Home ಕ್ರೈಂ ನ್ಯೂಸ್ ದಾವಣಗೆರೆ ಶಕ್ತಿದೇವತೆ ದುರ್ಗಾಂಬಿಕೆ ತಾಯಿ ಮೈಮೇಲಿದ್ದ ಒಡವೆ ಕದ್ದು ಕರಗಿಸಿದ ಪೂಜಾರಿ ಮತ್ತವನ ಸ್ನೇಹಿತ: ಧರ್ಮದರ್ಶಿ ಹೆಚ್. ಗೋಣಿಪ್ಪ ದೂರಿನನ್ವಯ ಕೇಸ್, ಸ್ಫೋಟಕ ವಿಚಾರ ಬಯಲು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಶಕ್ತಿದೇವತೆ ದುರ್ಗಾಂಬಿಕೆ ತಾಯಿ ಮೈಮೇಲಿದ್ದ ಒಡವೆ ಕದ್ದು ಕರಗಿಸಿದ ಪೂಜಾರಿ ಮತ್ತವನ ಸ್ನೇಹಿತ: ಧರ್ಮದರ್ಶಿ ಹೆಚ್. ಗೋಣಿಪ್ಪ ದೂರಿನನ್ವಯ ಕೇಸ್, ಸ್ಫೋಟಕ ವಿಚಾರ ಬಯಲು!

Share
ದಾವಣಗೆರೆ
Share

ದಾವಣಗೆರೆ: ನಗರದ ಶ್ರದ್ಧಾಭಕ್ತಿಯ ಕೇಂದ್ರ, ಪ್ರಸಿದ್ಧ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸುಮಾರು ₹28 ಲಕ್ಷ ಮೌಲ್ಯದ 200 ಗ್ರಾಂ ತೂಕದ 6 ವಿವಿಧ ಚಿನ್ನಾಭರಣಗಳು ಕಳುವಾಗಿರುವ ಕುರಿತು ನಗರದ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಧರ್ಮದರ್ಶಿ ಹೆಚ್. ಗೋಣಿಪ್ಪ ಅವರು ನೀಡಿರುವ ಲಿಖಿತ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆಯ ಹಿನ್ನೆಲೆ:

ಕುರುಬರ ಕೇರಿಯ ನಿವಾಸಿಯಾಗಿರುವ ಹಾಗೂ ಕಳೆದ 16 ವರ್ಷಗಳಿಂದ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಚ್. ಗೋಣೆಪ್ಪ ಅವರು ಜುಲೈ 29, 2026 ರಂದು ಮಧ್ಯಾಹ್ನ 2 ಗಂಟೆಗೆ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.

ದೇವಸ್ಥಾನದ ಟ್ರಸ್ಟ್ ನಿರ್ಧಾರದಂತೆ ಜನವರಿ 24, 2026 ರಿಂದ ಪೂಜಾರಿಕೆಗಾಗಿ ಆಕಾಶ್, ಹೊನ್ನಪ್ಪ, ಶ್ರೀಕಾಂತ್ ಸೇರಿದಂತೆ ಒಟ್ಟು 18 ಜನ ಪೂಜಾರಿಗಳನ್ನು ನೇಮಿಸಿಕೊಳ್ಳಲಾಗಿತ್ತು. ಪೂಜಾರಿಕೆ ವಹಿಸಿಕೊಡುವಾಗ ದೇವಸ್ಥಾನಕ್ಕೆ ಸೇರಿದ ಒಟ್ಟು 34 ಬಂಗಾರದ ಆಭರಣಗಳನ್ನು ನೀಡಲಾಗಿತ್ತು. ಆದರೆ, ಜುಲೈ 9, 2026 ರಂದು ಪರಿಶೀಲಿಸಿದಾಗ 6 ಪ್ರಮುಖ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕಳುವಾದ ಚಿನ್ನಾಭರಣಗಳ ಪಟ್ಟಿ (ಅಂದಾಜು ತೂಕ 200 ಗ್ರಾಂ, ಬೆಲೆ ₹28 ಲಕ್ಷ):

– 2 ಬಂಗಾರದ ಕಣ್ಣುಗಳು

– 59 ಕಾಸುಗಳಿರುವ ಬಂಗಾರದ ಕಾಶಿನ ಸರ (ಕೊಂಡಿ ಸಹಿತ)

– ಬಂಗಾರದ ಗುಂಡಿನ ಸರ (40 ಗುಂಡು, 2 ತಾಳಿ, 3 ಹವಳ ಹಾಗೂ 4 ಕರಿಮಣಿ ಸಹಿತ)

– ಬಂಗಾರದ ಪದಕದ ಸರ (1 ದೊಡ್ಡ ಪದಕ, 31 ಸಣ್ಣ ಪದಕ ಹಾಗೂ 32 ಸಣ್ಣ ಗುಂಡುಗಳುಳ್ಳ ಸರ)

– ಬಂಗಾರದ ನೆಲ್ಲಿಕಾಯಿ ಗುಂಡಿನ ಸರ (50 ಗುಂಡುಗಳು ಹಾಗೂ ಕರಿ ದಾರ ಸಹಿತ)

– 25 ಬೇವಿನಕಾಯಿ ಗುಂಡಿನ ಬಂಗಾರದ ಸರ (ಕೊಂಡಿ ಸಹಿತ)

ಅನುಮಾನ ನಿಜವಾಯಿತು: ಒಡವೆ ಕರಗಿಸಿ ಮಾರಾಟ!

ಆಭರಣಗಳು ಕಳುವಾದ ಬಗ್ಗೆ ಪೂಜಾರಿಗಳನ್ನು ವಿಚಾರಿಸಿದಾಗ, ಪೂಜಾರಿ ಆಕಾಶ್ ಮೇಲೆ ತೀವ್ರ ಅನುಮಾನ ವ್ಯಕ್ತವಾಗಿತ್ತು. ಆರಂಭದಲ್ಲಿ ದೇವಸ್ಥಾನದ ಮಟ್ಟದಲ್ಲೇ ಮಾತುಕತೆ ನಡೆಸಿ ಒಡವೆ ವಾಪಸ್ ಪಡೆಯುವ ಉದ್ದೇಶದಿಂದ ಜುಲೈ 12, 2026 ರಂದು ಪೊಲೀಸ್ ದೂರು ನೀಡದೆ ಸುಮ್ಮನಿರಲಾಗಿತ್ತು.

ಆದರೆ ನಂತರದ ವಿಚಾರಣೆಯಲ್ಲಿ ಪೂಜಾರಿ ಆಕಾಶ್ ದೇವಸ್ಥಾನದ ಚಿನ್ನಾಭರಣಗಳನ್ನು ಕದ್ದು, ತನ್ನ ಸ್ನೇಹಿತ ‘ಲಾಂಚಿ’ ಎಂಬಾತನಿಗೆ ನೀಡಿದ್ದು ಗೊತ್ತಾಗಿದೆ. ಲಾಂಚಿ ಎಂಬಾತ ಇದು ದೇವಸ್ಥಾನದ ಬಂಗಾರವೆಂದು ತಿಳಿದಿದ್ದರೂ ಸಹ ಚಿನ್ನ ಬೆಳ್ಳಿ ತಯಾರಕರಿಗೆ ಮಾರಾಟ ಮಾಡಿ ಆಭರಣಗಳನ್ನು ಕರಗಿಸಿರುವುದು ದೃಢಪಟ್ಟಿದೆ.

ಜನವರಿ 24 ರಿಂದ ಜುಲೈ 9 ರ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳತನ ಎಸಗಿದ ಪೂಜಾರಿ ಆಕಾಶ್, ಅದನ್ನು ಸ್ವೀಕರಿಸಿ ಕರಗಿಸಿ ಮಾರಾಟ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ದೇವಸ್ಥಾನದ ಆಭರಣಗಳನ್ನು ವಾಪಸ್ ಕೊಡಿಸಬೇಕೆಂದು ದೂರುದಾರರು ಕೋರಿದ್ದಾರೆ. ಈ ಸಂಬಂಧ ಪೊಲೀಸರು ಸಿಆರ್‌ಪಿಸಿ ಕಾಯ್ದೆಯಡಿ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *