂದ ಇಂಧನ ಉಳಿತಾಯ ಹಾಗೂ ಕಾರ್ಬನ್ ಡೈಆಕ್ಸೈಡ್ ಹೊರ ಸೂಸುವಿಕೆ ಕಡಿಮೆಯಾಗುತ್ತಿದೆಯಾದರೂ, ಕಾಡುಗಳ ನಾಶ ಹಾಗೂ ಕೃಷಿ ಭೂಮಿಯ ಸ್ವಾಧೀನದಿಂದಾಗಿ ಪರಿಸರ ಸಮತೋಲನ ತಪ್ಪುತ್ತಿದೆ. ಮಾನವ ಮತ್ತು ಚಿರತೆಗಳಂತಹ ವನ್ಯಜೀವಿಗಳ ಸಂಘರ್ಷ ಹೆಚ್ಚುತ್ತಿರುವುದಕ್ಕೆ ನಾವು ಕಾಡುಗಳ ವ್ಯಾಪ್ತಿಯನ್ನು ಕುಗ್ಗಿಸುತ್ತಿರುವುದೇ ಮುಖ್ಯ ಕಾರಣ. ಕೇವಲ ತಾಂತ್ರಿಕ ಸವಾಲುಗಳನ್ನು ಪರಿಹರಿಸುವುದು ಮಾತ್ರವಲ್ಲದೆ, ಪರಿಸರ ಸೌಹಾರ್ದಯುತವಾದ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳುವುದು 21ನೇ ಶತಮಾನದ ತುರ್ತು ಅಗತ್ಯವಾಗಿದೆ” ಎಂದು ಕರೆ ನೀಡಿದರು.

ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೇವಲ ಬಲವಾದ ಕಟ್ಟಡ ಅಥವಾ ಸೇತುವೆಗಳನ್ನು ನಿರ್ಮಿಸುವುದಷ್ಟೇ ಅಲ್ಲದೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಮತ್ತು ಸೆನ್ಸಾರ್ ತಂತ್ರಜ್ಞಾನಗಳನ್ನು ಬಳಸಿ ಅವುಗಳ ಸುರಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು ಅಗತ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಸಮಗ್ರ ಹಾಗೂ ಪರಿಸರ ಸ್ನೇಹಿ ಆಲೋಚನೆಗಳನ್ನು ಬೆಳೆಸುವಂತಹ ‘ಸಮೃದ್ಧ ಶಿಕ್ಷಣ’ (Flourishing Education) ಜಾರಿಯಾಗಬೇಕು ಎಂದು ತಿಳಿಸಿದರು.

ಈ ಸಮ್ಮೇಳನದ ನೇತೃತ್ವ ವಹಿಸಿರುವ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಭರತರಾಜ್ ಇಟಿಗಿ ವೈ.ಬಿ ಪ್ರಾಸ್ತವಿಕವಾಗಿ ಮಾತನಾಡಿ, ಅಕಾಡೆಮಿಷಿಯನ್‌ಗಳು, ಸಂಶೋಧಕರು, ಕೈಗಾರಿಕಾ ತಜ್ಞರು ಮತ್ತು ವಿದ್ಯಾರ್ಥಿಗಳು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ನೂತನ ಆಲೋಚನೆಗಳನ್ನು ಹಂಚಿಕೊಳ್ಳಲು, ಸಂಶೋಧನೆಗಳನ್ನು ಪ್ರಸ್ತುತಪಡಿಸಲು ಹಾಗೂ ಹೊಸ ಅಭಿವೃದ್ಧಿ ಬೆಳವಣಿಗೆಗಳ ಕುರಿತು ಚರ್ಚಿಸಲು ಸೂಕ್ತ ವೇದಿಕೆ ಕಲ್ಪಿಸುವುದು ಈ ಸಮಾವೇಶದ ಮುಖ್ಯ ಉದ್ದೇಶ. ಈ ಸಮಾವೇಶವು ಸುಸ್ಥಿರ ಮೂಲಸೌಕರ್ಯ (Sustainable Infrastructure), ಮುಂದುವರಿದ ಕಾಂಕ್ರೀಟ್ ತಂತ್ರಜ್ಞಾನ, ಪರಿಸರ ಇಂಜಿನಿಯರಿಂಗ್, ಸಾರಿಗೆ ಸಂಪರ್ಕ, ಜಿಯೋಟೆಕ್ನಿಕಲ್ ಇಂಜಿನಿಯರಿಂಗ್, ಜಲಸಂಪನ್ಮೂಲ ಮತ್ತು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ವಿಷಯಗಳ ಮೇಲೆ ಪ್ರಮುಖವಾಗಿ ಗಮನ ಹರಿಸಲಿದೆ. ವಿವಿಧ ಶಿಕ್ಷಣ ಸಂಸ್ಥೆಗಳ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ತಜ್ಞರಿಂದ 40ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಸ್ವೀಕೃತಗೊಂಡಿದ್ದವು. ತಾಂತ್ರಿಕ ಪರಿಶೀಲನಾ ಪ್ರಕ್ರಿಯೆಯ ನಂತರ ಗುಣಮಟ್ಟದ ಆಧಾರದ ಮೇಲೆ 30 ಅತ್ಯುತ್ತಮ ಪ್ರಬಂಧಗಳನ್ನು ಮೂರು ತಾಂತ್ರಿಕ ಗೋಷ್ಠಿಗಳಲ್ಲಿ ಪ್ರಸ್ತುತಪಡಿಸಲು ಆಯ್ಕೆ ಮಾಡಲಾಗಿದೆ. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಪ್ರಮುಖ ಉಪನ್ಯಾಸಗಳು, ತಾಂತ್ರಿಕ ಪ್ರಬಂಧಗಳ ಪ್ರಸ್ತುತಿ, ಸಂಶೋಧನಾ ಚರ್ಚೆಗಳು ಹಾಗೂ ಶೈಕ್ಷಣಿಕ ನೆಟ್‌ವರ್ಕಿಂಗ್ ಅವಕಾಶಗಳು ಇರಲಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಎಂಯು ಸಹ ಉಪ ಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್, ಸಂಶೋಧನಾ ಸಲಹೆಗಾರರಾದ ಡಾ. ಸಿ.ಎಸ್. ರಮೇಶ್, ಸ್ಕೂಲ್ ಆಫ್ ಇಂಜಿನಿಯರಿಂಗ್ ನಿರ್ದೇಶಕರಾದ ಡಾ. ಪ್ರವೀಣ್ ಜೆ. ಹಾಗೂ ಸಂಶೋಧನಾ ಮತ್ತು ನ್ಯಾವಿನ್ಯತೆ ಸಹ ಡೀನ್ ಡಾ. ಸ್ವರೂಪ್ ಕೆ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರುಗಳಾದ ಡಾ. ಬಿ.ಕೆ. ವರುಣ್, ಡಾ. ಕಿರಣ್ ಕುಮಾರ್ ಎಚ್.ಎಸ್ ಸೇರಿದಂತೆ ವಿದ್ಯಾರ್ಥಿಗಳು, ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *